ಮಂಗಳವಾರ, ಮೇ 11, 2021
28 °C

ವಿಸ್ತಾರ ಇಲ್ಲದಿದ್ದರೆ ಆಳವೂ ಇರದು: ಭೈರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ವಿಸ್ತಾರ ಇಲ್ಲದೇ ಹೋದರೆ ಆಳವೂ ಇರುವುದಿಲ್ಲ. ವಿಸ್ತಾರ ಮತ್ತು ಆಳ ಪರಸ್ಪರ ಪೂರಕ. ಎಲ್ಲವೂ ಸಂಕ್ಷಿಪ್ತವಾಗಿರಬೇಕು ಎನ್ನುವ ಪರಿಕಲ್ಪನೆ ಬಹಳ ದಿನ ಬದುಕುವುದಿಲ್ಲ’ ಎಂದು ಸಾಹಿತಿ ಎಸ್.ಎಲ್‌.ಭೈರಪ್ಪ ತಿಳಿಸಿದರು.

ಮೈಸೂರು ರಂಗಾಯಣದಲ್ಲಿ ಬುಧವಾರ ನಡೆದ ‘ಚಹಾದ ಜೋಡಿ ಚರ್ಚಾ ಪರ್ವ’ ಸಂವಾದದಲ್ಲಿ ಅವರು ಮಾತನಾಡಿದರು.

‘ಪರ್ವ’ ನಾಟಕ ವಿಸ್ತಾರವಾಯಿತು. ಅದು ಸಮಯ, ಹಣ, ಶಕ್ತಿ ಅಪವ್ಯಯಕ್ಕೆ ಕಾರಣ ಎಂಬ ಟೀಕೆಗಳು ಬರುತ್ತಿವೆ. ಇದೇ ಬಗೆಯ ಟೀಕೆಗಳು ಕನ್ನಡದ ನವ್ಯ ಸಾಹಿತ್ಯ ಕಾಲಘಟ್ಟದಲ್ಲೂ ಬಂದಿತ್ತು. ನವೋದಯ ಸಾಹಿತ್ಯವನ್ನು ಕೆಲವು ನವ್ಯ ಸಾಹಿತಿಗಳು ‘ಆನೆ ಲದ್ದಿ’ ಎಂದೇ ಟೀಕಿಸಿದರು. ಈ ನಾಟಕ ಕುರಿತು ಮಾಡುವ ಟೀಕಾಕಾರರೂ ನವ್ಯ ಕಾಲಘಟ್ಟಕ್ಕೆ ಸೇರಿದವರೆಂದು ತಿಳಿದು, ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದರು.

ಹಿಂದೆ ಕಂಪನಿ ನಾಟಕವನ್ನು ದಿನವಿಡೀ ಜನ ನೋಡುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಪೌರಾಣಿಕ ನಾಟಕವನ್ನು ರಾತ್ರಿಯಿಂದ ಮುಂಜಾನೆಯ
ವರೆಗೆ ನೋಡುತ್ತಾರೆ ಎಂದರು.

‘ನಾಟಕ ನೋಡಿದ ಮೇಲೆ ಪರ್ವ ಕಾದಂಬರಿಯನ್ನು ಮತ್ತೊಮ್ಮೆ ಓದಬೇಕು ಎಂದೆನಿಸಿದೆ. ಮತ್ತೊಂದು ಬಾರಿ ನಾಟಕ ನೋಡಿ, ಓದುತ್ತೇನೆ’ ಎಂದರು.

‘ಪರ್ವ ಕಾದಂಬರಿ ಬರೆಯುವುದಕ್ಕೂ ಮುಂಚೆ ಸಾಕಷ್ಟು ಸಂಶೋಧನೆಗಳನ್ನು ಕೈಗೊಂಡೆ. ಹಲವು ಮಹಾಭಾರತಗಳನ್ನು, ಪಿ.ವಿ.ಕಾಣೆ ಅವರ ‘ಹಿಸ್ಟರಿ ಆಫ್ ಧರ್ಮಶಾಸ್ತ್ರ’ ಗ್ರಂಥದ 7 ಸಂಪುಟಗಳನ್ನೂ ಅಧ್ಯಯನ ಮಾಡಿದ್ದೆ’ ಎಂದು ವಿವರಿಸಿದರು.

ಟೀಕಿಸಿದ್ದ ಸತ್ಯು: ಈಚೆಗೆ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾ ನಿರ್ದೇಶಕ ಎಂ.ಎಸ್‌.ಸತ್ಯು ಮಾತನಾಡಿ, ‘ಪರ್ವ ನಾಟಕ ದೀರ್ಘವಾಗಿ ಬೇಕಿರಲಿಲ್ಲ. ನಾವು ಏನನ್ನು ಹೇಳಬೇಕು ಎಂಬುದನ್ನು ಸೂಕ್ಷ್ಮವಾಗಿ, ಒಂದು ಸೀಮಿತ ಚೌಕಟ್ಟಿನಲ್ಲಿ ಹೇಳಬೇಕಿತ್ತು’ ಎಂದು ಟೀಕಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು