ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಹುಡುಕಿ ಪಠ್ಯ ಬದಲಿಸಲು ಮುಂದಾದರೆ ಕೆಲವರು ಗಲಾಟೆ ಮಾಡುತ್ತಿದ್ದಾರೆ: ಭೈರಪ್ಪ

Last Updated 2 ಜೂನ್ 2022, 11:18 IST
ಅಕ್ಷರ ಗಾತ್ರ

ಮೈಸೂರು: ‘ಸತ್ಯವನ್ನು ಹುಡುಕಿ ಅದನ್ನು ಪಠ್ಯಕ್ರಮದಲ್ಲಿ ಅಳವಡಿಸಿ ಮಕ್ಕಳಿಗೆ ಕಲಿಸಬೇಕು. ಐಡಿಯಾಲಜಿಗಳನ್ನು ಅವರಿಗೆ ಕಲಿಸಬಾರದು. ಈ ನಿಟ್ಟಿನಲ್ಲಿ ಸರ್ಕಾರವು ಪಠ್ಯಕ್ರಮ ಬದಲಾವಣೆಗೆ ಮುಂದಾದರೆ ಕೆಲವರು ನಾನಾ ರೀತಿಯಲ್ಲಿ ಗಲಾಟೆ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಹೀಗೇಕೆ ಆಗುತ್ತಿದೆ?’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಕೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಕೆಲವರು ತೆಗೆದಿರುವ ತಗಾದೆಯಿಂದ ಮತ್ತು ಮಾಡುತ್ತಿರುವ ಗಲಾಟೆಯಿಂದ ಸರ್ಕಾರದ ಮೇಲೆ ಸಹಜವಾಗಿಯೇ ಒತ್ತಡ ಆಗುತ್ತದೆ’ ಎಂದರು.

‘ಶಿಕ್ಷಣ ‌ಸಚಿವ ಬಿ.ಸಿ.ನಾಗೇಶ್‌ ಅವರ ಮನೆಗೆ ಕೆಲವರು ಬೆಂಕಿ ಹಚ್ಚಲು ಹೋಗಿದ್ದಾರೆ. ಪೊಲೀಸರು ಇದ್ದಿದ್ದರಿಂದ ಬೆಂಕಿ ಹಚ್ಚುವುದು ತಪ್ಪಿದೆ. ಯಾರದ್ದಾದರೂ ಬೆಂಬಲ ಇದ್ದವರಷ್ಟೆ ಬೆಂಕಿ ಹಾಕುವ ಕೆಲಸ ಮಾಡುತ್ತಾರೆಯೇ ಹೊರತು, ಯಾರೋ ಹುಡುಗರು ಮಾಡುವುದಿಲ್ಲ’ ಎಂದರು.‌ ‘ಹೀಗಾದರೆ, ದೇಶದಲ್ಲಿ ಐಕ್ಯತೆ‌ ಬರುವುದು ಯಾವಾಗ, ನಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳುವುದು ಯಾವಾಗ’ ಎಂದು ಪ್ರಶ್ನಿಸಿದರು.

‘ಪಠ್ಯ ವಾಪಸ್ ಚಳವಳಿ ಬಗ್ಗೆ ನನಗೂ ಕೆಲವು ಅಭಿಪ್ರಾಯಗಳಿವೆ. ಆದರೆ, ಅದನ್ನು ಹಂಚಿಕೊಳ್ಳುವುದಕ್ಕೂ ತಡ ಮಾಡಿದೆ. ಎಲ್ಲದರಲ್ಲೂ ನಾನು ನಿಧಾನವೇ’ ಎಂದು ಮಾತು ಆರಂಭಿಸಿದ ಅವರು, ‌‌‘ನರೇಂದ್ರ ಮೋದಿ ಪ್ರಧಾನಿಯಾದ ನಂತರ ನಡೆದಿದ್ದ ಪ್ರಶಸ್ತಿ ವಾಪಸ್ ಚಳವಳಿಯ ರೀತಿಯದ್ದೇ‌ ಹೋರಾಟ ಇದಾಗಿದೆ. ಹಲವು ದಿನಗಳ ನಂತರ ಆ ಚಳವಳಿ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಗೆ ಸಂಬಂಧಿಸಿದ ಸಂಸ್ಥೆಯಲ್ಲೇ ಕೆಲಸ ಮಾಡಿದವ ನಾನು. ಆಗ ಪ್ರಧಾನಿಯಾಗಿದ್ದ ದಿವಂಗತ ಇಂದಿರಾ ಗಾಂಧಿ ಅವರು ಪಠ್ಯಕ್ರಮ ಬದಲಾವಣೆಗೆ, ರಾಷ್ಟ್ರೀಯ ಐಕ್ಯತೆ ತರುವುದಕ್ಕೆ ಮುಂದಾದರು. ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದ ಪಾರ್ಥಸಾರಥಿ ಅವರನ್ನು ಅಧ್ಯಕ್ಷರು ಹಾಗೂ ನನ್ನನ್ನೂ ಸೇರಿಸಿ ಐವರು ಸದಸ್ಯರ ಸಮಿತಿ ರಚಿಸಿದ್ದರು’.

‘ನಮ್ಮ ಪಠ್ಯಕ್ರಮ ಕಲುಷಿತವಾಗಿದೆ.‌ ದೇಶದ ಏಕತೆ ಸಾಧಿಸುವುದಕ್ಕಾಗಿ ಪಠ್ಯಕ್ರಮದಲ್ಲಿನ ಕಲ್ಮಶವನ್ನು ಸ್ವಚ್ಛಗೊಳಿಸಬೇಕಾಗಿದೆ ಎಂದು ಪಾರ್ಥಸಾರಥಿ ಹೇಳಿದ್ದರು. ಸ್ವಚ್ಛ ಮಾಡುವುದು ಎಂದರೇನರ್ಥ ಎಂದು ಅವರನ್ನು ಕೇಳಿದ್ದೆ. ಔರಂಗಜೇಬ್‌ ದೇಗುಲ‌ ಕೆಡವಿದ, ಕಾಶಿಯಲ್ಲಿ ಮಸೀದಿ ಕಟ್ಟಿದ ಎಂದೆಲ್ಲಾ ಪಠ್ಯದಲ್ಲಿದೆ; ಅವನ್ನೆಲ್ಲ ತೆಗೆಯಬೇಕು. ಮಕ್ಕಳ ಮನಸ್ಸಿನಲ್ಲಿ ಅವೆಲ್ಲವನ್ನು ಬಿತ್ತುವುದು ಬೇಕಾ ಎಂದು ಅವರು ಕೇಳಿದ್ದರು. ಆ ಪಠ್ಯದಲ್ಲಿ ಇರುವುದೆಲ್ಲವೂ ನಿಜವೇ ಎಂದೂ ಕೇಳಿದ್ದೆ. ಮಸೀದಿಯೊಂದರ ಬಳಿ ಕಲ್ಲಿನ ಬಸವಣ್ಣ ಮೂರ್ತಿ ಇದೆ. ಅದು ಮಸೀದಿ ನೋಡುತ್ತಾ ಕುಳಿತಿದೆ ಎಂದರೆ ಅಲ್ಲಿ ದೇವಸ್ಥಾನವಿತ್ತು ಎನ್ನುವುದನ್ನು ತೋರಿಸುತ್ತದೆ ಎಂದರ್ಥ ಎಂದಿದ್ದೆ. ಅವರಿಗೆ ಉತ್ತರ ಹೇಳಲಾಗಲಿಲ್ಲ. ಪ್ರತ್ಯೇಕವಾಗಿ ಕರೆದೊಯ್ದು ನನ್ನೊಂದಿಗೆ ಚರ್ಚಿಸಿದ್ದರು; ಅಸಹಾಯಕತೆ ವ್ಯಕ್ತಪಡಿಸಿದ್ದರು’ ಎಂದು ನೆನೆದರು.‌

‘ಅದಾಗಿ 15 ದಿನಗಳಲ್ಲಿ ಹೊಸ ಸುತ್ತೋಲೆ ಬಂತು. ಸಮಿತಿಯಿಂದ ನನ್ನನ್ನು ತೆಗೆದು ಕಮಿಟೆಡ್ ಕಮ್ಯುನಿಸ್ಟ್‌ ಒಬ್ಬರನ್ನು ಹಾಕಿದ್ದರು.‌ ಬಳಿಕ ಹಲವು ಪಠ್ಯಕ್ರಮ ಪರಿಷ್ಕರಿಸಲಾಯಿತು. ಅದನ್ನು ಕಾಂಗ್ರೆಸ್‌ ಆಡಳಿತವಿದ್ದ ರಾಜ್ಯಗಳು ಅಳವಡಿಸಿಕೊಂಡವು. ಹೀಗಾದಾಗ ಯಾವ ಪಠ್ಯಕ್ರಮವು ಪರಿಪೂರ್ಣ (ಐಡಿಯಲ್) ಅಥವಾ ಪ್ರಾಮಾಣಿಕವಾದುದು ಎನ್ನುವ ಪ್ರಶ್ನೆ ಬರುತ್ತದೆ’ ಎಂದರು.

‘ಬಳಿಕ ನಾಲ್ಕೈದು ವರ್ಷ ಬಹಳಷ್ಟು ಪುಸ್ತಕಗಳನ್ನು ಓದಿದೆ. ಅದನ್ನು ಆಧರಿಸಿ‘ಆವರಣ’ ಕಾದಂಬರಿ ಬರೆದೆ. ಓದಿದ್ದ ಎಲ್ಲ ಪುಸ್ತಕಗಳನ್ನೂ ಅಲ್ಲಿ ನಮೂದಿಸಿದ್ದೇನೆ. ಆ ಪುಸ್ತಕ ಓದಿ ದಿವಂಗತ ಯು.ಆರ್. ಅನಂತಮೂರ್ತಿ‌ ಸೇರಿದಂತೆ ಹಲವರು ತಗಾದೆ ತೆಗೆದರು. ಸುಳ್ಳು ಬರೆದಿದ್ದಾರೆ ಎಂದು ಗಲಾಟೆ ಮಾಡಿದರು. ವಿಚಾರಸಂಕಿರಣವನ್ನೂ ನಡೆಸಿದರು. ಆ ಪರಿಣಾಮ ನನ್ನ ಪುಸ್ತಕವನ್ನು ಬಹಳಷ್ಟು ಮಂದಿ ಓದಿದರು. ಅದು ರಾಜ್ಯವೊಂದರಲ್ಲೇ 65ನೇ ಮುದ್ರಣವನ್ನು ಕಂಡಿದೆ’ ಎಂದು ಹೇಳಿದರು.

‘ಪಠ್ಯಕ್ರಮವನ್ನು ಮಾಡಿರುವವರಾರು ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗುತ್ತದೆ. ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರೂ ಪ್ರಯತ್ನಿಸಿದ್ದರು. ಆದರೆ, ಆಗಿರಲಿಲ್ಲ’ ಎಂದು ತಿಳಿಸಿದರು.

‘ಮೋದಿ ನೇತೃತ್ವದ ಸರ್ಕಾರ ಬಂದಾಗ ಪ್ರಶಸ್ತಿ ವಾಪಸ್ ಚಳವಳಿಯನ್ನು ಕೆಲವರು ಶುರು ಮಾಡಿದ್ದರು. ಆಗ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದವರು ಏನು ಮಾಡುವುದು ಎಂದು ಚರ್ಚಿಸಿದ್ದರು. ವಾಪಸ್ ಕೊಟ್ಟಿದ್ದನ್ನು ಸ್ವೀಕರಿಸಿ ಎಂದು ಅವರಿಗೆ ಹೇಳಿದ್ದೆ. ಅಲ್ಲದೇ, ಪ್ರಶಸ್ತಿಯೊಂದಿಗೆ ಕೊಟ್ಟಿದ್ದ ಹಣವನ್ನೂ ವಾಪಸ್ ಕೇಳಿ ಎಂದಿದ್ದೆ’ ಎಂದರು.

‘ಪಠ್ಯಕ್ರಮ ವಾಪಸ್‌ ಗಲಾಟೆಯು ಪ್ರಶಸ್ತಿ ವಾಪಸ್‌ ಚಳವಳಿಯ ಇನ್ನೊಂದು ರೂಪವಷ್ಟೆ. ಬೇರೆ ಬೇರೆ ರೂಪದಲ್ಲಿ ಗಲಾಟೆ ಮಾಡಿಸುತ್ತಾರೆ; ಅದರಲ್ಲಿ ಹೊಸದೇನೂ‌ ಇಲ್ಲ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಆರೋಪಿಸಿದರು.

‘ನಮ್ಮ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಸಮೀಪಿಸಿದಾಗ ಏನನ್ನು ಬೇಕಾದರೂ ಮಾಡುತ್ತೇವೆ. ಹೆತ್ತ ತಾಯಿಯನ್ನೂ ಕೂಡ ಜುಟ್ಟು ಹಿಡಿದು ಕೊಟ್ಟು ಬಿಡುತ್ತೇವೆ. ನಮ್ಮ ಪ್ರಜಾಪ್ರಭುತ್ವ ಹಿಂದೆಲ್ಲಾ ಏನು ಮಾಡಿತು?’ ಎಂದು ಕೇಳಿದರು.

‘ರಂಗಾಯಣ ನಿರ್ದೇಶಕಸಿ. ಅಡ್ಡಂಡ ಕಾರ್ಯಪ್ಪ ಕೊಡಗಿನವರು. ಅಲ್ಲಿ ಟಿಪ್ಪು ಸುಲ್ತಾನ್ ಏನೇನು ಮಾಡಿದರು ಎನ್ನುವುದು ಅವರಿಗೆ ಗೊತ್ತಿದೆ.‌ ಅದನ್ನು ಹೇಳಿದ್ದಕ್ಕೆ ಕೆಲವರಿಗೆ ಸಿಟ್ಟು ‌ಬಂದಿತು. ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯುವಂತೆ ಒತ್ತಾಯಿಸಿ‌ ಚಳವಳಿ ನಡೆಸಿದರು. ಕೆಲವು ದಿನಗಳ ‌ನಂತರ‌ ಸುಮ್ಮನಾದರು. ನಾಟಕ‌ ಇರುವುದು‌ ಕಲೆಗಲ್ಲ ಚಳವಳಿ ಮಾಡುವುದಕ್ಕೆ ಎಂದೂ ಹೇಳಿದರು. ನಾಟಕ ಚಳವಳಿಯೇ ಅದೊಂದು ರಸಾನುಭವ ಅಲ್ಲವೇ ಅದು’ ಎಂದು ಕೇಳಿದರು.

‘ಟಿಪ್ಪು ಸುಲ್ತಾನ್‌ ‌ವಿಚಾರದಲ್ಲಿ ಎಡಪಂಥೀಯರು, ಮುಸ್ಲಿಮರು ಮೃದು ಧೋರಣೆ ತಳೆದಿದ್ದಾರೆ. ಎಕ್ಸ್‌ಪ್ರೆಸ್‌ ರೈಲಿಗೆ ಟಿಪ್ಪು ಹೆಸರೇ ಆಗಬೇಕು. ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್‌ ಕಲಾಂ ಅವರ ಹೆಸರು ಯಾಕಾಗಬಾರದು? ಮಹಾರಾಜರ ಹೆಸರಿಡಬೇಕು ಎಂದು ಸಂಸದ ಪ್ರತಾಪ ಸಿಂಹ ಹೇಳುತ್ತಿರುವುದು ತಪ್ಪಿಲ್ಲ. ಟಿಪ್ಪುವಿನ ‌ನಿಜ‌ ಸ್ವರೂಪ ಏನು ಎನ್ನುವುದಕ್ಕೆ ಪುಸ್ತಕಗಳಿವೆ. ಪುಸ್ತಕವೊಂದನ್ನು ಪ್ರಧಾನ ಗುರುದತ್ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅದು 16 ಮುದ್ರಣಗಳನ್ನು ಕಂಡಿದೆ. ಟಿಪ್ಪು ಶೃಂಗೇರಿಗೆ ಕಾಣಿಕೆ ಕೊಟ್ಟಿದ್ದನ್ನೆ ಹೇಳುತ್ತಾರೆಯೇ ಹೊರತು ಕೊಂದು ಹಾಕಿದ್ದನ್ನೆಲ್ಲ ಮರೆತು ‌ಬಿಟ್ಟಿದ್ದಾರೆ’ ಎಂದು ಸಮರ್ಥಕರನ್ನು ಟೀಕಿಸಿದರು.

‘ನಮ್ಮ ದೇಶದಲ್ಲಿ ಯಾಕೆ‌ ಹೀಗಾಗುತ್ತಿದೆ? ರಾಷ್ಟ್ರೀಯತೆ, ಐಕ್ಯತೆ‌ ಎಂದರೇನು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಔರಂಗಜೇಬ್‌ ದೇವಸ್ಥಾನಗಳನ್ನು ಒಡೆದಿದ್ದಾರೆ.‌ ಅವನಲ್ಲಿ ಅತಿರೇಕಗಳು ಕೂಡ ಇದ್ದವು. ಅಂಥವರ ವಿಷಯದಲ್ಲಿ ಬರೆಯುವಾಗ ತಿಪ್ಪೆ ಸಾರಿಸುವ ಕೆಲಸವನನ್ನಷ್ಟೆ ಮಾಡಿಕೊಂಡು ಬಂದಿದ್ದಾರೆ. ಇದನ್ನು ಪ್ರಶ್ನಿಸಿದರೆ‌ ಕೋಮುವಾದಿ ಎನ್ನುತ್ತಾರೆ’ ಎಂದರು.

‘ಪಠ್ಯ ಪರಿಷ್ಕರಣೆ ಅಥವಾ ಈಗ ಸೇರಿಸಿರುವ ಪಠ್ಯ ವಾಪಸ್‌ ಪಡೆಯಬೇಕೋ, ಬೇಡವೋ ಎಂಬ ವಿಷಯದಲ್ಲಿ ನಾನು ಯಾವ ಸಲಹೆಯನ್ನೂ ಕೊಡುವುದಿಲ್ಲ’ ಎಂದಷ್ಟೆ ಪ್ರತಿಕ್ರಿಯಿಸಿದರು. ಪ್ರಶ್ನೆಗಳಿಗೆ ಉತ್ತರಿಸಲು ಬಯಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT