ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಗ್ರಾಲ್‌ ಛತ್ರದಲ್ಲಿ ‘ಛತ್ರಿ’ ವೈರಲ್‌

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದಿವ್ಯಾ ನಡೆಗೆ ಕಟು ಟೀಕೆ: ನೋಟಿಸ್‌
Last Updated 21 ಅಕ್ಟೋಬರ್ 2020, 16:22 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ತಾಲ್ಲೂಕಿನ ಗುಂಗ್ರಾಲ್‌ ಛತ್ರದಲ್ಲಿ ಡ್ರೋಣ್‌ ಮೂಲಕ ಸರ್ವೇ ನಡೆಸುವಾಗ, ಬಿಸಿಲಿನಿಂದ ರಕ್ಷಣೆಗಾಗಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದಿವ್ಯಾ ಗ್ರಾಮಸ್ಥರೊಬ್ಬರಿಂದ ಛತ್ರಿ ಹಿಡಿಸಿಕೊಂಡಿದ್ದಾರೆ ಎಂಬ ವಿಡಿಯೊ ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜ್ಯೋತಿ ಆತ್ಮ ಎಂಬ ಹೆಸರಿನ ಟ್ವಿಟ್ಟರ್‌ ಖಾತೆಯಲ್ಲಿ ಗ್ರಾಮಸ್ಥರೊಬ್ಬರು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಛತ್ರಿ ಹಿಡಿದಿರುವ ಚಿತ್ರವನ್ನು ಅಪ್‌ಲೋಡ್‌ ಮಾಡಲಾಗಿದ್ದು, ಮುಖ್ಯಮಂತ್ರಿ ಸೇರಿದಂತೆ ಸಚಿವರಿಗೆ ಟ್ಯಾಗ್‌ ಮಾಡಲಾಗಿದೆ.

‘ಒಬ್ಬ ಪಿಡಿಒ ನೋಡ್ರಪ್ಪ. ಅವರ ಶೋಕಿನ. ಮಾಸ್ಕ್‌ ಇಲ್ಲ. ಅವರ ಕೈಯಲ್ಲಿ ಛತ್ರಿ ಹಿಡಿಯೋಕು ಶಕ್ತಿ ಇಲ್ಲ ಪಾಪ. ಇವರು ಬ್ರಿಟಿಷ್ ಆಡಳಿತಾಧಿಕಾರಿ. ಇಂಥವರನ್ನು ಹೇಳೋರು ಇಲ್ಲ. ಕೇಳೋರು ಇಲ್ಲ. ತನ್ನ ತಾನು ರಕ್ಷಣೆ ಮಾಡಿಕೊಳ್ಳೋಕೆ, ಛತ್ರಿ ಹಿಡ್ಕೊಳ್ಳೋಕೆ ಆಗದಿರೋರು ಇನ್ನೂ ಪೆನ್‌ ಇಡ್ಕೊಂಡು ಗ್ರಾಮ ಪಂಚಾಯಿತಿನಾ ಉದ್ಧಾರ ಮಾಡ್ತಾರಾ. ಇದೇ ನಮ್ಮ ವ್ಯವಸ್ಥೆ’ ಎಂಬ ಕಟು ಟೀಕೆಯ ಬರಹವೂ ಈ ಟ್ವೀಟ್‌ನಲ್ಲಿದೆ.

ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ. ಕಿಡಿಕಾರಿದ್ದಾರೆ.

ಮೈಸೂರು ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ಸಿ.ಆರ್.ಕೃಷ್ಣಕುಮಾರ್‌ ಟ್ವೀಟ್‌ನಲ್ಲಿಯೇ ಘಟನೆ ಸಮರ್ಥಿಸಿಕೊಂಡು ಉತ್ತರಿಸುವ ಯತ್ನ ನಡೆಸಿದ್ದಾರೆ. ಇದೂ ಸಹ ನೆಟ್ಟಿಗರಿಂದ ಕಟು ಟೀಕೆಗೀಡಾಗಿದೆ.

ಕಾರ್ಯದರ್ಶಿಗೆ ನೋಟಿಸ್‌: ಇಒ

‘ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಈ ಕುರಿತಂತೆ ಸ್ಪಷ್ಟನೆ ಕೇಳಿ ಈಗಾಗಲೇ ನೋಟಿಸ್‌ ನೀಡಲಾಗಿದೆ’ ಎಂದು ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಆರ್.ಕೃಷ್ಣಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟನೆ ಬಗ್ಗೆ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳಿಂದಲೂ ಮಾಹಿತಿ ಕೇಳಲಾಗಿದೆ. ಮಾನಿಟರ್‌ನ ಪರದೆ ನೋಡಲು ಛತ್ರಿ ಬಳಸಲಾಗಿತ್ತು. ಡ್ರೋಣ್ ಮೇಲೆ ಹಾರುವಾಗ ಛತ್ರಿ ಹಿಡಿದಿದ್ದವರು ದೂರ ಸರಿದಿದ್ದಾರೆ. ಕಾರ್ಯದರ್ಶಿ ಆಗ ಛತ್ರಿ ನೆರಳಲ್ಲಿ ನಿಂತಿದ್ದಾರೆ’ ಎಂದು ಇಒ ಹೇಳಿದರು.

ವೈಯಕ್ತಿಕ ದ್ವೇಷದಿಂದ ವೈರಲ್ ಮಾಡಲಾಗಿದೆ. ಕಾಲೇಜಿನ ಹಿರಿಯ ವಿದ್ಯಾರ್ಥಿಯೇ ಈ ಕೃತ್ಯ ಎಸಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT