ತವರಿನಲ್ಲಿ ಸಿದ್ದರಾಮಯ್ಯಗೆ ಮತ್ತೆ ಮುಖಭಂಗ

ಮಂಗಳವಾರ, ಜೂನ್ 25, 2019
26 °C
ಬೆಂಬಲಿಗ ಅಭ್ಯರ್ಥಿ ಸೋಲು–ವಿರೋಧಿಗಳ ಖೆಡ್ಡಾಕ್ಕೆ ಬಿದ್ದ ಸಮನ್ವಯ ಸಮಿತಿ ಅಧ್ಯಕ್ಷ

ತವರಿನಲ್ಲಿ ಸಿದ್ದರಾಮಯ್ಯಗೆ ಮತ್ತೆ ಮುಖಭಂಗ

Published:
Updated:
Prajavani

ಮೈಸೂರು: ‌ವಿಧಾನಸಭಾ ಚುನಾವಣೆ ವೇಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ‌ಮುಖಭಂಗ ಅನುಭವಿಸಿದ್ದ ಸಿದ್ದರಾಮಯ್ಯ, ವರ್ಷ ಕಳೆಯುವಷ್ಟರಲ್ಲಿ ಮತ್ತೆ ತವರಿನಲ್ಲಿ ಆಘಾತ ಅನುಭವಿಸಿದ್ದಾರೆ.

ಜೆಡಿಎಸ್‌ ಬೇಡಿಕೆಗೂ ಜಗ್ಗದೆ, ಪಟ್ಟು ಹಿಡಿದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಅವರು ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಅದಕ್ಕಾಗಿ ತಮ್ಮದೇ ಪಕ್ಷದ ಸಂಸದರಿದ್ದ ತುಮಕೂರು ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಜೊತೆಗೆ ಕುರುಬ ಸಮುದಾಯದವರೇ ಆದ ಸಿ.ಎಚ್‌.ವಿಜಯಶಂಕರ್‌ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ಹೀಗಾಗಿ, ಈ ಕ್ಷೇತ್ರವು ಕಾಂಗ್ರೆಸ್‌ ಅಭ್ಯರ್ಥಿಗಿಂತ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಪಾಲಿಗೆ ಅಗ್ನಿಪರೀಕ್ಷೆ ಆಗಿತ್ತು. ಆದರೆ, ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಎದುರು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ವಿಜಯಶಂಕರ್‌ ಸೋತಿದ್ದು, ಮತ್ತೆ ಮುಜುಗರ ಅನುಭವಿಸುವಂತಾಗಿದೆ. ಸೋಲಿಗೆ ಈಗ ಎಲ್ಲರೂ ಬೊಟ್ಟು ಮಾಡುತ್ತಿರುವುದು ಸಿದ್ದರಾಮಯ್ಯ ಕಡೆಗೆ. 2014ರಲ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಈ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಿತ್ತು.

‘ಇದು ಕಾಂಗ್ರೆಸ್‌ ಸೋಲಿಗಿಂತ ಸಿದ್ದರಾಮಯ್ಯನವರಿಗೆ ಉಂಟಾದ ದೊಡ್ಡ ಹಿನ್ನಡೆ. ರಾಜ್ಯ ರಾಜಕಾರಣದಲ್ಲಿ ಹಾಗೂ ಹೈಕಮಾಂಡ್‌ ಮಟ್ಟದಲ್ಲಿ ಅವರ ಪ್ರಭಾವ ಕುಗ್ಗಲಿದೆ. ಚಾಮಂಡೇಶ್ವರಿ ಕ್ಷೇತ್ರದ ಸೋಲಿಗೆ ಸೇಡು ತೀರಿಸಿಕೊಳ್ಳಲು ಮುಂದಾಗಿ, ವಿರೋಧಿಗಳು ತೋಡಿದ ಖೆಡ್ಡಾಕ್ಕೆ ಬಿದ್ದಿದ್ದಾರೆ’ ಎಂದೇ ಕಾಂಗ್ರೆಸ್‌ನ ಹಿರಿಯ ರಾಜಕಾರಣಿಯೊಬ್ಬರು ವಿಶ್ಲೇಷಿಸುತ್ತಾರೆ.

ಈ ಭಾಗದ ಪ್ರಮುಖ ನಾಯಕರಾದ ವಿ.ಶ್ರೀನಿವಾಸಪ್ರಸಾದ್‌, ಎಚ್‌.ವಿಶ್ವನಾಥ್‌ ಹಾಗೂ ಜಿ.ಟಿ.ದೇವೇಗೌಡರು ವಿಧಾನಸಭೆ ಚುನಾವಣೆಗೂ ಮೊದಲಿನಿಂದ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ತೊಡೆ ತಟ್ಟುತ್ತಲೇ ಇದ್ದರು. ಒಂದಿಲ್ಲೊಂದು ಸ್ವರೂಪದಲ್ಲಿ ಅವರನ್ನು ಕೆಣಕುತ್ತಲೇ ಬಂದರು.

ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಿ.ಟಿ.ದೇವೇಗೌಡ ಸಾಕಷ್ಟು ಪ್ರಯತ್ನ ನಡೆಸಿದ್ದರು. ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ‘ದೊಡ್ಡ ಗೌಡರ’ ಸ್ಪರ್ಧೆ ವಿಚಾರವನ್ನೇ ಮುಂದಿಟ್ಟಿದ್ದರು. ಆದರೆ, ಸಿದ್ದರಾಮಯ್ಯ ಹಟದ ಮುಂದೆ ಕೈಚೆಲ್ಲಿದ್ದರು. ಈಗ ನೋಡಿದರೆ ಅವರು ಪ್ರತಿನಿಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಮೈತ್ರಿ ಅಭ್ಯರ್ಥಿಗೆ ಹಿನ್ನಡೆಯಾಗಿದೆ.

‘ಕೈ’ಹಿಡಿಯದ ಜೆಡಿಎಸ್‌:

ಕೆಲವೆಡೆ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಜಿಟಿಡಿ ಹೇಳಿಕೆ ನಿಜವಾದಂತಿದೆ.  ‘ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಕಾಂಗ್ರೆಸ್‌ ಸಹಕರಿಸಿದರೆ ಮಾತ್ರ ಮೈಸೂರಿನಲ್ಲಿ ಕಾಂಗ್ರೆಸ್‌ಗೆ ಸಹಕಾರ ಸಿಗಲಿದೆ’ ಎಂಬ ಸಾ.ರಾ.ಮಹೇಶ್‌ ಹೇಳಿಕೆ ಈಗಿನ ಫಲಿತಾಂಶಕ್ಕೆ ಹಿಡಿದ ಕನ್ನಡಿಯಂತಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !