ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಸಹಿಸಲು ಸಾಧ್ಯವಿಲ್ಲ, ಬಹಳ ನೋವಾಗಿದೆ: ಶಿಲ್ಪಾ ನಾಗ್‌

ನಾನೇ ‘ಸುಪ್ರೀಂ’ ಅನ್ನುವುದು ನಾಯಕತ್ವದ ಗುಣ ಅಲ್ಲ: ಡಿ.ಸಿ ರೋಹಿಣಿ ಸಿಂಧೂರಿ ವಿರುದ್ಧ ಶಿಲ್ಪಾ ನಾಗ್‌ ಆಕ್ರೋಶ
Last Updated 4 ಜೂನ್ 2021, 3:24 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಕಾರ್ಯವೈಖರಿ ಸಂಬಂಧ ಸ್ಥಳೀಯ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತ
ಪಡಿಸಿದ ಬೆನ್ನಲ್ಲೇ, ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್‌ ಅವರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿರುವುದು ಚರ್ಚೆಗೆ ಕಾರಣವಾಗಿದೆ.

ರಾಜೀನಾಮೆ ನಿರ್ಧಾರ ಪ್ರಕಟಿಸಲು ಶಿಲ್ಪಾ ನಾಗ್‌ ಅವರು ಗುರುವಾರ ಕರೆದ ಪತ್ರಿಕಾಗೋಷ್ಠಿಯುದ್ದಕ್ಕೂ ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದರು. ಹಲವು ಆರೋಪಗಳನ್ನು ಮಾಡಿದರಲ್ಲದೆ, ಅಸಹಾಯಕತೆಯನ್ನೂ ವ್ಯಕ್ತಪಡಿಸಿದರು. ಪಾಲಿಕೆ ಆಯುಕ್ತರ ಎಲ್ಲ ಆರೋಪಗಳನ್ನು ಜಿಲ್ಲಾಧಿಕಾರಿ ಅಲ್ಲಗಳೆದಿದ್ದಾರೆ.

‘ಒಬ್ಬರ ದುರಂಹಕಾರದಿಂದ ಇಡೀ ನಗರವನ್ನು ಸುಡುವ ಸಂಚು ನಡೆಯುತ್ತಿದೆ. ತುಂಬಾ ದುರದೃಷ್ಟಕರ ಸಂಗತಿ. ಪಾಲಿಕೆ ವಿರುದ್ಧ ಯುದ್ಧ ಸಾರುವ ಕೆಲಸ ನಡೀತಾ ಇದೆ. ನನಗೆ ಹಾಗೂ ನನ್ನ ಕೆಳಗಿನ ಅಧಿಕಾರಿಗಳಿಗೆ ವಿನಾಃ ಕಾರಣ ನಿರಂತರ ಕಿರುಕುಳ ನೀಡಲಾಗುತ್ತಿದೆ. ಎಲ್ಲದಕ್ಕೂ ಒಂದು ಸಹನೆ ಇರುತ್ತದೆ. ನನ್ನ ಮೇಲೆ ಇರುವ ಕೋಪಕ್ಕೆ ಬೇರೆಯವರಿಗೆ ತೊಂದರೆ ಕೊಡುವ ಕೆಲಸ ಆಗುತ್ತಿದೆ. ಇದು ದುರದೃಷ್ಟಕರ ಬೆಳವಣಿಗೆ. ಇದರಿಂದಾಗಿ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಶಿಲ್ಪಾ ನಾಗ್‌ ಹೇಳಿದ್ದಾರೆ.

‘ನಗರದ ಬಹುತೇಕ ವಾರ್ಡ್‌ಗಳು ರೆಡ್‌ ಜೋನ್‌ನಲ್ಲಿದೆ ಎಂದು ಬಿಂಬಿಸುವ ಕೆಲಸವನ್ನು ಜಿಲ್ಲಾಧಿಕಾರಿ ಮಾಡಿದ್ದಾರೆ. ಒಬ್ಬ ಜಿಲ್ಲಾಧಿಕಾರಿ ಜನರ ನಡುವೆ ಈ ರೀತಿ ಭಯ ಉಂಟುಮಾಡುತ್ತಿದ್ದಾರೆ ಎಂಬುದನ್ನು ನನಗೆ ನಂಬಲು ಆಗುತ್ತಿಲ್ಲ. ಜಿಲ್ಲಾಧಿಕಾರಿ ಇಷ್ಟು ಕೆಳಮಟ್ಟಕ್ಕೆ ಇಳಿದರೆ, ನನಗೆಅದೇ ರೀತಿ ಕೆಳಮಟ್ಟಕ್ಕೆ ಇಳಿದು ಎದುರಿಸಲು ಆಗದು’ ಎಂದಿದ್ದಾರೆ.

‘ಇಂತಹ ಪರಿಸ್ಥಿತಿಯಲ್ಲಿ ನನಗೆ ಮನಸ್ಸಿಗೆ ನೆಮ್ಮದಿಯಿಲ್ಲ. ಒಂದು ವಾರದಿಂದ ಸರಿಯಾಗಿ ಊಟ, ನಿದ್ದೆ ಮಾಡಿಲ್ಲ. ತುಂಬಾ ಬೇಸರದಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ಇನ್ನು ಸಹಿಸಲು ಸಾಧ್ಯವಿಲ್ಲ ಎಂದಾಗ ಮಾಧ್ಯಮಗಳ ಮುಂದೆ ಬಂದಿದ್ದೇನೆ’ ಎಂದು ಗದ್ಗರಿತರಾದರು.

ಜಿಲ್ಲಾಧಿಕಾರಿ ಪ್ರತಿದಿನ ಸಂಜೆ 4 ರಿಂದ 7ರ ವರೆಗೆ ಅಧಿಕಾರಿಗಳ ಸಭೆ ನಡೆಸುತ್ತಾರೆ. ಸಮಯ ವ್ಯರ್ಥವಲ್ಲದೆ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಕೋವಿಡ್‌ ನಿರ್ವಹಣೆ ಬಗ್ಗೆ ಯಾವತ್ತೂ ಚರ್ಚೆ ಆಗಿಲ್ಲ. ಕೋವಿಡ್‌ ಮಿತ್ರ ನಾನೇ ಮಾಡಿದ್ದು ಎಂದು ಪ್ರಧಾನಿ ಅವರಲ್ಲೂ ಹೇಳಿದ್ದರು. ಆದರೆ ಅಲ್ಲಿ ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ, ಔಷಧಿ, ಊಟ ಎಲ್ಲಿಂದ ಬರುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲ’ ಎಂದರು.

ಮಾನದಂಡ ಏಕಾಏಕಿ ಬದಲಾವಣೆ: ‘ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಮೇ 31ರ ವರದಿ ಪ್ರಕಾರ ಕೋವಿಡ್‌ ನಿಯಂತ್ರಣದಲ್ಲಿದೆ ಎಂದು ತೋರಿಸಲಾಗಿತ್ತು. ಮೈಸೂರಿನ ಎರಡು ವಾರ್ಡ್‌ಗಳು ಮಾತ್ರ ರೆಡ್‌ ಜೋನ್‌ನಲ್ಲಿ ಇದ್ದವು. ಆದರೆ ಇದನ್ನು ಬದಲಾವಣೆ ಮಾಡಿ ಗ್ರಾಮೀಣ ಪ್ರದೇಶಕ್ಕೆ ಒಂದು, ನಗರದ ಪ್ರದೇಶಕ್ಕೆ ಇನ್ನೊಂದು ಮಾನದಂಡ ರೂಪಿಸಲಾಗಿದೆ. ಕೋವಿಡ್‌ ನಿರ್ವಹಣೆಯಲ್ಲಿ ಆಯುಕ್ತರು ವಿಫಲರಾಗಿದ್ದಾರೆ ಎಂದು ತೋರಿಸುವುದು ಇದರ ಉದ್ದೇಶ. ಜಿಲ್ಲಾಧಿಕಾರಿ ಉದ್ದೇಶಪೂರ್ವಕವಾಗಿ ಇದನ್ನು ಮಾಡಿದ್ದಾರೆ’ ಎಂದು ದೂರಿದರು.

‘ಪಾಲಿಕೆಯು ಕೋವಿಡ್‌ ಕೇರ್‌ ಸೆಂಟರ್‌ ತೆರೆದಿಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಆದರೆ 9 ಕೋವಿಡ್‌ ಕೇರ್‌ ಸೆಂಟರ್‌ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಐದು ಕೋವಿಡ್‌ ಮಿತ್ರ ಮತ್ತು 9 ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಜಿಲ್ಲಾಡಳಿತದಿಂದ ಒಂದೇ ಒಂದು ಮಾತ್ರೆ ಕೂಡಾ ದೊರೆತಿಲ್ಲ. ಪ್ರತಿಯೊಂದನ್ನೂ ಸಿಎಸ್ಆರ್‌ ನಿಧಿ ಮೂಲಕ, ಪಾಲಿಕೆ ನಿಧಿಯಿಂದ ಖರೀದಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ನಾನೇ ಜಿಲ್ಲಾಧಿಕಾರಿ, ನಾನೇ ಸುಪ್ರೀಂ ಎಂದು ತೋರಿಸುವುದು, ವಯಸ್ಸಿನಲ್ಲಿ ತನಗಿಂತ ಹಿರಿಯರಾದ ಅಧಿಕಾರಿಗಳನ್ನು ಕರೆದು ಅವಮಾನ ಮಾಡುವುದು ನಾಯಕತ್ವ ಗುಣ ಅಲ್ಲ’ ಎಂದು ಕಿಡಿಕಾರಿದರು.

‘ಆದೇಶ ಕಾನೂನಿಗೆ ವಿರುದ್ಧ’: ‘ಕೋವಿಡ್‌ ನಿರ್ವಹಣೆಗೆ ಪಾಲಿಕೆಯು ವಿವಿಧ ಕೈಗಾರಿಕೆ, ಕಂಪನಿಗಳಿಂದ ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್‌ ಫಂಡ್) ರೂಪದಲ್ಲಿ ₹ 12.3 ಕೋಟಿ ಸಂಗ್ರಹಿಸಿದೆ. ಆದರೆ ಪಾಲಿಕೆಯು ಸಿಎಸ್‌ಆರ್‌ ನಿಧಿ ಸಂಗ್ರಹಿಸಬಾರದು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದು ಕಾನೂನಿಗೆ ವಿರುದ್ಧವಾದ ಆದೇಶ. ಜಿಲ್ಲಾಧಿ
ಕಾರಿಗೆ ಪಾಲಿಕೆ ವಿರುದ್ಧ ಈ ರೀತಿ ಆದೇಶ ಹೊರಡಿಸಲು ಆಗುವುದಿಲ್ಲ. ಸಿಎಸ್‌ಆರ್‌ ನಿಧಿ ಸಂಗ್ರಹದ ಉದ್ದೇಶದಿಂದ ಆರಂಭಿಸಿದ್ದ ವಾಟ್ಸ್‌ಆ್ಯಪ್‌ ಗ್ರೂಪ್‌ನಿಂದ ನನ್ನನ್ನು ತೆಗೆದಿದ್ದಾರೆ’ ಎಂದು ಶಿಲ್ಪಾ ನಾಗ್ ಅಸಮಾಧಾನ ಹೊರಹಾಕಿದರು. ‘ಸಿಎಸ್‌ಆರ್‌ ನಿಧಿ ಸಂಗ್ರಹದಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಪಾಲಿಕೆಯ ಪರಿಸರ ವಿಭಾಗದ ಎಂಜಿನಿಯರ್‌ವೊಬ್ಬರ ವಿರುದ್ಧ ಜಿಲ್ಲಾಧಿಕಾರಿ ಸಮರ ಸಾರಿದ್ದಾರೆ. ಅವರನ್ನು ಅಮಾನತು ಮಾಡುವ ಬೆದರಿಕೆ ಹಾಕಲಾಗಿದೆ’ ಎಂದು ಆರೋಪಿಸಿದರು.

‘ದಾನಿಯೊಬ್ಬರು 3 ಸಾವಿರ ಔಷಧಿ ಕಿಟ್‌ಗಳನ್ನು ಪಾಲಿಕೆಗೆ ನೀಡಿದ್ದರು. ಅದನ್ನು ಪಾಲಿಕೆಯ ಕೊಠಡಿಯಲ್ಲಿ ಇಡಲಾಗಿತ್ತು. ಆದರೆ ಪಾಲಿಕೆಗೆ ಆ ಅಧಿಕಾರ ಇಲ್ಲ ಎಂದು ಪೊಲೀಸ್‌ ಒಬ್ಬರನ್ನು ಕಳುಹಿಸಿ ಕೊಠಡಿಯ ಬೀಗ ತೆಗೆಸುವ ಪ್ರಯತ್ನ ನಡೆದಿತ್ತು. ಇದರಿಂದ ನಮಗೆ ಅವಮಾನ ಆಗಿದೆ’ ಎಂದರು.

ನೋಟಿಸ್‌ ಕೊಡಬಹುದಿತ್ತು: ‘ಜಿಲ್ಲಾಧಿಕಾರಿ ತಮ್ಮ ನಿವಾಸದಲ್ಲಿ ಈಜುಕೊಳ, ಜಿಮ್ ನಿರ್ಮಿಸಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಪಾಲಿಕೆ ವತಿಯಿಂದ ಅವರಿಗೆ ನೋಟಿಸ್‌ ಕೊಡಬಹುದಿತ್ತು. ಆದರೆ ಎಲ್ಲರೂ ಕೋವಿಡ್‌ ನಿರ್ವಹಣೆಯಲ್ಲಿ ತೊಡಗಿರುವ ಸಮಯದಲ್ಲಿ ವಿವಾದ ಉಂಟುಮಾಡುವುದು ಬೇಡ ಎಂದು ಸಹನೆಯಿಂದ ಇದ್ದೆ’ ಎಂದು ಶಿಲ್ಪಾ ನಾಗ್‌ ಹೇಳಿದರು.

ಪ್ರಧಾನಿ, ಸಿ.ಎಂಗೆ ರಾಮದಾಸ್‌ ಪತ್ರ: ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್‌ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ರಾಮದಾಸ್‌ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ‘ಯಾವುದೇ ಕಾರಣಕ್ಕೂ ರಾಜೀನಾಮೆ ಅಂಗೀಕರಿಸಬಾರದು’ ಎಂದು ಮನವಿ ಮಾಡಿದ್ದಾರೆ.

‘ಮೈಸೂರಿನಲ್ಲಿ ಕೋವಿಡ್‌ ನಿರ್ವಹಣೆಗಾಗಿ ಕೋವಿಡ್‌ ಮಿತ್ರ, ಟೆಲಿ ಮೆಡಿಸಿನ್‌, ಮನೆ ಮನೆ ಸಮೀಕ್ಷೆಯಂತಹ ಹಲವು ಯೋಜನೆಗಳನ್ನು ಅವರು ತಂದಿದ್ದಾರೆ. ಇತರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜತೆ ಹೊಂದಾಣಿಕೆಯಿಂದ ಕೆಲಸ ಮಾಡಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ಅವರ ಸೇವೆಯ ಅಗತ್ಯವಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಜಿಲ್ಲಾಧಿಕಾರಿಯ ಕಿರುಕುಳ, ಅವಮಾನದಿಂದ ರಾಜೀನಾಮೆ ನೀಡುವುದಾಗಿ ಶಿಲ್ಪಾ ನಾಗ್ ತಿಳಿಸಿದ್ದಾರೆ. ಮೈಸೂರಿನ ಇತರ ಕೆಲವು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೂ ಇದೇ ಕಹಿ ಅನುಭವ ಎದುರಾಗಿದೆ. ಆದ್ದರಿಂದ ಈಗಿನ ಜಿಲ್ಲಾಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿ ಕೋವಿಡ್‌ ನಿರ್ವಹಣೆ ವ್ಯವಸ್ಥೆ ದಿಕ್ಕುತಪ್ಪಲಿದೆ’ ಎಂದಿದ್ದಾರೆ.

ಶಿಲ್ಪಾ ನಾಗ್‌ಗೆ ಪಾಲಿಕೆ ಸದಸ್ಯರ ಬೆಂಬಲ: ಪಾಲಿಕೆ ಸದಸ್ಯರು ಶಿಲ್ಪಾ ನಾಗ್‌ ಪರಸಾಮಾಜಿಕ ಜಾಲತಾಣಗಳಲ್ಲಿ ಆಭಿಯಾನ ಆರಂಭಿಸಿದ್ದು, ‘ಐ ಸ್ಟ್ಯಾಂಡ್‌ ವಿದ್‌ ಅವರ್‌ ಕಮಿಷನರ್‌’ ಎಂದು ತಮ್ಮ ವೈಯಕ್ತಿಕ ಭಾವಚಿತ್ರದೊಂದಿಗೆ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಹಲವು ಸಾರ್ವಜನಿಕರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ರಾಜೀನಾಮೆ ನಿರ್ಧಾರ ವಾಪಸ್‌ ಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ.

ಹಂಗಾಮಿ ಮೇಯರ್‌ ಅನ್ವರ್‌ ಬೇಗ್ ಮಾತನಾಡಿ, ‘ಪಾಲಿಕೆಯ ಎಲ್ಲ ಸದಸ್ಯರು ಆಯುಕ್ತರ ಪರ ಇದ್ದೇವೆ. ಅವರ ರಾಜೀನಾಮೆ
ಅಂಗೀಕರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಾವು ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಆಯುಕ್ತರ ಮೇಲೆ ಈ ರೀತಿಯ ಒತ್ತಡ ಇದೆ ಎಂಬುದು ನಮಗೆ ತಿಳಿದೇ ಇರಲಿಲ್ಲ’
ಎಂದರು.

‌ಶಿಲ್ಪಾ ನಾಗ್‌ ರಾಜೀನಾಮೆ ವಾಪಸ್‌ ಪಡೆಯುವವರೆಗೂ ಕೋವಿಡ್‌ಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವುದಿಲ್ಲ ಎಂದು ಪಾಲಿಕೆಯ ಕೆಲವು ನೌಕರರು ಪಟ್ಟುಹಿಡಿದಿದ್ದಾರೆ.

ಹೊಸ ಸಿನಿಮಾ ‘ರಾಜೀನಾಮೆ’: ‘ಭೂ ಒತ್ತುವರಿ ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆಯೇ ಶಿಲ್ಪಾ ನಾಗ್ ರಾಜೀನಾಮೆ ನೀಡಿದ್ದಾರೆ’ ಎಂಬ ಒಕ್ಕಣೆಯಿದ್ದ, ಸಾರ್ವಜನಿಕರಿಂದ ಬಂದ ಸಂದೇಶವೊಂದನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಗುರುವಾರ ರಾತ್ರಿ ಮಾಧ್ಯಮದ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಹಾಕಿದ್ದು, ಕೂಡಲೇ ಅದನ್ನು ಡಿಲೀಟ್‌ ಮಾಡಿದ್ದಾರೆ.

‘ರಾಜೀನಾಮೆ’ ಹೆಸರಿನ ಹೊಸ ಸಿನಿಮಾ ಬಿಡುಗಡೆ ಆಗಿದೆ. ಕಥೆ– ಸಾ.ರಾ.ಮಹೇಶ್, ನಿರ್ದೇಶನ– ಪ್ರತಾಪಸಿಂಹ, ನಿರ್ಮಾಪಕ– ಸೋಮಶೇಖರ್, ನಟಿ– ಶಿಲ್ಪಾ ನಾಗ್, ಇವರಿಗೆಲ್ಲ ವಿಲನ್– ರೋಹಿಣಿ ಸಿಂಧೂರಿ. ಲಾಕ್‌ಡೌನ್‌ ಕಾರಣ ಈ ಸಿನಿಮಾವನ್ನು ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾಗಿದೆ. ರೋಹಿಣಿ ಸಿಂಧೂರಿ ಅಕ್ಕ, ನಿಮ್ಮ ಜೊತೆ ಏಳು ಕೋಟಿ ಕನ್ನಡಿಗರು ಇದ್ದೇವೆ. ನಿಮ್ಮ ಸೇವೆ ಹೀಗೆ ಮುಂದುವರೆಯಲಿ’ ಎಂದು ಸಂದೇಶದಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT