ಸೋಮವಾರ, ಜುಲೈ 4, 2022
21 °C
ವಿವಿಧ ಸಂಘಟನೆಗಳಿಂದಲೂ ಶಂಕರ ಸ್ಮರಣೆ

ಮೈಸೂರು: ಜಿಲ್ಲಾಡಳಿತದಿಂದ ಸರಳ ಶಂಕರಾಚಾರ್ಯರ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಆದಿ ಜಗದ್ಗುರು ಶಂಕರಾಚಾರ್ಯರು, ರಾಮಾನುಜಾಚಾರ್ಯರ ಜಯಂತಿಯನ್ನು ಮಂಗಳವಾರ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಲಾಕ್‌ಡೌನ್‌ ಬಿಗಿ ಬಂದೋಬಸ್ತ್‌ನಲ್ಲೂ ಶಂಕರರ ಮಠಗಳಲ್ಲಿ ಶಂಕರಾಚಾರ್ಯರ ಜಯಂತಿ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಹಲವು ಸಂಘಟನೆಗಳು, ಬಿಜೆಪಿ ಕಚೇರಿಯಲ್ಲೂ ಜಯಂತಿ ಆಚರಿಸಿ, ಶಂಕರರಿಗೆ ನಮನ ಸಲ್ಲಿಸಲಾಯಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೈಸೂರಿನ ಜೆ.ಎಸ್.ಎಸ್. ವಿದ್ಯಾಪೀಠದ ಹತ್ತಿರ ಇರುವ ಶಂಕರಮಠದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ, ಶಂಕರಾಚಾರ್ಯ ಜಯಂತಿಯನ್ನು ಸರಳವಾಗಿ, ಸಾಂಕೇತಿಕವಾಗಿ ಆಚರಿಸಲಾಯಿತು.

ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸಮರ್ಪಣಾ ಶೈಕ್ಷಣಿಕ ಮತ್ತು ದಾನದತ್ತಿ ಸಂಸ್ಥೆ ವತಿಯಿಂದ ಆಚಾರ್ಯದ್ವಯರಾದ ಆದಿಶಂಕರಾಚಾರ್ಯ, ರಾಮಾನುಜಾಚಾರ್ಯರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಆಚಾರ್ಯದ್ವಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಉದ್ಯಮಿ ಶ್ರೀನಿವಾಸರಾಜೇ ಅರಸ್‍, ಟ್ರಸ್ಟ್‌ನ ಖಜಾಂಚಿ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಗೌರವ ಕಾರ್ಯದರ್ಶಿ ಎಂ.ಎಸ್.ಬಾಲಸುಬ್ರಹ್ಮಣ್ಯಂ, ಕೌಶಿಕ್ ಎನ್., ಎಚ್.ಎ.ರಾಜಗೋಪಾಲ್, ಸಮಾಜ ಸೇವಕ ಜಿ.ಪಿ.ಹರೀಶ್ ಉಪಸ್ಥಿತರಿದ್ದರು.

ತ್ರಿಶಾಖಾ ವಿಪ್ರ ಬಳಗ: ಮೈಸೂರಿನ ಶಾರದಾದೇವಿ ನಗರದ ಶಾರದಾ ತ್ರಿಶಾಖಾ ವಿಪ್ರ ಬಳಗದ ಕಚೇರಿಯಲ್ಲಿ ಶಂಕರ ಜಯಂತಿ ಪ್ರಯುಕ್ತ ವಿಶೇಷ ಪೂಜೆ, ಶಂಕರಾಚಾರ್ಯ ಸ್ತುತಿ, ಗುರುಪಾದುಕಾಸ್ತೋತ್ರ ಪಾರಾಯಣ ನಡೆದವು.

ಜಗತ್ತಿಗೆ ಬಂದೊದಗಿರುವ ಕೊರೊನಾ ವಿಪತ್ತು ಕಳೆಯಲಿ ಎಂಬ ಸಂಕಲ್ಪದೊಂದಿಗೆ ಪ್ರಾರ್ಥನೆ ಮಾಡಿ, ಫಲ-ತಾಂಬೂಲಗಳ ನೈವೇದ್ಯ, ಮಂಗಳಾರತಿ ಮಾಡಲಾಯಿತು.

ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತರ ಮನೆಗಳಿಗೆ ಪಾನಕ, ಗೊಜ್ಜವಲಕ್ಕಿ, ರಸಾಯನ ಪ್ರಸಾದ ತಲುಪಿಸಲಾಯಿತು.

ಬಳಗದ ಅಧ್ಯಕ್ಷರಾದ ಶ್ರೀಧರಶರ್ಮ, ಮುಖಂಡರಾದ ರಾಕೇಶ್ ಭಟ್, ಶ್ರೀನಿವಾಸ್, ಅಮಿತ್, ರವಿ ಪಾಲ್ಗೊಂಡಿದ್ದರು.

ಸ್ನೇಹ ಬಳಗ: ಶಂಕರಾಚಾರ್ಯರು, ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ ಕೆ.ಹರೀಶ್‌ಗೌಡ ಸ್ನೇಹ ಬಳಗದ ವತಿಯಿಂದ ನಗರದ ಬಂದತಮ್ಮ ಕಾಳಮ್ಮ ಸಭಾಂಗಣದಲ್ಲಿ ಚಾಮರಾಜ ಕ್ಷೇತ್ರದಲ್ಲಿ ವಾಸವಿರುವ ಪುರೋಹಿತರು, ಅರ್ಚಕರು ಹಾಗೂ ಅಡುಗೆಯವರಿಗೆ ಆಹಾರ ಕಿಟ್ ಮತ್ತು ಮೆಡಿಕಲ್ ಕಿಟ್‌ನ್ನು ಕಾಂಗ್ರೆಸ್ ಮುಖಂಡ ಕೆ.ಹರೀಶ್‌ಗೌಡ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಆಚಾರ್ಯದ್ವಯರ ಕೊಡುಗೆ ಬಣ್ಣಿಸಿದರು.

ಕಾಂಗ್ರೆಸ್ ಮಖಂಡರಾದ ಕೆ.ಹರೀಶ್‌ಗೌಡ, ಸಿ.ಎಸ್.ರಘು, ವಿನಯ್ ಕಣಗಾಲ್, ಸಮಾಜ ಸೇವಕ ಅಜಯ್ ಶಾಸ್ತ್ರಿ, ನಾಗೇಶ್ ಕರಿಯಪ್ಪ, ದೀಪಕ್ ಗೌಡ, ರಾಜಗೋಪಾಲ್ ಅಯ್ಯಂಗಾರ್, ಸುಮಂತ್ ಶಾಸ್ತ್ರಿ, ಶ್ರೀನಿವಾಸ್ ರಾವ್, ಚಕ್ರಪಾಣಿ, ಬದ್ರೀಶ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು