ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ವ್ಯಾಪಾರಕ್ಕೆ ಕೊರೊನಾ ಹೊಡೆತ

ಕುರಿಗಾಹಿಗಳಿಗೆ, ವ್ಯಾಪಾರಿಗಳಿಗೆ ಅತೀವ ನಷ್ಟ
Last Updated 24 ಜುಲೈ 2020, 6:39 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ವೈರಸ್‌ ಉದಯಗಿರಿ ಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಬಕ್ರೀದ್‌ಗಾಗಿ ಕುರಿ ಖರೀದಿ ವಹಿವಾಟು ಸಂಪೂರ್ಣವಾಗಿ ನೆಲಕಚ್ಚಿದೆ. ಇದರಿಂದ ಹಳ್ಳಿಗಾಡಿನ ಕುರಿಗಾಹಿಗಳು ಅತೀವ ನಷ್ಟ ಅನುಭವಿಸುವಂತಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಬಕ್ರೀದ್‌ಗೆ ಸುಮಾರು 20 ದಿನಗಳು ಇರುವಾಗಲೇ ಉದಯಗಿರಿ ಹಾಗೂ ಎನ್.ಆರ್.ಮೊಹಲ್ಲಾ ಭಾಗಗಳಲ್ಲಿ ವಾಸವಿರುವ ವ್ಯಾಪಾರಿಗಳು ಹಳ್ಳಿಗಾಡಿಗೆ ಹೋಗಿ ಕುರಿಗಳನ್ನು ಖರೀದಿಸಿ ತರುತ್ತಿದ್ದರು. ಇಲ್ಲಿನ ಮಿಲೇನಿಯಂ ವೃತ್ತ, ರಾಜೀವ್‌ನಗರ ವೃತ್ತ, ಶಾಂತಿನಗರ, ಮಿಲಾದ್‌ಬಾಗ್ ಸೇರಿದಂತೆ ಹಲವೆಡೆ ‘ಕುರಿ ಬಜಾರ್‌’ಗಳೇ ಸೃಷ್ಟಿಯಾಗುತ್ತಿದ್ದವು.

ನೂರಾರು ಕುರಿಗಳನ್ನು ಇಲ್ಲಿ ವ್ಯಾಪಾರಕ್ಕೆ ಇಡಲಾಗುತ್ತಿತ್ತು. ಜನರು ಮುಗಿಬಿದ್ದು ಖರೀದಿಯಲ್ಲಿ ತೊಡಗುತ್ತಿದ್ದರು. ಆದರೆ, ಈ ಬಾರಿ ಇದುವರೆಗೂ ಹಿಂದಿನ ವರ್ಷಗಳಂತೆ ಒಂದೇ ಒಂದು ದೊಡ್ಡ ‘ಕುರಿ ಬಜಾರ್’ ನಡೆದಿಲ್ಲ.‌

ಮಂಡ್ಯ, ಶ್ರೀರಂಗಪಟ್ಟಣ, ಬನ್ನೂರು, ಚಾಮರಾಜನಗರ, ಪಾಂಡವಪುರ, ಮದ್ದೂರು, ತಿ.ನರಸೀಪುರ, ಹೊಳೆನರಸೀಪುರ ಮುಂತಾದ ಕಡೆಗಳಿಂದಲೂ ವ್ಯಾಪಾರಿಗಳು ನಗರಕ್ಕೆ ಕುರಿಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಈ ಬಾರಿ ಬೆರಳೆಣಿಯಷ್ಟು ವ್ಯಾಪಾರಿಗಳು ಮಾತ್ರ ಬಂದಿದ್ದಾರೆ.

ಒಂದು ಕುರಿಗೆ ₹ 7 ಸಾವಿರದಿಂದ ಆರಂಭವಾಗಿ ₹ 50 ಸಾವಿರದವರೆಗೂ ಬೆಲೆ ಇರುತ್ತಿತ್ತು. ಒಂದು ಮನೆಗೆ ಕನಿಷ್ಠ ಎಂದರೂ ಒಂದು ಕುರಿಯನ್ನು ಖರೀದಿಸಲಾಗುತ್ತಿತ್ತು. ಹಲವು ಮಂದಿ 50ರಿಂದ 60 ಕುರಿಗಳನ್ನು ಖರೀದಿಸಿ, ಕೊಯ್ದು ಹಬ್ಬದ ಅಡುಗೆ ಸಿದ್ಧಪಡಿಸಿ, ನೆಂಟರಿಷ್ಟರನ್ನು ಆಹ್ವಾನಿಸುತ್ತಿದ್ದರು.

ಈಗ ಎಲ್ಲೆಡೆ ಕೊರೊನಾ ಭೀತಿ ಆವರಿಸಿದೆ. ಒಂದೊಂದು ಬೀದಿಯಲ್ಲೂ ಕೊರೊನಾ ಸೋಂಕಿತರು ಇದ್ದಾರೆ. ಎಲ್ಲಿ ನೋಡಿದರಲ್ಲಿ ಕಂಟೈನ್‌ಮೆಂಟ್‌ ವಲಯಗಳೇ ಕಂಡು ಬರುತ್ತಿವೆ. ಹಲವು ಪ್ರದೇಶಗಳಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ಕುರಿ ವಹಿವಾಟು ಸಂಪೂರ್ಣವಾಗಿ ನೆಲಕಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT