ಮಂಗಳವಾರ, ಜುಲೈ 27, 2021
20 °C
ಕುರುಬಾರಹಳ್ಳಿ ಸರ್ವೆ ನಂಬರ್ 4ರ ಗೊಂದಲಕ್ಕೆ ಮುಕ್ತಿ; 25 ಸಾವಿರ ಕುಟುಂಬಗಳಿಗೆ ಅನುಕೂಲ

ಶೀಘ್ರದಲ್ಲೇ ಆದೇಶ ಪತ್ರ: ರಾಮದಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಕಂದಾಯ ಹಾಗೂ ನಗರಾಭಿವೃದ್ಧಿ ಇಲಾಖೆಯೊಳಗಿನ ಗೊಂದಲದಿಂದ ಅತಂತ್ರಕ್ಕೆ ಸಿಲುಕಿದ್ದ ಕುರುಬಾರಹಳ್ಳಿಯ ಸರ್ವೆ ನಂಬರ್ 4ರ ವ್ಯಾಪ್ತಿಯ ನಾಲ್ಕೈದು ಬಡಾವಣೆಗಳ ಜನರ ಸಮಸ್ಯೆಗೆ ಪರಿಹಾರ ದೊರೆತಿದೆ’ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

‘ಈ ಸರ್ವೆ ನಂಬರ್‌ಗೆ ಸಂಬಂಧಿಸಿದಂತೆ 72 ಪ್ರಕರಣ ನ್ಯಾಯಾಲಯದಲ್ಲಿದ್ದರೂ, ಸಿದ್ಧಾರ್ಥ ನಗರ, ಆಲನಹಳ್ಳಿ, ಆದಾಯ ತೆರಿಗೆ ಬಡಾವಣೆ, ಜೆ.ಸಿ.ನಗರ, ಕುರುಬಾರಹಳ್ಳಿ ವ್ಯಾಪ್ತಿಯ 354.29 ಎಕರೆಗೆ ಯಾವುದೇ ತೊಂದರೆಯಾಗದು ಎಂಬುದನ್ನು ಸರ್ಕಾರವೇ ಸ್ಪಷ್ಟಪಡಿಸಿದೆ’ ಎಂದು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸರ್ಕಾರದ ಈ ಆದೇಶ 8 ವರ್ಷಗಳ ಸಮಸ್ಯೆಗೆ ಇತಿಶ್ರೀ ಹಾಕುವ ಜೊತೆಯಲ್ಲಿ 25 ಸಾವಿರ ಕುಟುಂಬಗಳ ಆತಂಕವನ್ನು ದೂರ ಮಾಡಿದೆ. ಈ ತಿಂಗಳ ಅಂತ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರ ಸಮ್ಮುಖ ಸ್ಥಳೀಯರಿಗೆ ಹಕ್ಕುಪ‍ತ್ರದ ಆದೇಶ ವಿತರಿಸಲಾಗುವುದು’ ಎಂದು ರಾಮದಾಸ್ ಮಾಹಿತಿ ನೀಡಿದರು.

‘ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಆದೇಶ ಹೊರಡಿಸಿದೆ. ನ್ಯಾಯಾಲಯದ ಗಮನಕ್ಕೂ ತಂದಿದೆ. ಮುಂದಿನ ದಿನಗಳಲ್ಲಿ ಈ ಬಡಾವಣೆಯ ಜನರು ಭೂಮಿಯ ಹಕ್ಕು ಹೊಂದುವ ಜೊತೆಗೆ ಪರಭಾರೆ ಮಾಡುವುದು, ಖಾತೆ ಬದಲಿಸುವುದು, ಬ್ಯಾಂಕ್‌ಗಳಲ್ಲೂ ಸಾಲ ಪಡೆಯಬಹುದು’ ಎಂದು ಹೇಳಿದರು.

ಕಾರ್ಯಕರ್ತರಿಗೆ ಮನ್ನಣೆ: ‘ಬಿಜೆಪಿಯಲ್ಲಿ ಕಾರ್ಯಕರ್ತರಿಗೂ ಮನ್ನಣೆ ಸಿಗಲಿದೆ ಎಂಬುದಕ್ಕೆ ರಾಜ್ಯಸಭಾ ಚುನಾವಣೆಯೇ ಸಾಕ್ಷಿಯಾಗಿದೆ. ಮುಖ್ಯಮಂತ್ರಿ, ರಾಜ್ಯದ ಕೋರ್‌ ಕಮಿಟಿ ಜತೆ ಚರ್ಚಿಸಿಯೇ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿಕ್ಕೆ ಕಾರಣರಾದವರಿಗೂ ಮುಖ್ಯಮಂತ್ರಿ, ಹೈಕಮಾಂಡ್ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದಾರೆ’ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ

‘ರಾಜ್ಯದಲ್ಲಿನ ಬ್ರಾಹ್ಮಣರಿಗೆ ಇದೂವರೆಗೂ ಜಾತಿ ಪ್ರಮಾಣ ಪತ್ರ ಸಿಗುತ್ತಿರಲಿಲ್ಲ. ಇದರಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಶೇ 10ರ ಮೀಸಲಾತಿಯಡಿ ಶಿಕ್ಷಣ, ಉದ್ಯೋಗದಲ್ಲೂ ಬಡ ಬ್ರಾಹ್ಮಣರಿಗೆ ಅವಕಾಶವೇ ಸಿಗದಂತಾಗಿತ್ತು. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್ ಗಮನಕ್ಕೆ ತರುತ್ತಿದ್ದಂತೆ, ಸ್ಥಳದಲ್ಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಶೀಘ್ರದಲ್ಲೇ ಬ್ರಾಹ್ಮಣರಿಗೂ ಜಾತಿ ಪ್ರಮಾಣ ಪತ್ರ ಸಿಗಲಿದೆ’ ಎಂದು ರಾಮದಾಸ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು