ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಕೆಂಡಾಮಂಡಲ

ಮಾಜಿ ಮುಖ್ಯಮಂತ್ರಿ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ
Last Updated 28 ಜನವರಿ 2019, 17:09 IST
ಅಕ್ಷರ ಗಾತ್ರ

ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯೆ ಕುರಿತು ದೂರು ನೀಡಲು ಮುಂದಾದ ಮಹಿಳೆಯಿಂದ ಮೈಕ್‌ ಕಿತ್ತುಕೊಳ್ಳುವ ಭರದಲ್ಲಿ ಅವರ ಬಟ್ಟೆ ಎಳೆದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೋಪ ಪ್ರದರ್ಶಿಸಿದ್ದಾರೆ. ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ತಿ.ನರಸೀಪುರ ತಾಲ್ಲೂಕಿನ ಗರ್ಗೇಶ್ವರಿ ಗ್ರಾಮದಲ್ಲಿ ಸೋಮವಾರ ಪುತ್ರ ಹಾಗೂ ಶಾಸಕ ಡಾ.ಯತೀಂದ್ರ ಜೊತೆ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

‘8 ತಿಂಗಳಿಂದ ಯಾವುದೇ ಕೆಲಸ ನಡೆಯುತ್ತಿಲ್ಲ. ಕ್ಷೇತ್ರದ ಶಾಸಕ ಯತೀಂದ್ರ ಕೈಗೆ ಸಿಗುತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಕೆಲಸ ಮಾಡಿಕೊಡುತ್ತಿಲ್ಲ. ಅವರಿಗೆ ಬುದ್ಧಿ ಕಲಿಸಿ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರೂ ಆಗಿರುವ ಜಮಲಾರ್‌ ಎಂಬ ಮಹಿಳೆ ಟೇಬಲ್‌ ಕುಟ್ಟಿ ಏರುದನಿಯಲ್ಲಿ ಮಾತನಾಡಿದರು.

ಇದರಿಂದ ಕುಪಿತರಾದ ಸಿದ್ದರಾಮಯ್ಯ, ‘ಬಾಯಿ ಮುಚ್ಚಮ್ಮ ಸಾಕು. ನಡಿಯಮ್ಮಾ ಆಚೆಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆ ಕೈಯಿಂದಮೈಕ್‌ ಕಿತ್ತುಕೊಳ್ಳುವ ಭರದಲ್ಲಿ ಅವರ ದುಪ್ಪಟವೂ ಜಾರಿತು. ಆಗ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಲು ಯತೀಂದ್ರ ಮುಂದಾದರು. ಆಗ ಮಹಿಳೆ ‘ತಪ‍್ಪಾಯಿತು ಸರ್‌’ ಎಂದರು.

‘ಇದು ನಮ್ಮ ಸರ್ಕಾರವಲ್ಲ; ಸಮ್ಮಿಶ್ರ ಸರ್ಕಾರ. ಆ ಶಾಸಕರಿಗೆ (ತಿ.ನರಸೀಪುರ ಕ್ಷೇತ್ರದ ಎಂ.ಅಶ್ವಿನ್‌ ಕುಮಾರ್‌– ಜೆಡಿಎಸ್‌) ಬೇಕಾದ ತಹಶೀಲ್ದಾರ್‌, ಉಪವಿಭಾಗಾಧಿಕಾರಿ ಹಾಕಿಸಿಕೊಂಡಿದ್ದಾರೆ. ಕೇಳುವ ರೀತಿಯಲ್ಲಿಕೇಳಬೇಕು. ತಪ್ಪು ಮಾಡಿದಅಧಿಕಾರಿಗೆ ಕ್ಯಾಕರಿಸಿ ಉಗಿಯುತ್ತಿದ್ದೆ. ಅಧಿಕಾರಿಗಳು, ಯತೀಂದ್ರನ ಮಾತು ಕೇಳದಿದ್ದರೆನನಗೆ ಹೇಳು’ ಎಂದು ಗುಡುಗಿದರು.

‘ಬಿಜೆಪಿ ನಾಯಕರಿಂದ ರಾಜಕೀಯ ಬಣ್ಣ’

‘ವರುಣಾ ಕ್ಷೇತ್ರದಲ್ಲಿ ನಡೆದ ಘಟನೆಗೆ ಬಿಜೆಪಿ ನಾಯಕರು ರಾಜಕೀಯ ಬಣ್ಣ ಬಳಿದು ಆ ಹೆಣ್ಣು ಮಗಳನ್ನು ಅವಮಾನಿಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

‘ಸಿದ್ದರಾಮಯ್ಯ ಒಳ್ಳೆಯವ್ರು’: ‘ಸಿದ್ದರಾಮಯ್ಯ ಒಳ್ಳೆಯವ್ರು. ಒಳ್ಳೆಯ ಮುಖ್ಯಮಂತ್ರಿ ಆಗಿದ್ದವರು. ಅವರ ಬಗ್ಗೆ ನನಗೆ ಯಾವುದೇ ಕೋಪ ಇಲ್ಲ. ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಗಮನಕ್ಕೆ ತರುವಾಗ ಏರುದನಿಯಲ್ಲಿ ಮಾತನಾಡಿದೆ. ಆ ರೀತಿ ಮಾತನಾಡಬಾರದಿತ್ತು. ಟೇಬಲ್‌ ಕುಟ್ಟಿದ್ದರಿಂದ ಅವರಿಗೆ ಕೋಪ ಬಂತು’‌ ಎಂದು ಜಮಲಾರ್‌ ಪ್ರತಿಕ್ರಿಯಿಸಿದರು.

ಎಫ್‌ಐಆರ್‌ ದಾಖಲಿಸಲು ಸೂಚನೆ

ನವದೆಹಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪಗಳನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕರ್ನಾಟಕ ಪೊಲೀಸರಿಗೆ ತಿಳಿಸಿದೆ.

‘ಮಹಿಳೆಯ ಜತೆ ಸಿದ್ದರಾಮಯ್ಯ ಅವರ ನಡವಳಿಕೆ ‘ಆಘಾತ’ ತಂದಿದೆ. ವಿಡಿಯೊದಲ್ಲಿ ಕಾಣುವಂತೆ ಮಹಿಳೆಯ ವಿರುದ್ಧ ಮಾಜಿ ಮುಖ್ಯಮಂತ್ರಿ ಕೇವಲ ಹರಿಹಾಯ್ದಿಲ್ಲ, ಆಕೆಯ ದುಪ್ಪಟ್ಟಾವನ್ನೂ ತೆಗೆದಿದ್ದಾರೆ‘ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ವರ್ತನೆಯನ್ನು ಖಂಡಿಸಿ ರಾಜ್ಯ ಬಿಜೆಪಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತೀವ್ರ ವಾಗಿ ಖಂಡಿಸಿದ್ದು, ‘ಕೌರವರ ಸರ್ಕಾರದ ಆಧುನಿಕ ದುಶ್ಯಾಸನ ?’ ಎಂದು ಟೀಕಿಸಿದ್ದಾರೆ.

ವರುಣ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ನಡೆದ ಘಟನೆ‌ ಆಕಸ್ಮಿಕವಾದುದು, ಅದರಲ್ಲಿ ದುರುದ್ದೇಶ ಇರಲಿಲ್ಲ. 15 ವರ್ಷಗಳಿಂದ‌ ನಾನು ಬಲ್ಲ‌ ಆ‌‌ ಕಾರ್ಯಕರ್ತೆ ನನ್ನ‌ಸೋದರಿ ಸಮಾನ ಎಂದು ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT