ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಅರಣ್ಯ ಯೋಜನೆ ಜಾರಿಗೆ ಸಿದ್ಧತೆ

ಜಿಲ್ಲಾಮಟ್ಟದ ಅಧಿಕಾರಿಗಳ, ಸಾರ್ವಜನಿಕರ ಸಭೆ
Last Updated 27 ಮೇ 2019, 19:33 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ನಗರ ಪ್ರದೇಶದಲ್ಲಿ ಪ್ರಯೋಗಾತ್ಮಕವಾಗಿ ಕಿರು ಅರಣ್ಯ ಸ್ಥಾಪಿಸಲು ಚಿಂತನೆ ನಡೆದಿದೆ ಎಂದು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ್‌ ಹೇಳಿದರು.

ನಗರದ ಅರಣ್ಯ ಭವನದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿ ಮತ್ತು ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ನಗರ ವ್ಯಾಪ್ತಿಯಲ್ಲಿ ಈಗಾಗಲೇ 30ಸಾವಿರ ಸಸಿಗಳನ್ನು ನೆಡಲಾಗಿದೆ. ಸಸಿಗಳ ರಕ್ಷಣೆಯ ಉದ್ದೇಶದಿಂದ 2ರಿಂದ 3ಅಡಿ ಇರುವ ಸಸಿಗಳನ್ನು ನೆಡದೆ 6ರಿಂದ 8 ಅಡಿ ಎತ್ತರದ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗಿದೆ. ನಗರದ ಮಧ್ಯಭಾಗದಲ್ಲಿ ಕಿರು ಅರಣ್ಯ ಸ್ಥಾಪಿಸಿ, ಮೈಸೂರು ನಗರವನ್ನು ಅತಿ ಹೆಚ್ಚು ಅರಣ್ಯ ಸಾಂದ್ರತೆಯ ಪ್ರದೇಶವನ್ನಾಗಿಸುವ ಉದ್ದೇಶವನ್ನು ಅರಣ್ಯ ಇಲಾಖೆ ಹೊಂದಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ್‌ ಕುಮಾರ್‌ ಮಾತನಾಡಿ, ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ರೈತರು ಹಾಗೂ ಸಾರ್ವಜನಿಕರಿಗೆ 300ರಿಂದ 400 ಸಸಿಗಳನ್ನು ವಿತರಿಸಲಾಗುತ್ತಿದೆ. ಅವುಗಳನ್ನು ಸರಿಯಾಗಿ ಸಂರಕ್ಷಿಸಿದರೆ ಮೂರು ವರ್ಷಗಳವರೆಗೆ ಪ್ರತಿ ಸಸಿಗೆ ₹ 100ರಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಯೋಜನೆಯ ಅಡಿಯಲ್ಲಿ ನಂಜನಗೂಡು ಹಾಗೂ ತಿ.ನರಸೀಪುರ ತಾಲ್ಲೂಕುಗಳಲ್ಲಿ ಈಗಾಗಲೇ 20ಸಾವಿರ ಸಸಿಗಳನ್ನು ನೆಡಲಾಗಿದೆ ಎಂದು ಮಾಹಿತಿ ನೀಡಿದರು.

‘ಮುಡಾ’ ಆಯುಕ್ತ ಪಿ.ಎಸ್‌.ಕಾಂತರಾಜ್‌ ಮಾತನಾಡಿ, ಮನೆ ಕಟ್ಟಲು ಭೂಮಿ ಮಂಜೂರು ಮಾಡುವಾಗ ಕಡ್ಡಾಯವಾಗಿ ಗಿಡ ನೆಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅರಣ್ಯ ಇಲಾಖೆ ವತಿಯಿಂದ ಕಡ್ಡಾಯವಾಗಿ ಗಿಡ ನೆಡುವಂತೆ ಆದೇಶ ಹೊರಡಿಸಿದರೆ ಸಾರ್ವಜನಿಕರನ್ನು ಎಚ್ಚರಿಸಬಹುದು ಎಂದು ಅಭಿಪ್ರಾಯಪಟ್ಟರು.

ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಆನಂದ್‌ ಕುಮಾರ್‌, ‘ಮೈಸೂರು ನಗರವನ್ನು ಅಭಿವೃದ್ಧಿಪಡಿಸಲು ಶ್ರಮಿಸಿದ ರಾಜಮನೆತನದವರ ಸಮಾಧಿ ಸ್ಥಳವನ್ನು ನಿರ್ವಹಣೆ ಮಾಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಅರಣ್ಯ ಇಲಾಖೆಯು ಈ ಜಾಗವನ್ನು ವಶಪಡಿಸಿಕೊಂಡು ಅಭಿವೃದ್ಧಿಪಡಿಸಬೇಕು’ ಎಂದು ಮನವಿ ಮಾಡಿದರು.

ಪ್ರತಿ ವಾರ್ಡ್‌ಗಳಲ್ಲಿ ಗಿಡ ಮರಗಳನ್ನು ಸಂರಕ್ಷಿಸುವ ಹೊಣೆಯನ್ನು ಪಾಲಿಕೆ ಸದಸ್ಯರ ಮೇಲೆ ಹೊರಿಸಬೇಕು ಎಂದು ಅವರು ಒತ್ತಾಯಿಸಿದರು.

ಪರಿಸರವಾದಿ ಭಾಮಿ ಶೆಣೈ, ‘ಜಿಲ್ಲೆಯಲ್ಲಿ ಅನಧಿಕೃತವಾಗಿ ಮರ ಕಡಿಯಲಾಗುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ತಕ್ಷಣವೇ ಗಮನಹರಿಸಬೇಕು. ಮಕ್ಕಳಿಗೆ ಪರಿಸರದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕಡ್ಡಾಯವಾಗಿ ಸಸಿ ನೆಡುವಂತೆ ಪಠ್ಯಕ್ರಮದಲ್ಲಿ ಅಳವಡಿಸಬೇಕು. ಆದರೆ, ಪರಿಸರಕ್ಕೆ ಮಾರಕವಾಗುವಂಥ ಸಸಿಗಳನ್ನು ನೆಡಬಾರದು’ ಎಂದು ಹೇಳಿದರು.

ಪರಿಸರ ಸಂರಕ್ಷಣಾ ಕಾರ್ಯಕರ್ತೆ ಭಾನು ಮೋಹನ್‌ ಮಾತನಾಡಿ, ಪಾದಚಾರಿ ಮಾರ್ಗಗಳಲ್ಲಿ ಇರುವ ಮರ, ಗಿಡಗಳ ಸುತ್ತ ಕಾಂಕ್ರಿಟ್‌ ತುಂಬಲಾಗುತ್ತಿದ್ದು, ನೀರು ಇಂಗಲು ಅವಕಾಶವೇ ಇಲ್ಲದಂತಾಗಿದೆ. ಇದರಿಂದ ಅವುಗಳು ನೀರು ಇಲ್ಲದೆ ಬೇಗ ಬಾಡಿಹೋಗುತ್ತಿವೆ ಎಂದು ಗಮನಸೆಳೆದರು.

ಸಭೆಗೆ ಗೈರಾದ ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

ಸಾರ್ವಜನಿಕರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಂಬಾಡಿ ಮಾಧವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT