ಬುಧವಾರ, ಸೆಪ್ಟೆಂಬರ್ 18, 2019
28 °C
ನೆರೆ ಸಂತ್ರಸ್ತರಿಗೆ ಬಾಡಿಗೆ ಹಣಕ್ಕೆ ಬದಲಾಗಿ ₹ 50 ಸಾವಿರ– ಸಚಿವ ಆರ್.ಅಶೋಕ್

ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಡಲು ಸೂಚನೆ

Published:
Updated:

ಮೈಸೂರು: ನೆರೆ ಸಂತ್ರಸ್ತರು ವಾಸ ಮಾಡಲು ₹ 5 ಸಾವಿರ ಮಾಸಿಕ ಬಾಡಿಗೆ ಹಣದ ಬದಲಿಗೆ ತಾತ್ಕಾಲಿಕವಾಗಿ ಶೆಡ್‌ ಹಾಕಿಕೊಳ್ಳಲು ₹ 50 ಸಾವಿರ ನೀಡಿ ಎಂದು ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಒಂದು ವೇಳೆ ಸಂತ್ರಸ್ತರು ಬಾಡಿಗೆ ಮನೆಯಲ್ಲಿ ಇರಲು ಬಯಸುವುದಾದರೇ ಬಾಡಿಗೆ ಹಣ ನೇರವಾಗಿ ಅವರ ಖಾತೆಗೆ ಜಮಾ ಆಗುವಂತೆ ಮಾಡಬೇಕು. ಇದರಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಇಲ್ಲಿ ಪ್ರವಾಹ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಗುರುವಾರ ನಡೆದ ಸಭೆಯಲ್ಲಿ ತಿಳಿಸಿದರು.

ಹಕ್ಕುಪತ್ರ ಇಲ್ಲದವರಿಗೂ ಪರಿಹಾರದ ಹಣ ಸಿಗುವಂತೆ ಮಾಡಲು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಈ ಸಂಬಂಧ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

ಶಾಲೆಗಳ ಗೋಡೆ ಕುಸಿದು ಮಕ್ಕಳಿಗೆ ತೊಂದರೆಯಾದರೆ ಇದರ ಸಂಪೂರ್ಣ ಜವಾಬ್ದಾರಿ ಡಿಡಿಪಿಐ ಹೊರಬೇಕು. ದೇವಸ್ಥಾನಗಳಿಗೆ ಹೋದರೆ ಪುಣ್ಯ ಬರುವುದಿಲ್ಲ. ಸಂತ್ರಸ್ತರ ಸೇವೆ ಮಾಡಿದರೆ ಎಲ್ಲ ಪುಣ್ಯವೂ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.

ಓಡಿಸಿಬಿಡುತ್ತೇನೆ ಎಂದು ಅಧಿಕಾರಿಯನ್ನು ಗದರಿದ ಅಶೋಕ್

ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನೆರೆಯ ನಂತರ ತಮ್ಮ ಮನೆಯಲ್ಲಿನ ಪರಿಕರಗಳನ್ನು ಜೋಡಿಸಿಡಲು ಹೋದ ಮಹಿಳೆಯೊಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ. ಇವರನ್ನು ನೆರೆಯಿಂದ ಮೃತಪಟ್ಟವರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಸಭೆಯ ಗಮನಕ್ಕೆ ತಂದರು.

ಈ ಕುರಿತು ಪ್ರತಿಕ್ರಿಯಿಸಿದ ಸೆಸ್ಕ್‌ ಅಧಿಕಾರಿಯೊಬ್ಬರು, ‘ಇದು ನೆರೆಯಿಂದ ಆದ ಸಾವು ಅಲ್ಲ. ಮನೆಯೊಳಗೆ ವಿದ್ಯುತ್ ಆಘಾತ ಉಂಟಾಗಿದೆ. ಹಾಗಾಗಿ, ಪರಿಹಾರ ನೀಡಲು ಬಾರದು’ ಎಂದರು.

ಉತ್ತರ ಕೇಳಿ ಕೋಪಗೊಂಡ ಅಶೋಕ್, ‘ಈ ರೀತಿ ಉತ್ತರಿಸಿದರೆ ಓಡಿಸಿಬಿಡುತ್ತೇನೆ. ಸಾವು ಸಾವೇ ಅಲ್ಲವೇ? ಒಂದು ವೇಳೆ ನೆರೆ ಬಾರದೇ ಇದ್ದಿದ್ದರೆ ಅವರ ಸಾವು ಉಂಟಾಗುತ್ತಿತ್ತೇ ಎಂದು ಪ್ರಶ್ನಿಸಿದರು. ನಿಮ್ಮ ಅಧೀಕ್ಷಕ ಎಂಜಿನಿಯರ್ ಸಭೆಗೆ ಬಂದಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡದೇ ಹೋದರೆ ಎತ್ತಂಗಡಿ ಮಾಡಿಬಿಡುತ್ತೇನೆ’ ಎಂದು ಗದರಿದರು.

755 ಶಾಲಾ ಕೊಠಡಿಗಳಿಗೆ ಹಾನಿ

ಜಿಲ್ಲೆಯ 434 ಶಾಲೆಗಳ 755 ಕೊಠಡಿಗಳಿಗೆ ನೆರೆಯಿಂದ ಹಾನಿಯಾಗಿದೆ. ತೀರಾ ಶಿಥಿಲಾವಸ್ಥೆ ತಲುಪಿದ ಕೊಠಡಿಗಳಲ್ಲಿನ ಮಕ್ಕಳಿಗೆ ಪಕ್ಕದ ಕೊಠಡಿಗಳಲ್ಲಿ ಪಾಠ ಹೇಳಿಕೊಡಲಾಗುತ್ತಿದೆ ಎಂದು ಡಿಡಿಪಿಐ ಪಾಂಡುರಂಗ ವಿವರಣೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ್, ‘ಒಂದು ವೇಳೆ ಮಕ್ಕಳಿಗೆ ಏನಾದರೂ ಅಪಾಯ ಸಂಭವಿಸಿದರೆ ಇದರ ನೇರ ಹೊಣೆ ನೀವೇ ಹೊರಬೇಕು’ ಎಂದು ಖಡಕ್ ಎಚ್ಚರಿಕೆ ನೀಡಿದರು.

Post Comments (+)