ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಔಷಧ ಖಾಲಿಯಾಗುತ್ತಿದೆ; ಮುಂದೇನು?

ಆತಂಕದಲ್ಲೇ ದಿನದೂಡುತ್ತಿರುವ ಲೈಂಗಿಕ ಕಾರ್ಯಕರ್ತರು
Last Updated 23 ಏಪ್ರಿಲ್ 2020, 10:28 IST
ಅಕ್ಷರ ಗಾತ್ರ

ಮೈಸೂರು: ‘ಹಾಸಿಗೆ ಹಿಡಿದಿರುವ ಅಪ್ಪ ಅಮ್ಮನ ಔಷಧ ಖಾಲಿಯಾಗುತ್ತಿದೆ. ಖರೀದಿಸಲು ಹಣ ಇಲ್ಲ, ಮುಂದೇನು ಎಂಬುದು ಗೊತ್ತಾಗದೇ ನಾಲ್ಕು ಗೋಡೆಗಳನ್ನೇ ದಿಟ್ಟಿಸುತ್ತೇನೆ’ ಎಂದು ಲೈಂಗಿಕ ಕಾರ್ಯಕರ್ತೆ ಭಾಗ್ಯಲಕ್ಷ್ಮಿ ಬೇಸರದಿಂದ ಹೇಳುತ್ತಾರೆ.

‘ಸಮಾಜದಲ್ಲಿ, ಮೊದಲ ಬಾರಿಗೆ ಎಚ್‌ಐವಿ ಸೋಂಕು ಕಾಣಿಸಿಕೊಂಡಾಗಲೂ ಇಂತಹ ಸ್ಥಿತಿ ಬಂದಿರಲಿಲ್ಲ. ಈಗ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ’ ಎನ್ನುತ್ತಾರೆ ಅವರು.

ಎಚ್‌ಐವಿ ಸೋಂಕಿಗಿಂತಲೂ ಹೆಚ್ಚಾಗಿ, ಕೊರೊನಾ ಸೋಂಕಿನ ಭೀತಿಯು ಲೈಂಗಿಕ ಕಾರ್ಯಕರ್ತರನ್ನು ಕಾಡುತ್ತಿದ್ದು, ಅವರ ಬದುಕನ್ನು ಹೈರಾಣಾಗಿಸಿದೆ.

ಸಾವಿರಾರು ಮಂದಿ ಇಂದಿಗೂ ಇದೇ ವೃತ್ತಿಯನ್ನೇ ತಮ್ಮ ಜೀವನೋಪಾಯಕ್ಕೆ ಅವಲಂಬಿಸಿದ್ದು, ತಮ್ಮನ್ನೇ ನಂಬಿದ ಕುಟುಂಬದ ಸದಸ್ಯರ ಕಷ್ಟ ನೀಗಿಸಲು ಸದ್ಯ ಇವರ ಬಳಿ ಬೇರೆ ಯಾವ ಮಾರ್ಗವೂ ಇಲ್ಲ.

‌ಈ ಕುರಿತು ಪ್ರತಿಕ್ರಿಯಿಸಿದ, ಹೆಸರು ಬಹಿರಂಗಪಡಿಸಲು ಬಯಸದ ಕಾರ್ಯಕರ್ತೆಯೊಬ್ಬರು, ‘ದೇವರು ನಮಗೆ ಕೊಟ್ಟಿರುವ ಕಷ್ಟ ನೀಗಿಕೊಳ್ಳಲು ಇಷ್ಟು ಕನಿಷ್ಠ ಮಟ್ಟಕ್ಕೆ ಇಳಿದಾಯ್ತು. ಇನ್ನೂ ಕೆಳಗಿಳಿಯಲು ನಮಗೆ ದಾರಿ ತೋಚುತ್ತಿಲ್ಲ. ಪಡಿತರ ಒಂದನ್ನು ಕೊಟ್ಟರೆ ಸಾಲದು, ಕಾಯಿಲೆಪೀಡಿತರಿಗೆ ಔಷಧ, ಮನೆಯ ಬಾಡಿಗೆ ಪಾವತಿಸಲು, ಬೇರೆ ಊರಲ್ಲಿ ಓದುತ್ತಿರುವ ಮಕ್ಕಳಿಗೆ ಹಣ ಕಳುಹಿಸಬೇಕು’ ಎಂದು ಅಸಹಾಯಕತೆ ತೋಡಿಕೊಂಡರು.

ಮತ್ತೊಬ್ಬ ಕಾರ್ಯಕರ್ತೆ ಪ್ರತಿಕ್ರಿಯಿಸಿ, ‘ಕೊರೊನಾ ಸೋಂಕಿನ ಭೀತಿಯಿಂದ ಈಗ ಗ್ರಾಹಕರೂ ಇಲ್ಲ. ‘ಲಾಕ್‌ಡೌನ್‌’ ಮುಗಿದ ಬಳಿಕವೂ ಅವರು ಬರುತ್ತಾರೆಂಬ ಭರವಸೆ ಇಲ್ಲ ಎಂದು ಅಳಲು ತೋಡಿಕೊಂಡರು.

‘ಮದ್ಯ ವ್ಯಸನಿಯಾಗಿರುವ ಗಂಡನಿಂದ ಒಂದು ರೂಪಾಯಿಯೂ ಸಿಗುವುದಿಲ್ಲ. ಗ್ರಾಹಕರನ್ನು ಕರೆದುಕೊಂಡು ಬಂದವರಿಗೆ ಪಾಲು ಕೊಟ್ಟು, ಲಾಡ್ಜ್‌ ಬಾಡಿಗೆ ನೀಡಿ ಉಳಿಯುತ್ತಿದ್ದುದು ₹ 300ರಿಂದ ₹400 ಅಷ್ಟೆ. ಈಗ ಅದು ಕೂಡ ಇಲ್ಲ’ ಎನ್ನುವುದು ಒಬ್ಬರ ಅಳಲಾದರೆ, ‘ಸದ್ಯಕ್ಕೆ ವಾರದ ಬಡ್ಡಿಗೆ ಸಾಲ ತೆಗೆದುಕೊಂಡಿದ್ದು, ಬಡ್ಡಿ ಬೆಳೆಯುತ್ತಿದೆ’ ಎಂದು ಮತ್ತೊಬ್ಬ ಲೈಂಗಿಕ ಕಾರ್ಯಕರ್ತೆ ಪ್ರತಿಮಾ ಹೇಳುತ್ತಾರೆ.

ಪರಸಯ್ಯನಹುಂಡಿಯ ಲೈಂಗಿಕ ಕಾರ್ಯಕರ್ತರೊಬ್ಬರು ಪ್ರತಿಕ್ರಿಯಿಸಿ, ‘ಬೇರೆ ಕಡೆ ರಾಜಕಾರಣಿಗಳು ನಮ್ಮಂತಹವರಿಗೂ ಆಹಾರದ ಕಿಟ್‌ಗಳನ್ನು ನೀಡಿದ್ದಾರಂತೆ. ಆದರೆ, ಈ ಊರಿಗೆ ಯಾರೊಬ್ಬರೂ ತಲೆ ಹಾಕಿಲ್ಲ. ಇಲ್ಲಿಗೆ ಬಂದರೆ ಫೋಟೊ ತೆಗೆಯಲು ಯಾರೂ ಬರುವುದಿಲ್ಲ ಎಂದೋ ಏನೋ ಅವರೂ ನಮ್ಮನ್ನು ಮರೆತಿದ್ದಾರೆ’ ಎಂದು ಬೇಸರಿಸಿದರು.

‘ಯಾರೊಬ್ಬರೂ ಈ ವೃತ್ತಿಯನ್ನು ಸ್ವಇಚ್ಛೆಯಿಂದ ಆಯ್ಕೆ ಮಾಡಿಕೊಂಡಿಲ್ಲ. ಎಲ್ಲರೂ ಒಂದೊಂದು ವಿಧದ ಸಮಸ್ಯೆಗಳ ಸುಳಿಗೆ ಸಿಲುಕಿ, ಅನಿವಾರ್ಯವಾಗಿ ಈ ವೃತ್ತಿಗೆ ಬಂದಿದ್ದಾರೆ. ಬಹುತೇಕರ ದಿನದ ಸಂಪಾದನೆ ₹ 500ರಿಂದ ₹ 1 ಸಾವಿರ ಇದ್ದರೆ ಹೆಚ್ಚು. ಈಗ ಇವರೆಲ್ಲ ಕಷ್ಟದಲ್ಲಿ ಸಿಲುಕಿದ್ದಾರೆ’ ಎಂದು ಆಶೋದಯ ಸಮಿತಿಯ ಕಾರ್ಯಕ್ರಮ ಅಧಿಕಾರಿ ವೇಣುಕುಮಾರ ಹೇಳುತ್ತಾರೆ.

*
ಜಿಲ್ಲಾಡಳಿತವು ನೋಂದಾಯಿತ ಲೈಂಗಿಕ ಕಾರ್ಯಕರ್ತರಿಗೆ ವಸತಿ, ಊಟ ಹಾಗೂ ಮೂಲಸೌಕರ್ಯಗಳನ್ನು ನೀಡುತ್ತಿದೆ. ಎಲ್ಲ ರೀತಿಯ ಸ್ಪಂದನೆಗೆ ನಾವು ತಯಾರಿದ್ದೇವೆ.‌
-ಡಾ.ರವಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT