ಬುಧವಾರ, ನವೆಂಬರ್ 25, 2020
25 °C
ರಾಜವಂಶಸ್ಥರಿಗೆ ₹ 40 ಲಕ್ಷ ಗೌರವ ಸಂಭಾವನೆ; ದಸರೆ ವೆಚ್ಚದ ವಿವರ ನೀಡಿದ ಸಚಿವ ಸೋಮಶೇಖರ್

ಸರಳ ದಸರೆಗೆ ₹ 2.05 ಕೋಟಿ ಖರ್ಚು: ಸಚಿವ ಎಸ್‌.ಟಿ.ಸೋಮಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್‌ ಕಾರಣ ಈ ಬಾರಿ ಸರಳವಾಗಿ ಆಚರಿಸಲಾದ ಮೈಸೂರು ದಸರಾ ಮಹೋತ್ಸವಕ್ಕೆ ಒಟ್ಟು ₹ 2.05 ಕೋಟಿ ಖರ್ಚಾಗಿದೆ.

ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ದಸರಾ ಆಚರಣೆಯ ವೆಚ್ಚದ ವಿವರಗಳನ್ನು ಭಾನುವಾರ ಇಲ್ಲಿ ಬಿಡುಗಡೆಗೊಳಿಸಿದರು.

‘ರಾಜ್ಯಸರ್ಕಾರವು ಈ ಬಾರಿಯ ದಸರೆಗೆ ₹ 10 ಕೋಟಿ ಬಿಡುಗಡೆ ಮಾಡಿದೆ. ಅದರಲ್ಲಿ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ದಸರಾ ಆಚರಣೆಗೆ ಕ್ರಮವಾಗಿ ₹ 50 ಲಕ್ಷ ಮತ್ತು ₹ 36 ಲಕ್ಷ ನೀಡಲಾಗಿದೆ’ ಎಂದು ಹೇಳಿದರು.

‘ಇನ್ನುಳಿದ ₹ 9.14 ಕೋಟಿಯಲ್ಲಿ ಮೈಸೂರು ದಸರೆಗೆ ₹ 2.05 ಕೋಟಿ ಖರ್ಚಾಗಿದೆ. ಉಳಿಕೆಯಾಗಿರುವ ₹ 7.08 ಕೋಟಿ ಜಿಲ್ಲಾಧಿಕಾರಿ ಖಾತೆಯಲ್ಲಿ ಇದೆ. ಮುಡಾದವರು ದಸರೆಗೆ ₹ 5 ಕೋಟಿ ಕೊಡುವುದಾಗಿ ತಿಳಿಸಿದ್ದರು. ದಸರೆಯ ಉಳಿಕೆ ಮೊತ್ತ ಮತ್ತು ಮುಡಾ ನೀಡುವ ಹಣವನ್ನು ಯಾವುದಕ್ಕೆ ಖರ್ಚು ಮಾಡಬೇಕು ಎಂಬುದನ್ನು ಮುಖ್ಯಮಂತ್ರಿ ಜತೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ತಿಳಿಸಿದರು.

‘ಈ ಹಿಂದಿನ ವರ್ಷಗಳಲ್ಲಿ ದಸರೆಯ ಲೆಕ್ಕ ಕೊಡುತ್ತಿಲ್ಲ ಎಂದು ಸಾರ್ವಜನಿಕರು ಕೇಳುತ್ತಿದ್ದರು. ಈ ಬಾರಿ ಎಲ್ಲವೂ ಪಾರದರ್ಶವಾಗಿ ನಡೆಯಲಿದ್ದು, ದಸರೆ ಮುಗಿದ ಕೂಡಲೇ ಪ್ರತಿ ಪೈಸೆಯ ಲೆಕ್ಕ ಕೊಡುತ್ತೇನೆ ಎಂದಿದ್ದೆ. ಅದರಂತೆ ಲೆಕ್ಕ ಕೊಟ್ಟಿದ್ದೇನೆ’ ಎಂದು ಸಚಿವರು ಹೇಳಿದರು.

‘ಮೈಸೂರು ರಾಜವಂಶಸ್ಥರಿಗೆ ₹ 40 ಲಕ್ಷ ಗೌರವ ಸಂಭಾವನೆ ನೀಡಲಾಗಿದೆ. ಸಾಂಸ್ಕೃತಿಕ ದಸರಾ ನಿರ್ವಹಣೆ ಮತ್ತು ಕಲಾವಿದರ ಸಂಭಾವನೆಗೆ ₹ 44 ಲಕ್ಷ, ದಸರಾ ಕಾರ್ಯಕ್ರಮಗಳ ವೇದಿಕೆ ಮತ್ತು ಅಗತ್ಯ ವ್ಯವಸ್ಥೆ ಕಲ್ಪಿಸಲು ₹ 41 ಲಕ್ಷ ಖರ್ಚಾಗಿದೆ’ ಎಂದು ಮಾಹಿತಿ ನೀಡಿದರು.

ಪರಂಪರೆ ಮುಂದುವರಿಸಿದ್ದೇವೆ: ರಾಜವಂಶಸ್ಥರಿಗೆ ಅಷ್ಟೊಂದು ಗೌರವ ಸಂಭಾವನೆ ಏಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ದಸರಾ ಅವಧಿಯಲ್ಲಿ ಪ್ರತಿ ವರ್ಷವೂ ರಾಜವಂಶಸ್ಥರಿಗೆ ಗೌರವ ಸಂಭಾವನೆ ನೀಡಲಾಗುತ್ತದೆ. ಈ ಪರಂಪರೆ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಅದನ್ನು ಮುಂದುವರಿಸಿದ್ದೇವೆಯೇ ಹೊರತು ನಾವೇನೂ ಹೊಸದಾಗಿ ಆರಂಭಿಸಿಲ್ಲ. ಆದ್ದರಿಂದ ಈ ಬಗ್ಗೆ ಪ್ರಶ್ನೆ ಮಾಡಬೇಡಿ’ ಎಂದು ಹೇಳಿದರು.

ದಸರಾ ಕಾರ್ಯಕ್ರಮಗಳ ವೇದಿಕೆಗೆ ₹ 41 ಲಕ್ಷ ವೆಚ್ಚ ಏಕೆ ಎಂಬ ಪ್ರಶ್ನೆಗೆ, ಲೋಕೋಪಯೋಗಿ ಇಲಾಖೆಯ ನಿಯಮದ ಪ್ರಕಾರವೇ ಹಣ ನೀಡಲಾಗಿದೆ. ದಸರಾ ಉದ್ಘಾಟನೆ ಮತ್ತು ಜಂಬೂ ಸವಾರಿ ಕಾರ್ಯಕ್ರಮದ ವೇದಿಕೆಗಳ ಜತೆಗೆ ಒಂಬತ್ತು ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯ ವೆಚ್ಚವೂ ಇದರಲ್ಲಿ ಒಳಗೊಂಡಿದೆ ಎಂದು ಉತ್ತರಿಸಿದರು.

ದೀಪಾಲಂಕಾರಕ್ಕೆ ₹ 3.5 ಕೋಟಿ

ದಸರಾ ದೀಪಾಲಂಕಾರ ಸೆಸ್ಕ್‌ ವತಿಯಿಂದ ಮಾಡಿರುವ ಕಾರಣ ಸಚಿವರು ಕೊಟ್ಟ ವೆಚ್ಚದ ವಿವರದಲ್ಲಿ ಅದನ್ನು ಸೇರಿಸಿಲ್ಲ.

‘ಪ್ರತಿ ವರ್ಷ 100 ಕಿ.ಮೀ ನಷ್ಟು ದೀಪಾಲಂಕಾರ ಮಾಡುತ್ತಿದ್ದರೆ, ಈ ಬಾರಿ 52 ಕಿ.ಮೀ. ನಷ್ಟು ಮಾತ್ರ ಮಾಡಲಾಗಿದೆ. ವಿದ್ಯುತ್‌ ಬಳಕೆಯ ಖರ್ಚು ₹ 20 ಲಕ್ಷ ಸೇರಿದಂತೆ ಅಂದಾಜು ₹ 3.5 ಕೋಟಿ ವೆಚ್ಚ ಆಗಿದೆ’ ಎಂದು ಸೆಸ್ಕ್‌ ಮೂಲಗಳು ತಿಳಿಸಿವೆ.

‘ಮೈಸೂರು ಹಬ್ಬಕ್ಕೆ ಚಿಂತನೆ’

‘3 ದಿನಗಳ ಮೈಸೂರು ಹಬ್ಬ ಆಯೋಜಿಸುವ ಚಿಂತನೆ ಇದೆ. ಆದರೆ ಎಲ್ಲದಕ್ಕೂ ಕೊರೊನಾ ಹೋಗಬೇಕು. ಆ ಬಳಿಕ ಎಲ್ಲರ ಸಲಹೆಗಳನ್ನು ಪಡೆದು ಮೈಸೂರು ಹಬ್ಬದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು