ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ದುರಸ್ತಿ ಕಾಮಗಾರಿ ವಿಳಂಬ

ಆಲಮಟ್ಟಿ: ಕಳಪೆ ಕಾಮಗಾರಿ ನಡೆಯುವ ಶಂಕೆ– ರೈತರ ಆತಂಕ
Last Updated 25 ಮೇ 2018, 4:36 IST
ಅಕ್ಷರ ಗಾತ್ರ

ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ವಿವಿಧ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ಒಂದೂವರೆ ತಿಂಗಳು ಕಳೆದರೂ ದುರಸ್ತಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಚುನಾವಣೆ ನೀತಿ ಸಂಹಿತೆ ಇದ್ದುದ್ದರಿಂದಲೂ ಪ್ರಕ್ರಿಯೆ ನಡೆದಿಲ್ಲ. ಇದರಿಂದಾಗಿ ಕಾಲುವೆ ದುರಸ್ತಿ ಕಾಮಗಾರಿ ವಿಳಂಬವಾಗಲಿದ್ದು, ಗುಣಮಟ್ಟದ ಕಾಮಗಾರಿ ನಡೆಯುವ ಬಗ್ಗೆ ಹಲವು ರೈತರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

‘ಜುಲೈನಲ್ಲಿ ಮತ್ತೆ ಕಾಲುವೆಗೆ ನೀರು ಹರಿಸಬೇಕು. ಅಷ್ಟರೊಳಗೆ ಕಾಲುವೆ ದುರಸ್ತಿ ಪೂರ್ಣಗೊಳ್ಳಬೇಕು. ಹೀಗಾಗಿ ಅವಸರದ ಕಾಮಗಾರಿಯಿಂದ ಗುಣಮಟ್ಟ ಕಾಪಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಅಲ್ಲದೆ ಜೂನ್‌ನಲ್ಲಿ ಮುಂಗಾರು ಹಂಗಾರು ಪ್ರಾರಂಭಗೊಳ್ಳುವುದರಿಂದ ಸಿವಿಲ್‌ ಕಾಮಗಾರಿ, ಕಾಂಕ್ರೀಟ್‌ ಕಾಮಗಾರಿಗೆ ಅಡ್ಡಗಾಲಾಗುತ್ತದೆ’ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಕಾಲುವೆಗೆ ನೀರು ಹರಿಸುವುದು ಸ್ಥಗಿತಗೊಂಡ ವೇಳೆಯಲ್ಲಿ (ಸಾಮಾನ್ಯವಾಗಿ ಪ್ರತಿ ವರ್ಷದ ಏಪ್ರಿಲ್‌ನಿಂದ ಜೂನ್‌ವರೆಗೆ) ಕಾಮಗಾರಿ ನಡೆಸಬೇಕು. ಕಾಲುವೆಯ ನೀರಿನ ರಭಸಕ್ಕೆ ನಾನಾ ಕಡೆ ಕಾಲುವೆಗಳಿಗೆ ಬೋಂಗಾ ಬಿದ್ದಿದ್ದು, ಕಾಲುವೆಯಲ್ಲಿ ಹೂಳು ತುಂಬಿರುತ್ತದೆ. ನಾನಾ ಕಡೆ ನೀರು ಸರಾಗವಾಗಿ ಹೋಗಲು ಕ್ಲೋಸರ್ ಜೊತೆಗೆ ದುರಸ್ತಿಯ ‘ವಿಶೇಷ ಕಾಮಗಾರಿ’ ಕೈಗೊಳ್ಳಲಾಗುತ್ತದೆ.

ಚುನಾವಣೆ ಅಡ್ಡಿ: ಪ್ರತಿ ವರ್ಷ ಏಪ್ರಿಲ್‌ನಲ್ಲಿ ಟೆಂಡರ್ ಕರೆದು ಜೂನ್‌ ವೇಳೆಗೆ ಕ್ಲೋಸರ್ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಆದರೆ ಈ ಬಾರಿ ಟೆಂಡರ್ ಪ್ರಕ್ರಿಯೆಗೆ ಚುನಾವಣೆ ನೀತಿ ಸಂಹಿತೆ ಅಡ್ಡವಾಗಿತ್ತು. ಸದ್ಯ ನೀತಿ ಸಂಹಿತೆ ಪೂರ್ಣಗೊಂಡು 10 ದಿನ ಗತಿಸಿದರೂ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿಲ್ಲ.

ಕಳಪೆ ಕಾಮಗಾರಿ ನಡೆಯುವ ಶಂಕೆ: ‘ಜೂನ್‌ನಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸುವುದರೊಳಗೆ ಮಳೆಗಾಲ ಆರಂಭಗೊಳ್ಳುತ್ತದೆ. ಜುಲೈನಲ್ಲಿ ಕಾಲುವೆಗೆ ನೀರು ಹರಿಸಬೇಕೆಂಬ ಬೇಡಿಕೆ ರೈತರಿಂದ ಬರತೊಡಗುತ್ತದೆ. ದೊರೆಯುವ 15 ರಿಂದ 20 ದಿನದೊಳಗೆ ಕ್ಲೋಸರ್ ಕಾಮಗಾರಿ ಪೂರ್ಣಗೊಳ್ಳುವುದು ಅಸಾಧ್ಯ. ಕಾಂಕ್ರೀಟ್‌ ಕಾರ್ಯ ನಡೆಯುವಾಗ ಮಳೆಯ ಅಡ್ಡಿ ಒಂದೆಡೆಯಾದರೆ ಹೂಳು ತೆಗೆಯಲು ಮಳೆಯ ನೀರು ಅಡ್ಡಿಯಾಗುತ್ತದೆ. ಹೀಗಾಗಿ ಕಾಮಗಾರಿ ಗುಣಮಟ್ಟದಿಂದ ನಡೆಯುವ ಸಾಧ್ಯತೆ ಕಡಿಮೆ’ ಎಂದು ರೈತರಾದ ಶಿವಾನಂದ ಅವಟಿ, ಎಸ್‌.ಟಿ. ಗೌಡರ ಮೊದಲಾದವರು ಆರೋಪಿಸುತ್ತಾರೆ.

ಶೀಘ್ರವೇ ಟೆಂಡರ್‌: ಈಗಾಗಲೇ ಆಲಮಟ್ಟಿ ವಲಯದಲ್ಲಿ ಬರುವ ಆಲಮಟ್ಟಿ ಬಲದಂಡೆ, ಆಲಮಟ್ಟಿ ಎಡದಂಡೆ (ಸ್ವಲ್ಪ ಪ್ರಮಾಣ), ಮುಳವಾಡ ಪೂರ್ವ ಹಾಗೂ ಪಶ್ಚಿಮ, ಮರೋಳ ಏತ ನೀರಾವರಿ ಹಂತ–1, ತಿಮ್ಮಾಪುರ ಏತ ನೀರಾವರಿ, ಚಿಮ್ಮಲಗಿ ಪಶ್ಚಿಮ ಕಾಲುವೆಗಳ ಕ್ಲೋಸರ್ ಕಾಮಗಾರಿಗಳಿಗೆ ₹20 ಕೋಟಿ ಮಂಜೂರಾಗಿದೆ. ಅಷ್ಟೇ ಹಣದಲ್ಲಿ ಕ್ಲೋಸರ್‌ನ ನಾನಾ ಕಾಮಗಾರಿಯ ಟೆಂಡರ್ ಕರೆಯಲು ಎಲ್ಲಾ ಸಿದ್ಧತೆ ನಡೆಸಲಾಗಿದೆ. ಕೆಬಿಜೆಎನ್‌ಎಲ್‌ ನಿಗಮ ಕಚೇರಿಯಿಂದ ಅನುಮತಿ ದೊರಕಿದ ತಕ್ಷಣವೇ ‘ಇ–ಪ್ರೊಕ್ಯೂರಮೆಂಟ್‌’ ಅಡಿ ಟೆಂಡರ್ ಕರೆಯಲಾಗುವುದು ಎಂದು ಕೆಬಿಜೆಎನ್‌ಎಲ್‌ ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ಬಾರಿ ಸಂತ್ರಸ್ತ ಗುತ್ತಿಗೆದಾರರಿಗೆ ಕಾಮಗಾರಿ ದೊರೆಯುವ ಉದ್ದೇಶದಿಂದ ಮ್ಯಾನುವಲ್‌ ಟೆಂಡರ್ ಕರೆದು ಕಾಮಗಾರಿ ನಿರ್ವಹಿಸಲಾಗಿತ್ತು. ಆದರೆ ₹50 ಲಕ್ಷ ಒಳಗಿನ ಕಾಮಗಾರಿಗೆ ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ಶೇ 18 ರಷ್ಟು ಮೀಸಲಾತಿ ಕಲ್ಪಿಸಬೇಕಾಗಿದೆ. ಹೀಗಾಗಿ ‘ಇ–ಪ್ರೊಕ್ಯೂರಮೆಂಟ್‌’ ಅಡಿ ಟೆಂಡರ್ ಕರೆಯುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಒಟ್ಟಾರೆ ಜುಲೈ ಮೊದಲ ವಾರದೊಳಗೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎನ್ನುವ ವಿಶ್ವಾಸವನ್ನು ಕೆಬಿಜೆಎನ್‌ಎಲ್‌ ಅಧಿಕಾರಿಗಳು ವ್ಯಕ್ತಪಡಿಸಿದರು.

‘ಮ್ಯಾನುವಲ್‌ ಟೆಂಡರ್ ಕರೆಯಿರಿ’

ಕ್ಲೋಸರ್ ಕಾಮಗಾರಿ ಶೀಘ್ರ ಹಾಗೂ ಗುಣಮಟ್ಟದಿಂದ ಪೂರ್ಣಗೊಳ್ಳುವ ಉದ್ದೇಶದಿಂದ ಹಾಗೂ ಸ್ಥಳೀಯ ಬಹುತೇಕ ಗುತ್ತಿಗೆದಾರರು ಕೃಷ್ಣಾ ನದಿ ಹಿನ್ನೀರಿನ ಸಂತ್ರಸ್ತರಾಗಿದ್ದಾರೆ. ಅವರ ಹಿತದೃಷ್ಟಿಯಿಂದ ಮ್ಯಾನುವಲ್‌ ಟೆಂಡರ್ ಕರೆಯಬೇಕು. ಇ–ಪ್ರೊಕ್ಯೂರ್‌ಮೆಂಟ್‌ನಿಂದ ಪ್ರತಿ ಕಾಮಗಾರಿಯೂ ಅತಿ ಕಡಿಮೆ ಹಣಕ್ಕೆ ಬಿಡ್‌ ಮಾಡಿ ಬೇರೆ ಯಾವುದೇ ಜಿಲ್ಲೆಯ ಗುತ್ತಿಗೆದಾರರ ಟೆಂಡರ್ ಪಡೆದು ಗುಣಮಟ್ಟದ ಕಾಮಗಾರಿ ನಿರ್ವಹಿಸುವುದಿಲ್ಲ. ಹೀಗಾಗಿ ಮ್ಯಾನುವೆಲ್‌ ಟೆಂಡರ್ ಅಡಿ ಕ್ಲೋಸರ್ ಕಾಮಗಾರಿ ಟೆಂಡರ್‌ ಕರೆಯಬೇಕೆಂದು ಗುತ್ತಿಗೆದಾರರಾದ ಗಿರೀಶ ಮರೋಳ, ಗೋಪಾಲ ಬಂಡಿ
ವಡ್ಡರ, ಹನುಮಂತ ಕುರಿ, ಜಿ.ಆರ್. ಯಂಡಗೇರ ಅವರು ಆಲಮಟ್ಟಿಗೆ ಗುರುವಾರ ಸಂಜೆ ಭೇಟಿ ನೀಡಿದ್ದ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕ ವಿ. ಶಂಕರ ಅವರಿಗೆ ಮನವಿ ಸಲ್ಲಿಸಿದರು.

ಚಂದ್ರಶೇಖರ ಕೋಳೇಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT