ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಖೆಡ್ಡಾ ತೋಡಿದ ಸಿದ್ದರಾಮಯ್ಯ: ಆರ್.ಅಶೋಕ್‌

'ರೇವಣ್ಣ ಅವರಂತೆ ನಿಂಬೆಹಣ್ಣಿನ ಭವಿಷ್ಯ ಕೇಳಲ್ಲ'
Last Updated 3 ಮೇ 2019, 18:04 IST
ಅಕ್ಷರ ಗಾತ್ರ

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಜೆಡಿಎಸ್‌ನವರಿಗೇ ಖೆಡ್ಡಾ ತೋಡಿದ್ದಾರೆ. ಇದೇ ಕಾರಣದಿಂದ ಎಚ್‌.ಡಿ.ದೇವೇಗೌಡ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಆರ್‌.ಅಶೋಕ್ ಹೇಳಿದರು.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಹೇಗೋ ಇಷ್ಟು ದಿನ ಹೊಂದಾಣಿಕೆಯಿಂದ ಸಾಗಿದ ಮೈತ್ರಿ ಸರ್ಕಾರ ಕಳೆದ ಎರಡು ದಿನಗಳಿಂದ ಹಳಿತಪ್ಪಿದೆ. ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಪ್ರಚಾರ ಮಾಡಿದರೆ ಏನೂ ಪ್ರಯೋಜನವಿಲ್ಲ ಎಂದು ದೇವೇಗೌಡ ಅವರೇ ಹೇಳಿದ್ದಾರೆ. ಹೊಂದಾಣಿಕೆಯನ್ನು ಅವರು ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ನಿಂದ ನಮಗೆ ಉಪಯೋಗವಿಲ್ಲ ಎಂಬುದನ್ನು ಸ್ಪಪಷ್ಟಪಡಿಸಿದ್ದಾರೆ ಎಂದು ಕುಟುಕಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇವೇಗೌಡ ಅವರು ‘ನನ್ನ ಜೀವಮಾನದಲ್ಲಿ ಇಂತಹ ಹೊಲಸು ಸರ್ಕಾರವನ್ನು ನೋಡಿಯೇ ಇಲ್ಲ’ ಎಂದಿದ್ದರು. ಇದೀಗ ಅದೇ ಪಕ್ಷದ ನಾಯಕರ ಜತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಿಂಬೆಹಣ್ಣಿನ ಭವಿಷ್ಯ ಕೇಳಲ್ಲ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ದಾಟಲ್ಲ ಎಂಬ ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಅವರು ಈ ಹಿಂದೆ ಹೇಳಿದ್ದರು. ಅದು ನಡೆಯಿತಾ? ನಾವು ಬಿಜೆಪಿಯವರು ಜನರ ಭವಿಷ್ಯ ಮತ್ತು ನಾಡಿಮಿಡಿತ ಅರಿತುಕೊಂಡು ಕೆಲಸ ಮಾಡುತ್ತಿದ್ದೇವೆ. ರೇವಣ್ಣ ಅವರಂತೆ ನಿಂಬೆಹಣ್ಣಿನ ಭವಿಷ್ಯ ಕೇಳುವ ಕೆಲಸ ಮಾಡಲ್ಲ’ ಎಂದು ವ್ಯಂಗ್ಯವಾಡಿದರು.

ಮೋದಿ ಹವಾ

ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಹವಾ ಇದೆ. ಮೈಸೂರಿನಲ್ಲಿ ಪ್ರತಾಪಸಿಂಹ ಹಾಗೂ ಚಾಮರಾಜನಗರದಲ್ಲಿ ಶ್ರೀನಿವಾಸಪ್ರಸಾದ್‌ ಅವರು ಹೆಚ್ಚು ಮತಗಳ ಅಂತರದಿಂದ ಗೆದ್ದುಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಅವರು ದೇಶಕ್ಕೆ ಅನಿವಾರ್ಯ ಎನಿಸಿದೆ. ದೇಶದ ರಕ್ಷಣೆಗೆ ಅವರು ಕೈಗೊಂಡ ಕ್ರಮಗಳನ್ನು ಜನರು ಗಮನಿಸುತ್ತಿದ್ದಾರೆ. ಭದ್ರತೆಯ ವಿಷಯ ಬಂದಾಗ ಬಿಜೆಪಿ ಗಟ್ಟಿ ನಿಲುವು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ಶಾಸಕರಾದ ಎಸ್‌.ಎ.ರಾಮದಾಸ್, ಎಲ್‌.ನಾಗೇಂದ್ರ, ಮೈಸೂರು–ಕೊಡಗು ಕ್ಷೇತ್ರದ ಪ್ರಭಾರಿ ವಾಮನಾಚಾರ್ಯ, ಸಂಚಾಲಕ ಎನ್‌.ವಿ.ಫಣೀಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಿವಣ್ಣ, ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್, ಮುಖಂಡರಾದ ಸಂದೇಶ್‌ ಸ್ವಾಮಿ ಪಾಲ್ಗೊಂಡಿದ್ದರು.

9 ರಂದು ಮೋದಿ ಸಮಾವೇಶ

ಏಪ್ರಿಲ್‌ 9 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಸಂಜೆ 4ಕ್ಕೆ ಸಮಾವೇಶ ಆರಂಭವಾಗಲಿದೆ ಎಂದು ಆರ್‌.ಅಶೋಕ್ ತಿಳಿಸಿದರು.

ಸಮಾವೇಶವನ್ನು ಈ ಮೊದಲು ಏ.8 ರಂದು ನಡೆಸಲು ತೀರ್ಮಾನಿಸಲಾಗಿತ್ತು. ಅದನ್ನು ಒಂದು ದಿನದಮಟ್ಟಿಗೆ ಮುಂದೂಡಲಾಗಿದೆ. ಪ್ರಧಾನಿ ಅವರು ಏ 9 ರಂದು ಮಧ್ಯಾಹ್ನ ಚಿತ್ರದುರ್ಗದಲ್ಲಿ ಸಮಾವೇಶದಲ್ಲಿ ಪಾಲ್ಗೊಂಡು ಮೈಸೂರಿಗೆ ಬರಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT