ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಟ್‌ಪಟ್‌ ಸ್ಪರ್ಧೆ: ಅಂಬಿಕಾಗೆ ಚಿನ್ನದ ಗರಿ

Last Updated 25 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಆಂಧ್ರಪ್ರದೇಶದ ಗುಂಟೂರಿನಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ 20 ವರ್ಷದೊಳಗಿನ ಬಾಲಕಿಯರ ಶಾಟ್‌ಪಟ್ ಸ್ಪರ್ಧೆಯಲ್ಲಿ 14.24 ಮೀಟರ್‌ ದೂರ ಎಸೆದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ ಪ್ರತಿಭೆ, ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ವಿ.ಅಂಬಿಕಾ.

ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಪಂಜಾಬಿನ ಪರಮ್‌ಜೋತ್ ಕೌರ್ ಮತ್ತು ಹರಿಯಾಣದ ಯೋಗಿತಾ ಅವರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಅಂಬಿಕಾಗೆ ಸಲ್ಲುತ್ತದೆ. ಇದಕ್ಕೂ ಮೊದಲು ಉಡುಪಿಯಲ್ಲಿ ಸೆ.14 ಹಾಗೂ 15 ನಡೆದಿದ್ದ ದಕ್ಷಿಣ ವಲಯ ಮಟ್ಟದ ಶಾಟ್‌ಪಟ್‌ ಸ್ಪರ್ಧೆಯಲ್ಲಿ 13.63 ಮೀ. ದೂರ ಎಸೆದು ಹೊಸ ದಾಖಲೆಯನ್ನು ನಿರ್ಮಿಸಿದ್ದರು. ಅಕ್ಟೋಬರ್‌ನಲ್ಲಿ ಮೈಸೂರಿನಲ್ಲಿ ಜರುಗಿದ ದಸರಾ ಕ್ರೀಡಾಕೂಟದಲ್ಲಿ 13.98 ಮೀಟರ್‌ ದೂರ ಎಸೆದು ದಾಖಲೆ ನಿರ್ಮಿಸಿದ್ದರು. ಹೀಗೆ... ಶಾಟ್‌ಪಟ್‌ ಕ್ರೀಡೆಯಲ್ಲಿ ದಿನೇದಿನೇ ಹೊಸ ಮೈಲುಗಲ್ಲು ಸ್ಥಾಪಿಸುತ್ತಾ ಮುನ್ನುಗ್ಗುತ್ತಿದ್ದಾರೆ.

ಅಂಬಿಕಾ ಕರ್ನಾಟಕ ರಾಜ್ಯವಲ್ಲದೆ, ಪುಣೆ, ರಾಂಚಿ, ತ್ರಿವೆಂಡ್ರಮ್, ಹೈದರಾಬಾದ್, ಕೊಯಮತ್ತೂರು, ವಿಶಾಖಪಟ್ಟಣ, ಕಾಕಿನಾಡ ಮೊದಲಾದ ನಗರಗಳಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ ಮತ್ತು ರಜತ ಪದಕಗಳನ್ನು ಪಡೆದಿದ್ದಾರೆ.

ಕ್ರಿಕೆಟ್ ಅಂಪೈರ್ ಆಗಿದ್ದ ದಿವಂಗತ ವೆಂಕಟಸುಬ್ಬಯ್ಯ ಅವರ ಪ್ರೇರಣೆಯಿಂದ ಅಂಬಿಕಾ ಕ್ರೀಡಾ ಜಗತ್ತಿಗೆ ಕಾಲಿಟ್ಟರು. ಅಂಬಿಕಾ ಪ್ರಾರಂಭದಲ್ಲಿ ಟೇಬಲ್ ಟೆನಿಸ್ ಆಡುತ್ತಿದ್ದರು. ಸಂಸ್ಕೃತ ಅಧ್ಯಾಪಕಿಯಾದ ತಾಯಿ ಬಿ.ಜಿ. ಶ್ಯಾಮಲಾ ಅವರು ಶಾಟ್‌ಪಟ್‌ ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿದ್ದರು. ಇದಕ್ಕೆ ಬೇಕಾದ ಬೆಂಬಲವನ್ನೂ ನೀಡಿದರು.

ಹಿರಿಯ ಅಥ್ಲೀಟ್ ಆಗಿರುವ ಮೋಹನ್ ಕುಮಾರ್ ಅವರು ಕೋಚ್ ಆಗಿದ್ದಾರೆ. ಅವರ ಮಾರ್ಗದರ್ಶನ, ತರಬೇತಿಯಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಅಂಬಿಕಾ ಹೇಳುತ್ತಾರೆ.

ದ್ವಿತೀಯ ಬಿ.ಎಸ್ಸಿ ಜತೆಗೆ, ಸಂಸ್ಕೃತವನ್ನೂ ಅಧ್ಯಯನ ಮಾಡುತ್ತಿದ್ದಾರೆ. ಪರೀಕ್ಷೆಗಳಲ್ಲೂ ಉತ್ತಮ ಅಂಕಗಳನ್ನು ಪಡೆಯುತ್ತಿರುವ ಅಂಬಿಕಾಗೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಬಿ. ಶಾಂತಪ್ಪನವರ್ ಮತ್ತು ಅಧ್ಯಾಪಕರು ಪ್ರೋತ್ಸಾಹ ನೀಡುತ್ತಿದ್ದಾರೆ.

ಕಾಲೇಜಿನ ಪ್ರಾಂಶುಪಾಲರು, ಗುರುಗಳು ನೀಡುತ್ತಿರುವ ಬೆಂಬಲದಿಂದಾಗಿ ಓದು ಹಾಗೂ ಕ್ರೀಡೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗಿದೆ ಎನ್ನುತ್ತಾರೆ ಅಂಬಿಕಾ.

ಅಂಬಿಕಾ ಮುಂದಿನ ಜನವರಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ಪಡೆಯುತ್ತಿದ್ದಾರೆ. ಪ್ರತಿದಿನ 4ರಿಂದ 5 ಗಂಟೆಗಳ ಕಾಲ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಬೇಕು, ಸಾಂಸ್ಕೃತಿಕ ನಗರಿ ಮೈಸೂರಿಗೆ ಹೆಸರು ತರಬೇಕು ಎಂಬ ಉತ್ಸಾಹದಲ್ಲಿ ಅಂಬಿಕಾ ಇದ್ದಾರೆ.

ಇದಕ್ಕಾಗಿ ಅವರಿಗೆ ಪ್ರಾಯೋಜಕತ್ವದ ಅಗತ್ಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT