ಸೋಮವಾರ, ಸೆಪ್ಟೆಂಬರ್ 27, 2021
25 °C
ಇಂದಿರಾ ಕ್ಯಾಂಟೀನ್‌ಗೆ ಹೋಳಿಗೆ l ಕಾರ್ಮಿಕರಿಗೆ ವಿಮಾ ಬಾಂಡ್‌ l ಬಡವರಿಗೆ ದಿನಸಿ ಕಿಟ್‌ ವಿತರಣೆ

ಸಿದ್ದರಾಮಯ್ಯಗೆ 75: ‘ಭಾಗ್ಯವಿಧಾತ ಸಿದ್ದರಾಮಯ್ಯ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆಯು ಬೆಂಬಲಿಗರನ್ನು ಸಂಭ್ರಮದಲ್ಲಿ ಮುಳುಗಿಸಿದೆ. ಗುರುವಾರ ಅವರ ಜನ್ಮದಿನದ ಅಂಗವಾಗಿ ನಗರದಲ್ಲಿ ವಿಶೇಷ ಕಾರ್ಯಕ್ರಮಗಳೂ ಆಯೋಜನೆಗೊಂಡಿವೆ. ಇಂದಿರಾ ಕ್ಯಾಂಟೀನ್‌ಗೆ ಹೋಳಿಗೆ. ಕಾರ್ಮಿಕರಿಗೆ ವಿಮಾ ಬಾಂಡ್‌, ಬಡವರಿಗೆ ದಿನಸಿ ಕಿಟ್‌ ವಿತರಣೆಯಂಥ ಕಾರ್ಯಕ್ರಮಗಳೂ ನಡೆಯಲಿವೆ. ‘ಭಾಗ್ಯವಿಧಾತ ಸಿದ್ದರಾಮಯ್ಯ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ವಿಚಾರ ಸಂಕಿರಣವೂ ಏರ್ಪಾಡಾಗಿದೆ.

ಚಾಮರಾಜನಗರದ ಮಲೆ ಮಹದೇಶ್ವರಬೆಟ್ಟದಲ್ಲಿ, ಇಲ್ಲಿನ ಚಾಮುಂಡಿಬೆಟ್ಟದಲ್ಲಿ, ಗರಡಿಕೇರಿಯ ಮಲೆಮಹದೇಶ್ವರ ದೇಗುಲದಲ್ಲಿ ವಿಶೇಷ ಪೂಜೆಗಳು ನೆರವೇರಲಿವೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ವಿವಿಧ ಕ್ಷೇತ್ರಗಳ 6 ಸಾಧಕರಿಗೆ ಭಾಗ್ಯವಿಧಾತ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕಾರ್ಯಕ್ರಮ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಇದರ ಜತೆಗೆ, ‘ಸಿದ್ದರಾಮಯ್ಯ ಒಂದು ಚಿಂತನೆ‘  ಕುರಿತು ವಿಚಾರ ಸಂಕಿರಣವೂ ನಡೆಯಲಿದೆ.

ಆಹಾರ ಕಿಟ್ ವಿತರಣೆ: ಕರ್ನಾಟಕ ರಾಜ್ಯ ಸಿದ್ದರಾಮಯ್ಯ ಅವರ ಅಭಿಮಾನಿಗಳ ಬಳಗದ ವತಿಯಿಂದ ಇಲ್ಲಿನ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಬಡಕುಟುಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಸಮಿತಿ ಅಧ್ಯಕ್ಷ ಆರ್.ಮೂರ್ತಿ ಭಾಗವಹಿಸಲಿದ್ದಾರೆ.

ಹೋಳಿಗೆ ಊಟ: ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಪ್ರಚಾರ ಸಮಿತಿಯು ಅರಮನೆಯ ವರಾಹ ಗೇಟ್‌ ಬಳಿ ಇರುವ ಇಂದಿರಾ ಕ್ಯಾಂಟೀನ್‌ಗೆ ಮಧ್ಯಾಹ್ನ 1 ಗಂಟೆ ಭೋಜನಕ್ಕೆ ಹೋಳಿಗೆಯನ್ನು ವಿತರಿಸಲಿದೆ. ಬೆಳಿಗ್ಗೆ 11.30ಕ್ಕೆ ಕಾಂಗ್ರೆಸ್ ಭವನದಲ್ಲಿ ಅಸಂಘಟಿತ ಕಾರ್ಮಿಕರಿಗೆ ₹ 1 ಲಕ್ಷ ಮೌಲ್ಯದ ಮರಣ ವಿಮೆ, ಅಂಗಾಂಗಳ ವೈಫಲ್ಯ ವಿಮೆ ಬಾಂಡ್ ವಿತರಿಸಲಾಗುತ್ತದೆ.

ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಮೇಯರ್ ಅನ್ವರ್‌ಬೇಗ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

ವಿಶೇಷ ಪೂಜೆ: ಇಲ್ಲಿನ ಗರಡಿಕೇರಿಯ ಮಲೆಮಹದೇಶ್ವರ ದೇಗುಲದಲ್ಲಿ ಬೆಳಿಗ್ಗೆ 11 ಗಂಟೆಗೆ ವಿಶೇಷ ಪೂಜೆ ನೆರವೇರಲಿದ್ದು, ನಂತರ ಮಹದೇಶ್ವರ ಭವನದಲ್ಲಿ ಪೌರಕಾರ್ಮಿಕರು, ಯುಜಿಡಿ ಕೆಲಸಗಾರರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

ರೋಗಿಗಳಿಗೆ ಬೆಡ್‌ಶೀಟ್ ವಿತರಣೆ: ಮೈಸೂರು ಗ್ರಾಮಾಂತರ (ಜಿಲ್ಲಾ) ಕಾಂಗ್ರೆಸ್ ಸಮಿತಿ ವತಿಯಿಂದ ಕೆ.ಆರ್.ಆಸ್ಪತ್ರೆಯ ಕಲ್ಲು ಕಟ್ಟಡದಲ್ಲಿರುವ ಒಳರೋಗಿಗಳಿಗೆ ಬೆಡ್‌ಶೀಟ್ ವಿತರಣೆ ನಡೆಯಲಿದೆ. ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ ಭಾಗಿಯಾಗಲಿದ್ದಾರೆ. ಪಾಲಿಕೆಯ ಮಾಜಿ ಸದಸ್ಯ ಚೌಹಳ್ಳಿ ಪುಟ್ಟಸ್ವಾಮಿ ಅವರು ಛಾಯಾದೇವಿ ಅನಾಥಾಶ್ರಮದಲ್ಲಿ ಸಿದ್ದರಾಮಯ್ಯ ಜನ್ಮದಿನಾಚರಣೆ ಏರ್ಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು