ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದಿಂದ ಜೀವನದ ಸಮಸ್ಯೆ ಬಗೆಹರಿಯದು

ಎರಡು ದಿನಗಳ ಸಾಹಿತ್ಯೋತ್ಸವಕ್ಕೆ ತೆರೆ: ಎಸ್‌.ಎಲ್‌.ಭೈರಪ್ಪ ಅಭಿಪ್ರಾಯ
Last Updated 20 ಜನವರಿ 2019, 16:44 IST
ಅಕ್ಷರ ಗಾತ್ರ

ಮೈಸೂರು: ‘ಸಾಹಿತ್ಯವನ್ನು ಅದರ ರಸ ಅನುಭವಿಸಲು ಓದಬೇಕೇ ಹೊರತು ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಓದಬಾರದು. ಯಾರ ಜೀವನದ ಸಮಸ್ಯೆಯನ್ನೂ ನಾನು ಬಗೆಹರಿಸುವುದಿಲ್ಲ. ಓದುಗರೂ ಅದನ್ನು ನಿರೀಕ್ಷಿಸಬಾರದು’ ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ಹೇಳಿದರು.

ಎಸ್‌.ಎಲ್‌.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ‘ಎಸ್.ಎಲ್‌.ಭೈರಪ್ಪ ಸಾಹಿತ್ಯೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

‘ಸಾಹಿತಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದು ಮುಖ್ಯ. ಎಲ್ಲ ಕಾಲಕ್ಕೂ ಅನ್ವಯವಾಗುವ ವಿಷಯವೊಂದರ ಬೇರುಗಳನ್ನು ಹಿಡಿದುಕೊಂಡು ಬರೆದರೆ ಆ ಸಾಹಿತ್ಯದ ಆಯುಸ್ಸು ದೀರ್ಘವಾಗಿರುತ್ತದೆ ಎಂಬ ಪರಿಜ್ಞಾನ ನನಗೆ ಆರಂಭದಿಂದಲೂ ಇದೆ. ಅಂತಹ ಜ್ಞಾನ ನನ್ನ ಸಾಹಿತ್ಯಕ್ಕೆ ಗಟ್ಟಿತನ ಕೊಟ್ಟಿದೆ. ಅದಕ್ಕಾಗಿ ಜನರು ನನ್ನ ಕಾದಂಬರಿಗಳನ್ನು ಓದುತ್ತಿದ್ದಾರೆ’ ಎಂದರು.

ಕಮ್ಯುನಿಸ್ಟ್‌ ಸಿದ್ದಾಂತದ ಪ್ರಭಾವದಿಂದ ಭಾರತದಲ್ಲಿ ಪ್ರಗತಿಪರ ಚಳವಳಿ ಆರಂಭವಾಯಿತು. ಆ ಬಳಿಕ ನವ್ಯ ಮತ್ತು ಇತರ ಸಾಹಿತ್ಯ ಚಳವಳಿಗಳು ಶುರುವಾದವು. ಇಂತಹ ಸಾಹಿತ್ಯ ಚಳವಳಿಗಳ ಅಬ್ಬರವನ್ನು ತಡೆದುಕೊಳ್ಳಲು ಎಷ್ಟೋ ಉದಯೋನ್ಮುಖ ಲೇಖಕರಿಗೆ ಆಗಲಿಲ್ಲ ಎಂದು ಹೇಳಿದರು.

‘ಚಳವಳಿ ಸಾಹಿತಿಗಾರರು ಗುಂಪು ಕಟ್ಟಿಕೊಂಡಿದ್ದರು. ಆದ್ದರಿಂದ ಒಂಟಿಯಾಗಿದ್ದುಕೊಂಡು ಅವರನ್ನು ಎದುರಿಸುವುದು ಹೇಗೆ ಎಂಬ ಹೆದರಿಕೆ ಯುವ ಬರಹಗಾರರಲ್ಲಿ ಇತ್ತು. ಆದರೆ ಈ ಪರಿಸ್ಥಿತಿಯಲ್ಲಿ ನಾನು ಧೈರ್ಯದಿಂದ ಬರೆದೆ. ತತ್ವಶಾಸ್ತ್ರ, ಸೌಂದರ್ಯ ಶಾಸ್ತ್ರ ಮತ್ತು ಸಾಹಿತ್ಯ ಮೀಮಾಂಸೆ ಓದಿದ್ದು ನನಗೆ ಇದ್ದಂತಹ ಬಲ ಆಗಿತ್ತು. ಟೀಕಾಕಾರರು ಏನು ಹೇಳಿದರೂ ಅದಕ್ಕೆ ಪ್ರತಿಕ್ರಿಯಿಸದೆ ನನ್ನ ಹಾದಿಯಲ್ಲಿ ಮುಂದುವರಿದೆ’ ಎಂದು ತಮ್ಮ ಪಯಣದ ಹಾದಿಯನ್ನು ನೆನಪಿಸಿಕೊಂಡರು.

‘ಒಬ್ಬ ಸೃಜನಶೀಲ ಲೇಖಕ ಸಾಹಿತ್ಯದ ಮೇಲೆ ಮಾತ್ರ ಗಮನಹರಿಸಬೇಕು. ಆತ ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಆತನಲ್ಲಿರುವ ಭಾವನೆಗಳು ಮಾತಿನ ಬದಲು, ಕೃತಿಯಲ್ಲಿ ಹೊರಹೊಮ್ಮಬೇಕು. ನನ್ನ ಮಾಧ್ಯಮ ಕಾದಂಬರಿ. ಆದ್ದರಿಂದ ಭಾವನೆಗಳನ್ನು ಕಾದಂಬರಿಗಳ ರೂಪದಲ್ಲಿ ಹೊರತಂದೆ’ ಎಂದರು.

ರಾಜಸ್ತಾನದ ನಾಟಕಕಾರ, ವಿಮರ್ಶಕ ಡಾ.ನಂದಕಿಶೋರ್‌ ಆಚಾರ್ಯ ಮಾತನಾಡಿ, ಸಾಹಿತ್ಯವು ಜ್ಞಾನಾರ್ಜನೆಯ ಪ್ರಕ್ರಿಯೆಯಾಗಿದ್ದು, ಅದು ಸ್ವತಂತ್ರ ಅನ್ವೇಷಣೆ ನಡೆಸಲು ಇರುವ ಒಂದು ಮಾರ್ಗ ಎಂದರು.

ಕಾದಂಬರಿಗಳು ನಮ್ಮ ಅಂತಃಕರಣವನ್ನು ಕೆದಕಬೇಕು. ಭೈರಪ್ಪ ಅವರ ‘ಸಾಕ್ಷಿ’, ‘ಪರ್ವ’ ಕಾದಂಬರಿಗಳು ಆ ಕೆಲಸ ಮಾಡುತ್ತವೆ. ಭೈರಪ್ಪ ಅವರು ತಮ್ಮ ಕಾದಂಬರಿಗಳಲ್ಲಿ ಕರ್ನಾಟಕದ ಒಂದು ಸಣ್ಣ ಗ್ರಾಮದ ಚಿತ್ರಣವನ್ನು ನೀಡಿದರೆ, ಅದನ್ನು ಓದುವಾಗ ಆ ಚಿತ್ರಣ ಇಡೀ ಭಾರತಕ್ಕೆ ಸಂಬಂಧಿಸಿದ್ದು ಎಂಬ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ ಎಂದು ತಿಳಿಸಿದರು.

ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್, ಎಸ್‌.ಎಲ್‌.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ.ಜಿ.ಎಲ್‌.ಶೇಖರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT