ಬುಧವಾರ, ಆಗಸ್ಟ್ 17, 2022
25 °C

ಶ್ರದ್ಧಾಂಜಲಿ ಸಭೆಯಲ್ಲಿ ಜಟಾಪಟಿ, ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆಯುತ್ತಿದ್ದ ಶ್ರದ್ಧಾಂಜಲಿ ಸಭೆಯೊಂದರಲ್ಲಿ ‘ಮೈಮುಲ್’ ನಿರ್ದೇಶಕ ಕೆ.ಈರೇಗೌಡ ಕಾಂಗ್ರೆಸ್‌ ರಾಜ್ಯ ವಿಭಾಗದ ಜಂಟಿ ಕಾರ್ಯದರ್ಶಿ ಕಟ್ಟೆಮನುಗನಹಳ್ಳಿ ಸುರೇಶ್‌ ಮೇಲೆ ಹಲ್ಲೆ ನಡೆಸಿದ್ದಾರೆ.

ಈಚೆಗೆ ಹೃದಯಾಘಾತದಿಂದ ನಿಧನರಾದ ಪಕ್ಷದ ಮುಖಂಡ ಹಾಗೂ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗೇಗೌಡ ಅವರ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆಯನ್ನು ಶಾಸಕ ಸಿ.ಅನಿಲ್ ಕುಮಾರ್ ನೇತೃತ್ವದಲ್ಲಿ ಕರೆಯಲಾಗಿತ್ತು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಎಚ್.ಡಿ.ಕೋಟೆ ಘಟಕದ ಅಧ್ಯಕ್ಷ ಪಾಷಾ ಮಾತನಾಡುವ ವೇಳೆ ಎದ್ದುನಿಂತ ಶಿಂಡೇನಹಳ್ಳಿ ಗ್ರಾಮದ ಯತೀಶ್ ಕುಮಾರ್, ಸಿಂಗೇಗೌಡರ ಸಾವಿಗೆ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಕಾರಣ ಎಂದು ದೂರಿದರು. ಇದರಿಂದ ಸಭೆಯಲ್ಲಿ ಗದ್ದಲ ಆರಂಭವಾಯಿತು. ಸಮಜಾಯಿಷಿ ನೀಡಲು ಬಂದ ಸುರೇಶ್‌ ಮೇಲೆ ಈರೇಗೌಡ ಹಲ್ಲೆ ನಡೆಸಿದರು. ಮಧ್ಯಪ್ರವೇಶಿಸಿದ ಅನಿಲ್‌ಕುಮಾರ್ ಇಬ್ಬರನ್ನು ಸಮಾಧಾನಪಡಿಸಿದರು. ಈ ಕುರಿತು ಪಟ್ಟಣ ಠಾಣೆಯಲ್ಲಿ ಸುರೇಶ್‌ ದೂರು ನೀಡಿದ್ದಾರೆ. ಪ್ರಕರಣ ಇನ್ನೂ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಸಿ.ಅನಿಲ್ ಕುಮಾರ್, ‘ವೈಯಕ್ತಿಕ ಕಾರಣಗಳಿಂದ ಮಾತಿನ ಚಕಮಕಿ ನಡೆದಿದೆ. ಹಲ್ಲೆ ನಡೆದಿಲ್ಲ. ಎಲ್ಲರನ್ನೂ ಸಮಾಧಾನಪಡಿಸಲಾಗಿದೆ. ಸಿಂಗೇಗೌಡರ ಸಾವಿಗೆ ಟಿಎಪಿಸಿಎಂಎಸ್ ಚುನಾವಣೆ ಹಾಗೂ ಬಿಜೆಪಿಯವರ ಕುತಂತ್ರ ರಾಜಕಾರಣವೇ ಕಾರಣವಾಗಿದೆ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.