ಕಂಬನಿ ಮಿಡಿದ ಮೈಸೂರಿನ ಜನ

7
ಶಿವಕುಮಾರ ಸ್ವಾಮೀಜಿ ಅಗಲಿಕೆಗೆ ಸಾರ್ವಜನಿಕರ ಸಂತಾಪ

ಕಂಬನಿ ಮಿಡಿದ ಮೈಸೂರಿನ ಜನ

Published:
Updated:
Prajavani

ಮೈಸೂರು: ನಗರದಲ್ಲಿ ಮಂಗಳವಾರ ನೀರವ ಮೌನ ಆವರಿಸಿತ್ತು. ಪ್ರವಾಸಿ ಸ್ಥಳಗಳು ಬಿಕೊ ಎನ್ನುತ್ತಿದ್ದವು. ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಅರ್ಧಕ್ಕೆ ಹಾರಾಡಿತು. ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಅಲ್ಲಲ್ಲಿ ಗೌರವ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ನಸುಕಿನಿಂದಲೇ ತುಮಕೂರಿಗೆ ಕೆಎಸ್‌ಆರ್‌ಟಿಸಿ ವತಿಯಿಂದ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲಾಗಿತ್ತು. ಮಧ್ಯಾಹ್ನದವರೆಗೆ 23 ವಿಶೇಷ ಬಸ್‌ಗಳು ಭಕ್ತರನ್ನು ತುಮಕೂರಿಗೆ ಕರೆದೊಯ್ದವು. ಬೆಳಿಗ್ಗೆ 9.30ರವರೆಗೂ ಹೊರಟ ಬಸ್‌ಗಳು ಜನರಿಂದ ತುಂಬಿ ಹೋಗಿದ್ದವು. ಇದರಿಂದ ಕೆಲವರು ಮಂಡ್ಯಕ್ಕೆ ತೆರಳಿ ಅಲ್ಲಿಂದ ತುಮಕೂರಿಗೆ ಪ್ರತ್ಯೇಕ ಬಸ್‌ ಹತ್ತಿ ಹೊರಟರು.

ಮತ್ತೊಂದಿಷ್ಟು ಜನರು ಪ್ರತ್ಯೇಕವಾಗಿ ಟೆಂಪೊ, ಖಾಸಗಿ ಬಸ್‌ಗಳನ್ನು ಬಾಡಿಗೆಗೆ ಪಡೆದು ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆಯಲು ಹೊರಟರು. ‌

ಶಾಲಾ ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ರಜೆ ಇತ್ತು. ಕೆಲವರು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿದರು. ವ್ಯಾಪಾರ ವಹಿವಾಟು ಎಂದಿನಂತಿರದೇ ಕಳೆಗುಂದಿತ್ತು. ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.

ವಿವಿಧ ಬಡಾವಣೆಗಳ ನಿವಾಸಿಗಳು ಪ್ರತ್ಯೇಕವಾಗಿ ಸ್ವಾಮೀಜಿ ಅವರ ನಿಧನಕ್ಕೆ ಗೌರವ ಸೂಚಿಸಿದರು. ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಸಾಹಿತಿಗಳು, ಚಿಂತಕರಿಂದ ಗೌರವ

ಗನ್‌ಹೌಸ್‌ ಬಳಿಯ ಬಸವೇಶ್ವರ ಪ್ರತಿಮೆ ಮುಂಭಾಗ ಸ್ವಾಮೀಜಿ ಅವರ ಭಾವಚಿತ್ರವನ್ನಿಟ್ಟು ಪ್ರಗತಿಪರ ಚಿಂತಕರು ಸಾಹಿತಿಗಳು ಗೌರವ ಸೂಚಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಸಂಚಾಲಕ ಕೆ.ಎಸ್.ಶಿವರಾಮು, ಮುಖಂಡ ಮೂಗೂರು ನಂಜುಂಡಸ್ವಾಮಿ ಇದ್ದರು.

ಬಿಸಿಯೂಟ ಯೋಜನೆಗೆ ಸ್ವಾಮೀಜಿ ಹೆಸರಿಡಲು ಅಗ್ರಹ

ಕುವೆಂಪು ಉದ್ಯಾನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ವೇಳೆ ನೀಡುವ ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮೀಜಿ ಅವರ ಹೆಸರಿಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.‌ ಈ ವೇಳೆ ಅತ್ತಹಳ್ಳಿ ದೇವರಾಜು, ಪಿ.ಸೋಮಶೇಖರ್, ಕಿರಗಸೂರು ಶಂಕರ್ ಹಾಜರಿದ್ದರು.

ಅಲ್ಲಲ್ಲಿ ಗೌರವ: ಅಗ್ರಹಾರ ವೃತ್ತದಲ್ಲಿ ಮೈಸೂರು ಕನ್ನಡ ವೇದಿಕೆಯ ಕಾರ್ಯಕರ್ತರು ಸ್ವಾಮೀಜಿ ಅವರ ಭಾವಚಿತ್ರಕ್ಕೆ ಗೌರವ ಸೂಚಿಸಿದರು. ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ಡಾ.ರವೀಂದ್ರ, ನಾಲಾಬೀದಿ ರವಿ, ಗುರುಬಸವಪ್ಪ ಈ ವೇಳೆ ಇದ್ದರು.

ರಾಮಕೃಷ್ಣನಗರದ ನಿವಾಸಿಗಳು ಬಸವ ಸೇವಾ ಸಮಿತಿ ನೇತೃತ್ವದಲ್ಲಿ ಆಂದೋಲನ ವೃತ್ತದ ರಾಮೃಕೃಷ್ಣ ಪರಮಹಂಸ ಅವರ ಪ್ರತಿಮೆ ಎದುರು ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಈ ವೇಳೆ ಮುಖಂಡ ಡಿ.ಮಾದೇಗೌಡ ಇದ್ದರು.

ಇಟ್ಟಿಗೆಗೂಡು ಕನ್ನಡ ಸಮಿತಿ ವತಿಯಿಂದ ಬಡಾವಣೆಯ ಭವಾನಿ ರಸ್ತೆಯಲ್ಲಿ ಸ್ವಾಮೀಜಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಈ ವೇಳೆ ಸಮಿತಿ ಅಧ್ಯಕ್ಷ ಎನ್.ನೀಲಕಂಠ, ಸಂಪತ್ತು, ರಿಯಾಜ್, ರಂಗಸ್ವಾಮಿ, ಮನೋಜ್ ಇದ್ದರು.

ಪಾಠಶಾಲೆ ವೃತ್ತ ಬಳಿ ಬಿಎಸ್‌ಪಿ ಕಾರ್ಯಕರ್ತರ ಸೋಮವಾರ ರಾತ್ರಿ ಭಜನೆ ಮೂಲಕ ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !