ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಮರೆಗೆ ಸರಿದ ‘ಶಾಂತಲಾ’

ಭಾವಪೂರ್ಣವಾದ ವಿದಾಯ ಕಾರ್ಯಕ್ರಮ
Last Updated 25 ಜೂನ್ 2020, 5:39 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಕಳೆದ 46 ವರ್ಷಗಳಿಂದ ಚಿತ್ರ ರಸಿಕರನ್ನು ಸೂಜಿಗಲ್ಲಿನಂತೆ ಸೆಳೆದಿದ್ದ ‘ಶಾಂತಲಾ’ ಚಿತ್ರಮಂದಿರ ಬುಧವಾರ ತೆರೆಮರೆಗೆ ಸರಿಯಿತು. ‘ಬಂಗಾರದ ಪಂಜರ’ದಿಂದ ‘ಶಿವಾಜಿ ಸುರತ್ಕಲ್‌’ ವರೆಗೆ ಸಾವಿರಾರು ಸಿನಿಮಾಗಳನ್ನು ಸಿನಿರಸಿಕರಿಗೆ ಉಣಬಡಿಸಿದ ಈ ಸಿನಿಮಾ ಮಂದಿರ ಇತಿಹಾಸದ ಪುಟಗಳಿಗೆ ಜಾರಿತು.

ಸಿನಿಮಾ ಮಂದಿರದ ಪಾಲುದಾರರು ಇಲ್ಲಿನ ಸಿಬ್ಬಂದಿಗೆ ಬುಧವಾರ ಇಳಿಹೊತ್ತಿನಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ ಭಾವಪೂರ್ಣ ಕ್ಷಣಗಳಿಗೆ ಕಾರಣವಾಯಿತು. ಇಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಪಾಲುದಾರರ ಕಾಲಿಗೆರಗುವ ಮೂಲಕ ಇಷ್ಟು ವರ್ಷ ಕೆಲಸ ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸಿದರು.

ಕೊನೆಯದಾಗಿ ಸಿನಿಮಾ ಮಂದಿರದಲ್ಲಿ ಕೆಲವೊಂದು ಸಿನಿಮಾದ ದೃಶ್ಯಗಳ ಪ್ರದರ್ಶನ ವೀಕ್ಷಿಸಿದ ಸಿಬ್ಬಂದಿ ಮತ್ತು ಪಾಲುದಾರರ ಕಣ್ಣಾಲಿಗಳು ಒದ್ದೆಯಾದವು.

ಪಾಲುದಾರರಲ್ಲಿ ಒಬ್ಬರಾದ ಪದ್ಮನಾಭ ಪದಕಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಚಿತ್ರಮಂದಿರವನ್ನು ಮುಚ್ಚುತ್ತಿರುವುದು ಕೊರೊನಾ ಸಂಕಷ್ಟದ ಕಾರಣಕ್ಕಾಗಿ ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅನಾಥಾಲಯಕ್ಕೆ ಸೇರಿದ ಜಾಗದಲ್ಲಿ 1972ರಲ್ಲಿ ಸಿನಿಮಾ ಮಂದಿರವನ್ನು ಮೊದಲಿಗೆ 30 ವರ್ಷಗಳ ಗುತ್ತಿಗೆಗೆ ಪಡೆದು ಕಟ್ಟಲಾಯಿತು. ನಂತರ ಗುತ್ತಿಗೆ ಮುಂದುವರಿಯುತ್ತಾ ಬಂತು. ಈಗ ಅನಾಥಾಲಯದವರು ಜಾಗ ಬಿಟ್ಟುಕೊಡಿ ಎಂದು ಕೇಳುತ್ತಿದ್ದಾರೆ. ಹೀಗಾಗಿ, ನಷ್ಟಕ್ಕೆ ಒಳಗಾಗದ ಈ ಚಿತ್ರಮಂದಿರವನ್ನು ಬಿಟ್ಟುಕೊಡುತ್ತಿದ್ದೇವೆ’ ಎಂದು ವಿವರಿಸಿದರು.

42 ವರ್ಷಗಳಿಂದ ಇಲ್ಲಿ ವ್ಯವಸ್ಥಾಪಕರಾಗಿದ್ದ ದೇವರಾಜು ಅವರು ‘ಮಲ್ಲಿಪ್ಲೆಕ್ಸ್‌ಗೆ ಸ್ಪರ್ಧೆಯನ್ನು ಒಡ್ಡುವ ನಗರದ ಏಕೈಕ ಸಾಂಪ್ರದಾಯಿಕ ಚಿತ್ರಮಂದಿರ ಇದಾಗಿತ್ತು’ ಎಂದು ಹೆಮ್ಮೆಪಟ್ಟರು.

ಚಿತ್ರಮಂದಿರದ ಪಾಲುದಾರರಾದ ಮಧೂಸೂದನ್, ಅನಿಲ್‌, ಪ್ರಕಾಶ್ ಹಾಗೂ ಹನುಮಂತು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT