ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಎಲ್‌ಬಿ ಓದಿದ ಸಿದ್ದರಾಮಯ್ಯಗೆ ಅರ್ಥ ವ್ಯವಸ್ಥೆ ತಿಳಿಯುತ್ತದೆಯೇ: ಪ್ರತಾಪ ಸಿಂಹ

Last Updated 4 ಜೂನ್ 2022, 6:51 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರಿನ ಯಾವುದೋ ತಾಲ್ಲೂಕು ಕೋರ್ಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ಸಿದ್ದರಾಮಯ್ಯ ಅವರಿಗೆ ದೇಶದ ಆರ್ಥಿಕತೆ ಹೇಗೆ ಅರ್ಥವಾಗುತ್ತದೆ? ಅರ್ಥ ವ್ಯವಸ್ಥೆಯನ್ನು ಮುನ್ನಡೆಸುವುದು ಹೇಗೆ ಎಂಬುದು ಬಿಎ, ಎಲ್‌ಎಲ್‌ಬಿ ಓದಿದವರಿಗೆ ಅರ್ಥವಾಗುವಂತಿದ್ದರೆ ಈ ರೀತಿ ಅಸಂಬದ್ಧವಾಗಿ ಮಾತನಾಡುತ್ತಿರಲಿಲ್ಲ’ ಎಂದು ಸಂಸದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದರು.

‘ಮೋದಿ ಸರ್ಕಾರ ಕರ್ನಾಟಕದಿಂದ ₹19 ಲಕ್ಷ ಕೋಟಿ ದೋಚಿ ₹1.29 ಲಕ್ಷ ಕೋಟಿ ಟಿಪ್ಸ್ ಕೊಟ್ಟಿದೆ’ ಎಂಬ ಸಿದ್ದರಾಮಯ್ಯ ಟೀಕೆಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪಸಿಂಹ, ‘ಕೇಂದ್ರ ಸರ್ಕಾರ ₹32ಕ್ಕೆ ಕೆ.ಜಿ ಅಕ್ಕಿ ಖರೀದಿಸಿ ರಾಜ್ಯಕ್ಕೆ ₹3ಕ್ಕೆ ನೀಡುತ್ತಿತ್ತು. ಉಳಿದ ₹29 ಅನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಈ ₹3ರಲ್ಲಿ ₹2 ಕಡಿಮೆ ಮಾಡಿ ಅಕ್ಕಿ ಕೊಟ್ಟು, ಅಕ್ಕಿ, ಎಣ್ಣೆ, ಉಪ್ಪಿನ ಪಾಕೇಟ್‌ ಮೇಲೆ ಬೋರ್ಡ್‌ ಹಾಕಿಕೊಂಡರಲ್ಲಾ? ಅಕ್ಕಿಗೆ ₹29 ಕೊಟ್ಟಿದ್ದು ಯಾರು? ಇಲ್ಲಿಂದ ಹೋದ ತೆರಿಗೆ ಹಣದಲ್ಲಿ ತಾನೆ ಈ ಹಣ ನೀಡಿರುವುದು? ದೇಶದಾದ್ಯಂತ ಯೋಧರು, ಕೇಂದ್ರ ಸರ್ಕಾರಿ ನೌಕರರು, ರಾಜತಾಂತ್ರಿಕ ಕಚೇರಿ ನೌಕರರಿಗೆ ಸಂಬಳ, ಸವಲತ್ತು ಯಾರು ನೀಡುತ್ತಾರೆ? ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ, ಉಜ್ವಲ ಯೋಜನೆಯಡಿ 10 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ ಸಂಪರ್ಕ, ಪ್ರಧಾನ ಮಂತ್ರಿ ಅನ್ನ ಕಲ್ಯಾಣ ಯೋಜನೆಯಡಿ ಉಚಿತವಾಗಿ ಪಡಿತರ ನೀಡಿದ್ದು ಯಾವ ಹಣದಿಂದ’ ಎಂದು ಪ್ರಶ್ನಿಸಿದರು.

‘13 ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಲೆಕ್ಕಾಚಾರದ ಕನಿಷ್ಠ ಜ್ಞಾನ ಇದ್ದಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ. ಅವರು ಮೋದಿಗೆ ಪಾಠ ಮಾಡುವುದು ಬೇಕಿಲ್ಲ. ಕೆಂಗಲ್‌ ಹನುಮಂತಯ್ಯ ಅವರಿಂದ ಹಿಡಿದು ಸದಾನಂದಗೌಡ, ಜಗದೀಶ್‌ ಶೆಟ್ಟರ್‌ವರೆಗೆ ಇದ್ದ ರಾಜ್ಯದ ಸಾಲವನ್ನು ಒಮ್ಮೆಲೆ ದ್ವಿಗುಣ ಮಾಡಿದವರು ಸಿದ್ದರಾಮಯ್ಯ. ಅವರ ಲೆಕ್ಕಾಚಾರದ ಜ್ಞಾನವನ್ನು ನಾವು ತಿಳಿಯಬೇಕಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ನಾನು ಅನ್ನಭಾಗ್ಯ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಮೈಸೂರಿನ ದೇವರಾಜ ಮಾರುಕಟ್ಟೆಯನ್ನು ಹೊಸದಾಗಿ ಕಟ್ಟುವ ವಿಚಾರ ಬಂದಾಗ ಮಹಾರಾಜರೇನು ಸ್ವಂತ ದುಡ್ಡಿನಲ್ಲಿ ಕಟ್ಟಿಸಿದ್ದರೇನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಸಿದ್ದರಾಮಯ್ಯ ಅವರು ₹1ಕ್ಕೆ ಕೆ.ಜಿ. ಅಕ್ಕಿ ನೀಡಿದ್ದು ತಮ್ಮ ಸ್ವಂತ ದುಡ್ಡಿನಿಂದಲೇ? ದಲಿತರ ಸಾಲವನ್ನು ಮನ್ನಾ ಮಾಡಿದೆ ಎನ್ನುತ್ತಾರೆ. ಅವರೇನು ಹೊಲದಲ್ಲಿ ದುಡಿದು ತಂದು ಸಾಲ ತೀರಿಸಿದರೇ? ಇದೂ ಜನರ ತೆರಿಗೆ ಹಣ ತಾನೇ? 13 ಬಜೆಟ್‌ ಮಂಡಿಸಿದ, ಮೈಸೂರಿನ ವ್ಯಕ್ತಿ ವಿಚಾರಹೀನವಾಗಿ ಮಾತನಾಡುತ್ತಾರೆ ಎಂದರೆ ನಾಚಿಕೆ ಆಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಒಂದೇ ತಂತ್ರಾಂಶದಡಿ 5,700 ಕಾರ್ಖಾನೆ’

‘ಸಹಕಾರ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲು ಕೇಂದ್ರ ಸಹಕಾರ ಸಚಿವರೊಂದಿಗೆ ಚರ್ಚಿಸಿದ್ದೇವೆ. ಎಲ್ಲ ರಾಜ್ಯಗಳ ಸಹಕಾರ ಇಲಾಖೆ ಮಂತ್ರಿ, ಅಧಿಕಾರಿಗಳನ್ನು ಕರೆಸಿ ಆಯಾ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುವುದಾಗಿ ಕೇಂದ್ರ ಸಚಿವರು ಹೇಳಿದ್ದಾರೆ. ರಾಜ್ಯದಲ್ಲಿ ಸಹಕಾರ ಇಲಾಖೆ ವ್ಯಾಪ್ತಿಯಲ್ಲಿ ಬರುವ 5,700 ಕಾರ್ಖಾನೆಗಳನ್ನು ಒಂದೇ ತಂತ್ರಾಂಶದಡಿ ತರಬೇಕೆಂಬುದು ಕೇಂದ್ರ ಸರ್ಕಾರದ ಉದ್ದೇಶ. ಈ ಯೋಜನೆಯನ್ನು 3 ವರ್ಷಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಿದ್ದೆವು. ಆದರೆ, ಒಂದೇ ವರ್ಷದಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಹೀಗಾಗಿ, ಆ ಕಾರ್ಯ ಪ್ರಗತಿಯಲ್ಲಿದೆ’ ಎಂದುಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

‘ಸಹಕಾರ ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲ ಕಾಯ್ದೆಗಳನ್ನು ಜಾರಿಗೊಳಿಸಲಿದೆ. ಅದಕ್ಕೆ ಪೂರಕ ಮಾಹಿತಿಯನ್ನು ಒದಗಿಸಿದ್ದೇವೆ’ ಎಂದರು.

‘ಕಳೆದ ವರ್ಷ ರಾಜ್ಯದ 3.86 ಲಕ್ಷ ರೈತರಿಗೆ ₹20,810 ಕೋಟಿ ಬೆಳೆ ಸಾಲ ನೀಡಿದ್ದೇವೆ. 33 ಲಕ್ಷ ರೈತರಿಗೆ ₹24 ಸಾವಿರ ಕೋಟಿ ಬೆಳೆ ಸಾಲ ನೀಡುವುದಾಗಿಈ ವರ್ಷದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಈ ಪೈಕಿ 3 ಲಕ್ಷ ಹೊಸ ರೈತರಿಗೆ ಬೆಳೆ ಸಾಲ ನೀಡಲಾಗುತ್ತದೆ’ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌. ನಾಗೇಂದ್ರ, ಮೇಯರ್‌ ಸುನಂದಾ ಪಾಲನೇತ್ರ,ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್‌.ಶ್ರೀವತ್ಸ, ಮುಡಾ ಅಧ್ಯಕ್ಷ ಎಚ್‌.ವಿ. ರಾಜೀವ್‌. ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT