ಮಂಗಳವಾರ, ನವೆಂಬರ್ 19, 2019
29 °C
ಭಾರತೀಯ ಶಿಕ್ಷಣ್‌ ಮಂಡಲ್‌ ಸಂಘಟನಾ ಕಾರ್ಯದರ್ಶಿ ಮುಕುಲ್‌ ಕಾನಿಟ್ಕರ್‌ ಹೇಳಿಕೆ

ಸ್ವಾವಲಂಬಿ ಸಮಾಜದ ನಿರ್ಮಾಣವೇ ಗುರಿ

Published:
Updated:
Prajavani

ಮೈಸೂರು: ಸ್ವಾವಲಂಬಿ ಸಮಾಜದ ನಿರ್ಮಾಣವೇ ಸಮಾಜಕಾರ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡವರ ಗುರಿಯಾಗಬೇಕು ಎಂದು ಭಾರತೀಯ ಶಿಕ್ಷಣ್‌ ಮಂಡಲ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಕುಲ್‌ ಕಾನಿಟ್ಕರ್‌ ಕರೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯ ಸಮಾಜಕಾರ್ಯ ಅಧ್ಯಯನ ವಿಭಾಗ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಗುರುವಾರ ಪ್ರೊ.ವೈ.ಎಸ್‌.ಸಿದ್ದೇಗೌಡ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ‘ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ’ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದರು.

‘ಭಾರತೀಯತೆ’ಯನ್ನು ಮೈಗೂಡಿಸಿಕೊಂಡಿರುವ ಸಮಾಜಕಾರ್ಯಕ್ಕೆ ಒತ್ತು ನೀಡಬೇಕಿದೆ. ಹೊರಗಿನ ಯಾವುದೇ ಸಹಾಯವಿಲ್ಲದೆ ಬದುಕುವ ಸಮಾಜ ನಮ್ಮದಾಗಬೇಕು. ವಿದೇಶಿ ಶೈಲಿಯ ಸಮಾಜಕಾರ್ಯ ಭಾರತದ ವ್ಯವಸ್ಥೆಗೆ ಒಗ್ಗದು ಎಂದು ಅಭಿಪ್ರಾಯಪಟ್ಟರು.

ವಿದೇಶಗಳಲ್ಲಿ ಸಮಾಜ ಎಂಬ ಪರಿಕಲ್ಪನೆಯೇ ಇಲ್ಲ. ಅಲ್ಲಿ ಏನಿದ್ದರೂ ವ್ಯಕ್ತಿ ಮತ್ತು ಆ ದೇಶದ ಸರ್ಕಾರದ ನಡುವಿನ ಸಂಬಂಧವೇ ಮುಖ್ಯವಾಗುತ್ತದೆ. ಆದರೆ ಭಾರತದಲ್ಲಿ ಕುಟುಂಬ, ಸಮಾಜಕ್ಕೆ ಪ್ರಾಧಾನ್ಯತೆ ಕಲ್ಪಿಸಲಾಗಿದೆ. ಸಮಾಜಕಾರ್ಯದ ‘ಭಾರತೀಕರಣ’ ನಡೆಯಬೇಕು ಎಂದು ಆಗ್ರಹಿಸಿದರು.

ಸಮಾಜ ಕಾರ್ಯವನ್ನು ವೃತ್ತಿಯನ್ನಾಗಿಸಿಕೊಂಡಾಗ ಹಲವು ಸವಾಲುಗಳು ಎದುರಾಗುತ್ತವೆ. ಅಡೆತಡೆಗಳನ್ನು ಎದುರಿಸಲು ತ್ಯಾಗ ಮನೋಭಾವ, ಕೌಶಲ, ಬದ್ಧತೆ ಬೇಕು. ಇಲ್ಲದಿದ್ದರೆ ವೃತ್ತಿಪರವಾಗಿ ಸಮಾಜಕಾರ್ಯ ಸಾಧ್ಯವಿಲ್ಲ. ಸಮಾಜದ ಏಳಿಗೆಯೇ ಎಲ್ಲರ ಧ್ಯೇಯವಾಗಬೇಕು ಎಂದರು.

ಅಮೆರಿಕ ಸರ್ಕಾರ ಸಾಮಾಜಿಕ ಭದ್ರತೆಗಾಗಿ ಜಿಡಿಪಿಯ ಶೇ 36 ರಷ್ಟು ಪಾಲನ್ನು ಮೀಸಲಿಡುತ್ತದೆ. ಆದರೆ ಭಾರತದಲ್ಲಿ ಈ ಪ್ರಮಾಣ ಜಿಡಿಪಿಯ ಶೇ 0.2 ಮಾತ್ರ. ಏಕೆಂದರೆ ಅಮೆರಿಕದಲ್ಲಿ ಕುಟುಂಬ, ಸಮಾಜ ವ್ಯವಸ್ಥೆಯ ಪರಿಕಲ್ಪನೆಯೇ ಇಲ್ಲ. ಹೆತ್ತವರನ್ನು ಮಕ್ಕಳು ನೋಡಿಕೊಳ್ಳುವುದಿಲ್ಲ. ಹಿರಿಯರನ್ನು ಸರ್ಕಾರವೇ ನೋಡಿಕೊಳ್ಳಬೇಕಾಗುತ್ತದೆ. ವಯಸ್ಸಾದವರು ಅಲ್ಲಿನ ಆರ್ಥಿಕತೆಗೆ ಹೊರೆಯಾಗಿ ಪರಿಣಮಿಸಿದ್ದಾರೆ ಎಂದು ತಿಳಿಸಿದರು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ ಸಮಿತಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್‌ ಮಾತನಾಡಿ, ಮುಂದಿನ ಕೆಲವು ತಿಂಗಳುಗಳಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಬರಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಪದವಿ, ಸ್ನಾತಕೋತ್ತರ ಪದವಿ, ಕಾಲೇಜು, ವಿ.ವಿಗಳ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಲಿವೆ ಎಂದರು.

‘ವಿದ್ಯಾರ್ಥಿ ಕೇಂದ್ರಿತವಾಗಿರುವ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿದ್ದು, ಆ ಬದಲಾವಣೆಗೆ ಹೊಂದಿಕೊಳ್ಳಲು ಪೂರ್ವಭಾವಿಯಾಗಿ ನಾವು ಕೆಲವೊಂದು ತಯಾರಿ ನಡೆಸಬೇಕಾಗುತ್ತದೆ’ ಎಂದು ಕರೆಕೊಟ್ಟರು.

ಆಧುನಿಕ ಯುಗದಲ್ಲಿ ಸಾಮಾಜಿಕ ವ್ಯವಸ್ಥೆ, ನಮ್ಮ ಅಭ್ಯಾಸಗಳು ಬದಲಾಗಿವೆ. ಆದ್ದರಿಂದ ಸಮಾಜ ಕಾರ್ಯ ಅಧ್ಯಯನ ಕೂಡಾ ಬದಲಾವಣೆಗೆ ತೆರೆದುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಮಾಜಕಾರ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಸಂವಾದ ನಡೆಯಿತು. ಮೈಸೂರು ವಿ.ವಿ. ಕುಲಸಚಿವ ಪ್ರೊ.ಆರ್‌.ಶಿವಪ್ಪ, ಸಮಾಜಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಚಂದ್ರಮೌಳಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)