ಸೋಮವಾರ, ಜುಲೈ 4, 2022
22 °C
ಚಾಮುಂಡಿಪುರಂ ಮುಖ್ಯರಸ್ತೆಯ 5ನೇ ಅಡ್ಡರಸ್ತೆಯಲ್ಲಿರುವ ಮಳಿಗೆ ಮುಂದೆ ಜಮಾಯಿಸುವ ಜನ

ಕೈಹಿಡಿದ ದೋಸೆ ಹಿಟ್ಟು ಕಿರು ಉದ್ಯಮ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಚಾಮುಂಡಿಪುರಂ ಮುಖ್ಯರಸ್ತೆಯ ಐದನೇ ಅಡ್ಡರಸ್ತೆ ಯಲ್ಲಿರುವ ಪುಟ್ಟ ಮಳಿಗೆಯೊಂದರ ಮುಂಭಾಗ ಮುಸ್ಸಂಜೆ ವೇಳೆ ಜನರು ಜಮಾಯಿಸುತ್ತಾರೆ. ಆಗ ತಾನೇ ತಯಾರಿಸಿದ ತರಹೇವಾರಿ ದೋಸೆ ಹಾಗೂ ಇಡ್ಲಿಯ ಹಿಟ್ಟು ಖರೀದಿಗಾಗಿ ಇಲ್ಲಿಗೆ ಹುಡುಕಿಕೊಂಡು ಬರುವವರೇ ಹೆಚ್ಚು. ಒಮ್ಮೆ ಬಂದವರು ಇಡ್ಲಿ, ದೋಸೆ ನೆನಪಾದೊಡನೆ ‘ಬ್ರಾಹ್ಮಿನ್‌ ಬ್ಯಾಟರ್‌’ಮಳಿಗೆಗೆ ದೌಡಾಯಿಸುವುದು ಈ ಭಾಗದಲ್ಲಿ ಇದೀಗ ಸಹಜ ಎನಿಸಿದೆ.

ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಬೇಡಿಕೆ. ಬೆಂಗಳೂರಿನಿಂದ ಮೈಸೂರಿಗೆ ಬರುವವರು ಸಹ ಇಲ್ಲಿನ ತಿನಿಸು, ದೋಸೆ–ಇಡ್ಲಿ ಹಿಟ್ಟು ಕೊಂಡೊಯ್ಯುವುದು ಹೆಚ್ಚುತ್ತಿದೆ. ಜನರ ಬಾಯಿಂದ ಬಾಯಿಗೆ ಪ್ರಚಾರಗೊಂಡು ವಿವಿಧ ಕೆಲಸದ ನಿಮಿತ್ತ ಮೈಸೂರಿಗೆ ಬಂದ ಜಿಲ್ಲೆಯ ನಾನಾ ಭಾಗದ ಜನರು ಇಲ್ಲಿಗೆ ಭೇಟಿ ನೀಡಿ ತಮಗೆ ಬೇಕಾದ ಹಿಟ್ಟಿನ ಮಿಶ್ರಣ ಖರೀದಿಸುವುದು ನಡೆದಿದೆ.

ಬೇಡಿಕೆ ಹೆಚ್ಚಿದಂತೆ ಇಡ್ಲಿ– ದೋಸೆ ಹಿಟ್ಟಿನ ಮಿಶ್ರಣದ ಜೊತೆಗೆ, ಉದ್ದಿನ ವಡೆ, ಮಸಾಲೆ ವಡೆ, ಗೋಳಿ ಬಜೆ, ಬೋಂಡದ ಹಿಟ್ಟು, ಬಜ್ಜಿ ಮಿಕ್ಸ್‌, ಮದ್ದೂರು ವಡೆ ಮಿಕ್ಸ್‌, ಪಡ್ಡಿನ ಹಿಟ್ಟು, ಅಕ್ಕಿ/ಮಸಾಲೆ ರೊಟ್ಟಿಯ ಹಿಟ್ಟು ಸಹ ಇಲ್ಲಿಯೇ ಸಿಗುತ್ತಿದೆ. ಈ ಹಿಟ್ಟು, ಮಿಶ್ರಣ ಬಳಸಿ ಹೋಟೆಲ್‌ನಲ್ಲಿ ಸವಿಯಬಹುದಾದ ತಿನಿಸುಗಳನ್ನು ಇದೀಗ ಮನೆಯಲ್ಲೇ ಮಾಡಿಕೊಳ್ಳಬಹುದು.

ಅಡೆ ದೋಸೆ, ಸೊಪ್ಪಿನ ದೋಸೆ, ರಾಗಿ ದೋಸೆ, ರವೆ ದೋಸೆ, ಉದ್ದಿನ ಕಡುಬು, ಈರುಳ್ಳಿ ದೋಸೆ, ನುಚ್ಚಿನ ಉಂಡೆ, ಮಸಾಲೆ ಇಡ್ಲಿ, ಸೊಪ್ಪಿನ ಇಡ್ಲಿಯ ಮಿಶ್ರಣವೂ ಬ್ರಾಹ್ಮಿನ್‌ ಬ್ಯಾಟರ್‌ನಲ್ಲಿ ಲಭ್ಯ. ಇಲ್ಲಿ ತಯಾರಿಸುವ ಸಾಂಬಾರ್‌ ಪುಡಿ, ರಸಂ ಪುಡಿ, ಪುಳಿಯೋಗರೆ ಪುಡಿ, ಬಿಸಿಬೇಳೆ ಬಾತ್‌ ಪುಡಿ, ವಾಂಗಿಬಾತ್‌ ಪುಡಿ, ಚಟ್ನಿ ಪುಡಿ, ಮೆಂತ್ಯೆ ಪುಡಿ, ಕಾಯಿ ಹೋಳಿಗೆ, ಬೇಳೆ ಹೋಳಿಗೆ, ಬೇಸನ್‌ ಲಾಡು, ಕರಗಡುಬು, ಕಜ್ಜಾಯ, ಸಜ್ಜಪ್ಪ, ಕೊಬ್ಬರಿ ಮಿಠಾಯಿ, ಬಾದುಷಾ, ರವೆ ಉಂಡೆ, ರಾಗಿ/ಅಕ್ಕಿ ಹುರಿಹಿಟ್ಟಿಗೂ ಬೇಡಿಕೆಯಿದೆ.

ಕಿರು ಉದ್ಯಮ ಆರಂಭವಾದ ಬಗೆ..
‘ನಾನು ಖಾಸಗಿ ಶಾಲಾ ಶಿಕ್ಷಕಿ. ಬೆಳಿಗ್ಗೆ 8.30ಕ್ಕೆ ಶಾಲೆಯಲ್ಲಿರಬೇಕು. ಅಷ್ಟರೊಳಗೆ ಮಕ್ಕಳಿಗೆ ಉಪಾಹಾರ ಮಾಡಿಕೊಡಬೇಕು. ದೋಸೆ ಮಾಡಲಿಕ್ಕಾಗಿ ಅಂಗಡಿಯಿಂದ ಹಿಟ್ಟು ತಂದಿದ್ದೆ. ಆದರೆ, ತವಾದಲ್ಲಿ ದೋಸೆ ಬರಲೇ ಇಲ್ಲ. ಅನಿವಾರ್ಯವಾಗಿ ಕಣ್ಣೀರು ಹಾಕಿಕೊಂಡು ಎಲ್ಲರೂ ಎರಡೆರಡು ಪೀಸ್‌ ಬ್ರೆಡ್‌ ತಿಂದು ಶಾಲೆಗೆ ಹೋಗಬೇಕಾಯಿತು. ಆಗ ಶುರುವಾದ ಆಲೋಚನೆಯೇ ಈ ಉದ್ಯಮವಾಗಿದೆ. ಎಂದು ಗೋಕುಲಂನ ಅಶ್ವಿನಿ ಪ್ರಕಾಶ್‌ ತಮ್ಮ ಕಿರು ಉದ್ಯಮ ಆರಂಭಗೊಂಡ ಬಗೆಯನ್ನು ‘ಪ್ರಜಾವಾಣಿ’ಗೆ ತಿಳಿಸಿದರು.

‘ನನಗಾದ ಕಹಿ ಅನುಭವ, ಆಲೋಚನೆಯನ್ನು ಸಹೋದರಿ ಐಶ್ವರ್ಯಾ ಮುರಳಿ ಜೊತೆ ಹೇಳಿಕೊಂಡೆ. ಆಕೆಯೂ ಸಾಥ್ ನೀಡಿದಳು. ಅವಳಿರುವುದು ಸಿದ್ಧಾರ್ಥ ನಗರದಲ್ಲಿ. ಇಬ್ಬರೂ ದೋಸೆ ಹಿಟ್ಟಿನ ಮಿಶ್ರಣ ಮಾರಾಟದ ಕಿರು ಉದ್ಯಮ ಆರಂಭಿಸಲು ನಿರ್ಧರಿಸಿದೆವು. ಯಾರೊಬ್ಬರ ಸಹಕಾರವಿಲ್ಲ. ನಾವೇ ಅಗತ್ಯವಿರುವ ಎಲ್ಲ ಪರವಾನಗಿ ಪಡೆದವು. ಆರಂಭದ ದಿನಗಳಲ್ಲಿ ನಮ್ಮನ್ನು ನೋಡಿ ನಕ್ಕವರೇ ಎಲ್ಲರೂ’ ಎಂದರು.

ಆರಂಭದಲ್ಲೇ ಆತಂಕ...
‘2020ರ ಫೆ.26ರಂದು ₹4 ಲಕ್ಷ ಬಂಡವಾಳ ಹಾಕಿ ಅಂಗಡಿ ಆರಂಭಿಸಿದೆವು. ಎಲ್ಲವೂ ಅತ್ಯಾಧುನಿಕ ಯಂತ್ರೋಪಕರಣಗಳು. ಆರಂಭದ ದಿನಗಳಲ್ಲೇ ಜನರಿಂದ ಉತ್ತಮ ಪ್ರತಿಕ್ರಿಯೆ ಬರಲಾರಂಭಿಸಿತು. ಇದರ ಬೆನ್ನಿಗೆ ಕೋವಿಡ್‌–19 ಕಾಡಿತು. ಎಲ್ಲರಂತೆಯೂ ನಾವು ಅಂಗಡಿಯ ಬಾಗಿಲು ಮುಚ್ಚ ಬೇಕಾಯಿತು. ಶುರುವಿನಲ್ಲೇ ಕೈಸುಟ್ಟುಕೊಂಡ ಆತಂಕ ಕಾಡಲಾರಂಭಿಸಿತು...’

‘ಕೋವಿಡ್‌–19 ಮಾರ್ಗಸೂಚಿ ಪಾಲಿಸಿಯೇ ಅಂಗಡಿ ಪುನರಾರಂಭಿಸಿದೆವು. ನಮ್ಮಲ್ಲಿನ ಎಲ್ಲ ಉತ್ಪನ್ನಗಳಿಗೆ ಗುಣಮಟ್ಟದ ವಸ್ತುಗಳನ್ನೇ ಬಳಸಿದೆವು. ಬೇರೆಡೆಗಿಂತ ಕಡಿಮೆ ದರಕ್ಕೆ ಮಾರಾಟ ಆರಂಭಿಸಿದೆವು. ಹಂತಹಂತವಾಗಿ ಉದ್ಯಮ ಕೈ ಹಿಡಿದಿದೆ. ಇದೀಗ ನಿತ್ಯವೂ ವಹಿವಾಟು ಚೆನ್ನಾಗಿದೆ. ಸಹೋದರಿ ತಯಾರಿಕೆಗೆ ಗಮನ ಕೊಟ್ಟರೆ, ನಾನು ವಹಿವಾಟು ನಡೆಸುವೆ. ಮುಂದಿನ ದಿನಗಳಲ್ಲಿ ಮೈಸೂರಿನ ವಿವಿಧೆಡೆ ಈ ಉದ್ಯಮದ ಶಾಖೆ ಆರಂಭಿಸುವ ಆಲೋಚನೆ ನಮ್ಮದಾಗಿದೆ’
ಎಂದು ಅಶ್ವಿನಿ ಪ್ರಕಾಶ್‌ ತಿಳಿಸಿದರು.

ಸಂಪರ್ಕ ಸಂಖ್ಯೆ: ಅಶ್ವಿನಿ ಪ್ರಕಾಶ್‌–9980014574, ಐಶ್ವರ್ಯಾ ಮುರಳಿ–9164925641.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು