ಮೈಸೂರು: ಎಲ್ಲೆಡೆ ಶಿವನಾಮ ಸ್ಮರಣೆ

ಶನಿವಾರ, ಮಾರ್ಚ್ 23, 2019
28 °C
ಶಿವಾಲಯಗಳಲ್ಲಿ ನೂಕುನುಗ್ಗಲು, ಎಲ್ಲೆಡೆ ಉಪವಾಸ, ಜಾಗರಣೆ

ಮೈಸೂರು: ಎಲ್ಲೆಡೆ ಶಿವನಾಮ ಸ್ಮರಣೆ

Published:
Updated:
Prajavani

ಮೈಸೂರು: ನಗರದ ಎಲ್ಲ ಶಿವಾಲಯಗಳಲ್ಲಿ ಈಶ್ವರನ ಸ್ಮರಣೆ ಶ್ರದ್ಧಾ ಭಕ್ತಿಯಿಂದ ಸೋಮವಾರ ನೆರವೇರಿತು. ಮಹಾಶಿವರಾತ್ರಿ ಅಂಗವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಅರಮನೆಯ ತ್ರಿಣೇಶ್ವರ ದೇಗುಲದಲ್ಲಿ ಚಿನ್ನದ ಕೊಳಗವನ್ನು ಶಿವಲಿಂಗಕ್ಕೆ ಧಾರಣೆ ಮಾಡಲಾಗಿತ್ತು. ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭಕ್ತರು ನಸುಕಿನಿಂದಲೇ ಸಾಲುಗಟ್ಟಿ ನಿಂತಿದ್ದರು.

ರಾಮಾನುಜ ರಸ್ತೆಯ ಕಾಮೇಶ್ವರ, ಕಾಮೇಶ್ವರಿ ದೇಗುಲ, ಇದರ ಎದುರು ಇರುವ ಗುರುಕುಲದ ನೂರೆಂಟು ಶಿವಲಿಂಗ ದೇವಾಲಯಗಳಲ್ಲಿಯೂ ತಡರಾತ್ರಿಯವರೆಗೂ ಭಕ್ತರು ಸಾಲುಗಟ್ಟಿ ದರ್ಶನ ಪಡೆದರು. ಕೆಲವೆಡೆ ಕಿ.ಮೀ ಉದ್ದದವರೆಗೂ ಸಾಲುಗಳಿದ್ದವು.

ಮಾತೃಮಂಡಲಿ ವೃತ್ತದಲ್ಲಿರುವ ಚಂದ್ರಮೌಳೀಶ್ವರ ದೇವಸ್ಥಾನದ ಮುಂದೆ ಭಕ್ತರ ಸಾಲು ರಸ್ತೆಯುದ್ದಕ್ಕೂ ಚಾಚಿಕೊಂಡಿತ್ತು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದ ಶಾಖಾ ಮಠ, ಕುದೇರುಮಠ, ಹೊಸಮಠ ಸೇರಿದಂತೆ ಹಲವು ಮಠಗಳಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗಿದವು. ಶಿವಪೂಜೆಗೆ ವಿಶೇಷ ಅವಕಾಶಗಳನ್ನು ಮಾಡಿಕೊಡಲಾಗಿತ್ತು.

ಅವಧೂತ ದತ್ತಪೀಠದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ ರುದ್ರ ಹೋಮಾದಿಗಳು ನಡೆದವು. ದತ್ತಾತ್ರೇಯ ದೇವಾಲಯದ ಮುಂಭಾಗದಲ್ಲಿರುವ ಬೃಹತ್ ಮೂಲಿಕೇಶ್ವರ ಸ್ವಾಮಿ ವಿಗ್ರಹಕ್ಕೂ, ನಾದಮಂಟಪದ ಮುಂಭಾಗದಲ್ಲಿರುವ ನಂದಿಕೇಶ್ವರ ಸ್ವಾಮಿಗೂ ವಿಶೇಷ ಅಭಿಷೇಕ ಮಾಡಲಾಯಿತು.

ವೆಂಕಟೇಶ್ವರ ದೇಗುಲದಲ್ಲಿನ ಸರ್ವದೋಷಹರ ಶಿವಲಿಂಗ, ವಿಶ್ವಪ್ರಾರ್ಥನಾ ಮಂದಿರದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ಶಿವಲಿಂಗಕ್ಕೆ ಅಭಿಷೇಕ ಮಾಡಲು ತಡರಾತ್ರಿಯವರೆಗೂ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಶಿವನಾಮ ಸಂಕೀರ್ತನೆ, ರುದ್ರ ಪಾರಾಯಣ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ರಾತ್ರಿಯಿಡೀ ಆಶ್ರಮದಲ್ಲಿ ನೂರಾರು ಭಕ್ತರು ಜಾಗರಣೆ ಮಾಡಿದರು. ಶಿವಲಿಂಗಕ್ಕೆ ಧಾರಣೆ ಮಾಡಲಾಗಿದ್ದ ಚಿನ್ನದ ಕವಚ ಹಾಗೂ ಅದಕ್ಕೆ ಅಲಂಕರಿಸಿದ್ದ ಅಮೆರಿಕದ ವಜ್ರದ ಹರಳುಗಳು ಭಕ್ತರನ್ನು ಸೆಳೆದವು.

ಜೆಎಲ್‌ಬಿ ರಸ್ತೆಯ ಶಿವಾನಂದ ಜ್ಞಾನಾಲಯದಲ್ಲಿ ಸಾಧನ ಮಂದಿರದ ವತಿಯಿಂದ ರುದ್ರಾಭಿಷೇಕ, ಸ್ತೋತ್ರಗಳ ಪಠಣ, ಭಜನೆಗಳು ನಡೆದವು. ರುದ್ರಮ್ ಚಾಟಿಂಗ್ ಗಮನ ಸೆಳೆಯಿತು.

ಮುಕ್ಕಣ್ಣೇಶ್ವರ ಸ್ವಾಮಿ ದೇವಸ್ಥಾನದ ವತಿಯಿಂದ ಅಶೋಕ ರಸ್ತೆ, ವೀರನಗೆರೆಗಳಲ್ಲಿ ಉತ್ಸವ ನಡೆಯಿತು. ಯಾದವಗಿರಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪ್ರತಿಕೃತಿಗಳನ್ನು ತಡರಾತ್ರಿಯವರೆಗೂ ಭಕ್ತರು ಕಣ್ತುಂಬಿಕೊಂಡರು.

ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನ, ಬೋಗಾದಿ ರಿಂಗ್ ರಸ್ತೆಯಲ್ಲಿರುವ ನಾಗೇಶ್ವರ ಭೋಗೇಶ್ವರಸ್ವಾಮಿ ದೇವಾಲಯ, ಕುಂಬಾರಕೊಪ್ಪಲು, ಸಿದ್ದಪ್ಪ ಚೌಕ, ಹೊಸಕೇರಿ, ಮಲೆಮಹದೇಶ್ವರ ರಸ್ತೆ ಹಾಗೂ ಇತರೆಡೆ ಇರುವ ಮಹದೇಶ್ವರ ದೇವಾಲಯಗಳಲ್ಲಿಯೂ ಶಿವರಾತ್ರಿ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !