ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ನ್ಯಾಯವೇ ಮೂಲ ಮಂತ್ರ: ಸಿ.ಎಚ್‌. ವಿಜಯಶಂಕರ್‌

ಕಟ್ಟಿದ ಮನೆಯನ್ನು ಸೇರಿಕೊಂಡು, ಕಟ್ಟಿದವರನ್ನೇ ಮನೆಯಿಂದ ಓಡಿಸಿದವರು ಪ್ರತಾಪ ಸಿಂಹ
Last Updated 25 ಏಪ್ರಿಲ್ 2019, 8:59 IST
ಅಕ್ಷರ ಗಾತ್ರ

ಮೈಸೂರು: ‘ಸಾಮಾಜಿಕ ನ್ಯಾಯದ ವಿರುದ್ಧ ಇರುವವರನ್ನು ಗೆಲ್ಲಿಸಲು ಜನತೆಗೆ ಮನಸಿಲ್ಲ. ಬಿಜೆಪಿಯದು ತಾರತಮ್ಯದ ಮಂತ್ರ. ನಮ್ಮದು ಸಾಮಾಜಿಕ ನ್ಯಾಯದ ಮಂತ್ರ. ಇದನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತಿದ್ದೇವೆ’

ಹೀಗೆ ಬಿಜೆಪಿಗೆ ಛಾಟಿ ಬೀಸಿದ್ದು, ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್.

‘ಸಾಮಾಜಿಕ ನ್ಯಾಯದ ವಿರೋಧಿಗಳನ್ನು ನಾವು ವಿರೋಧಿಸುತ್ತೇವೆ. ಶ್ರೀಸಾಮಾನ್ಯರ ಸಮಸ್ಯೆಗಳಿಗೆ ಹೆಗಲು ಕೊಡುತ್ತೇವೆ. ಇದೇ ನಮ್ಮ ಆದ್ಯತೆ, ಇದೇ ನಮ್ಮ ಧ್ಯೇಯ. ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಎಲ್ಲ ವರ್ಗಗಳ ಬಡವರ ಅಭಿವೃದ್ಧಿಯೇ ನಮ್ಮ ಆಶಯ’ ಎನ್ನುತ್ತಾರೆ.

* ಕಾಂಗ್ರೆಸ್– ಜೆಡಿಸ್ ಕಾರ್ಯಕರ್ತರ ನಡುವೆ ಒಗ್ಗಟ್ಟು ಮೂಡಿದೆಯೆ?

ಸಂಘಟನೆಯಲ್ಲಿ ಸಣ್ಣ ಪುಟ್ಟ ದೋಷಗಳು ಇದ್ದೇ ಇರುತ್ತವೆ. ಆದರೆ, ದೋಷ ಎಷ್ಟು ಪ್ರಮಾಣದಲ್ಲಿ ಇದೆ. ದೋಷರಹಿತ ಎಷ್ಟು ಪ್ರಮಾಣ ಎಂದು ಯೋಚನೆ ಮಾಡಬೇಕು. ಶೇ 5ರಷ್ಟು ದೋಷವು ಶೇ 95ರಷ್ಟು ದೋಷರಹಿತ ವ್ಯವಸ್ಥೆಯನ್ನು ನಾಶಮಾಡಲು ಸಾಧ್ಯವಿಲ್ಲ. ಈ ಶೇ 5ರಷ್ಟು ದೋಷ ಎಲ್ಲ ಕಾಲಕ್ಕೂ ಇರುತ್ತದೆ. ಜೆಡಿಎಸ್‌ನ ಶೇ 95 ಭಾಗ ನಮ್ಮ ಜತೆಯಲ್ಲಿದೆ.

ಸ್ಥಳೀಯ ಕಾರಣಗಳಿಗಾಗಿ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಕಳೆದ ಹಲವು ದಶಕಗಳಿಂದ ಪರಸ್ಪರ ರಾಜಕೀಯ ಸಂಘರ್ಷಗಳನ್ನು ಮಾಡಿಕೊಂಡು ಬರುತ್ತಿರುವ ಪಕ್ಷಗಳಿವು. ರಾತ್ರೋರಾತ್ರಿ ಇವೆಲ್ಲವೂ ತಿಳಿಯಾಗಿ ಕೆಳಹಂತದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೆಲಸ ಮಾಡಬೇಕು ಎಂದಾಗ ಸಮಸ್ಯೆ ಬರುತ್ತವೆ. ಆದರೆ, ಇದು ನಗಣ್ಯ. ರಾಜಕೀಯವಾಗಿ ಹೆಚ್ಚು ಲಾಭ ಮಾಡಿಕೊಳ್ಳಲೆಂದೇ ಮೈತ್ರಿ ಮಾಡಿಕೊಂಡಿರುವುದು. ಇದರ ಉದ್ದೇಶ ಈಗ ಕೆಳ ಹಂತದ ಕಾರ್ಯಕರ್ತರಿಗೆ ಅರ್ಥವಾಗಿದೆ. ಅಲ್ಲದೇ, ನಾನೀಗ ನಿರಂತರ ಪ್ರವಾಸದಲ್ಲಿದ್ದೇನೆ. ಪೂರ್ಣ ಮಟ್ಟದಲ್ಲಿ ಸಹಕಾರ ಸಿಕ್ಕಿದೆ. ಅಲ್ಲದೇ, ಪಕ್ಷದ ಒಳಗೂ ಶೇ 5ರಷ್ಟು ದೋಷ ಇರುತ್ತದೆ. ಅದನ್ನು ಸರಿಪಡಿಸಿಕೊಂಡು ಮುನ್ನಡೆದಿದ್ದೇವೆ. ಸರಿ ಇಲ್ಲದೇ ಇರುವ ವಿಚಾರಗಳಿಗೆ ಚಿಂತಿಸಿ ನಿಂತರೆ ನಾವು ಮುಂದೆ ಹೋಗಲಾಗದು.

* ಯುವ ಅಭ್ಯರ್ಥಿ ಎದುರು ಸ್ಪರ್ಧಿಸುವುದು ನಿಮಗೆ ಕಷ್ಟವಾಗುವುದಿಲ್ಲವೆ? ನಿಮಗೇ ಏಕೆ ಮತ ಹಾಕಬೇಕು?

ಇಲ್ಲಿ ಯುವಕರು, ಹಳಬರು ಪ್ರಶ್ನೆ ಬರುವುದೇ ಇಲ್ಲ. ಇದು ಲೋಕಸಭಾ ಕ್ಷೇತ್ರ. ಈ ಕ್ಷೇತ್ರದ ಹಿತ ಕಾಯುವ ಕೆಲಸ ಆಗಬೇಕು. ಜನರ ಏಳ್ಗೆಗೆ ದುಡಿಯುವ ಮನಸ್ಥಿತಿ ಇರುವ, ಸಾಮಾಜಿಕ ನ್ಯಾಯಕ್ಕಾಗಿ ದುಡಿಯುವ ಗುಣಗಳಿರುವ ನಾಯಕ ಬೇಕು. ನಡವಳಿಕೆ, ಸಾರ್ವಜನಿಕ ಬದ್ಧತೆ, ಕೊಟ್ಟಮಾತಿನಂತೆ ನಡೆಯುವುದು ಮುಖ್ಯ. ಅದರಲ್ಲಿ ಪ್ರತಾಪ ಸಿಂಹ ಸೋತಿದ್ದಾರೆ. ಜನರು ಅವಕಾಶ ಕೊಟ್ಟಾಗ ನಾವು ಜನರ ಜತೆ ಹೇಗೆ ನಡೆದುಕೊಳ್ಳುತ್ತೇವೆ, ಅಭಿವೃದ್ಧಿಗೆ ಹೇಗೆ ದುಡಿಯುತ್ತೇವೆ ಎಂಬ ನಡವಳಿಕೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಎಲ್ಲ ವಯಸ್ಸಿನ ಮತದಾರರ ಒಳಿತು ನನಗೆ ಮುಖ್ಯ. ಈ ಹಿಂದೆ ಅವಕಾಶ ಸಿಕ್ಕಾಗ ಆ ಕೆಲಸ ಮಾಡಿದ್ದೇನೆ. ಹಾಗಾಗಿ, ಜನತೆಗೆ ನನ್ನ ಮೇಲೆ ಒಲವು, ವಿಶ್ವಾಸವಿದೆ.

ಅಲ್ಲದೇ, ನಾನು ಮೂಲತಃ ಕಾಂಗ್ರೆಸ್ಸಿಗ. ಹಿಂದೆ ಹುಣಸೂರು ಭಾಗದ ಕಾಂಗ್ರೆಸ್ ಯುವ ಘಟಕದ ಜವಾಬ್ದಾರಿ ತೆಗೆದುಕೊಂಡಿದ್ದೆ. ದೇವರಾಜ ಅರಸರನ್ನು ನೋಡಿಕೊಂಡು ಬೆಳೆದವನು. ಅರಸರ ನಂತರ ನಾನು ಹಾಗೂ ಶ್ರೀಕಂಠದತ್ತ ನರಸಿಂಹಾಜ ಒಡೆಯರ್‌ ಬೇರೆ ಬೇರೆ ಕಾರಣಕ್ಕೆ ಪಕ್ಷದಿಂದ ಹೊರಬಂದೆವು. ಈಗ ನಾನು ಮೂಲ ಮನೆಗೆ ಬಂದಿದ್ದೇನೆ. ಕಾಂಗ್ರೆಸ್‌ನ ಸೈದ್ಧಾಂತಿಕ ನಿಲವುಗಳನ್ನು ಎಂದೂ ಬಿಟ್ಟುಕೊಟ್ಟಿಲ್ಲ. ರಾಜಿ ಮಾಡಿಕೊಂಡಿಲ್ಲ. ಹಾಗಾಗಿ, ಪಕ್ಷಕ್ಕೆ ಬಂದಾಗ ಕಾಂಗ್ರೆಸಿಗರು ಸ್ವೀಕರಿಸಿದ್ದಾರೆ. ಯಾರೊಬ್ಬರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಟಿಕೆಟ್ ಆಕಾಂಕ್ಷಿಗಳೂ ವಿರೋಧಿಸಿಲ್ಲ. ಅಲ್ಲದೇ, ನಮ್ಮದು ರಾಷ್ಟ್ರೀಯ ಸಂಘಟನೆ. ಯಾವುದೋ ಒಂದು ಸಮುದಾಯವನ್ನು ಮಾತ್ರ ಪ್ರತಿನಿಧಿಸುವುದಿಲ್ಲ. ಒಂದೇ ಒಂದು ವರ್ಗವನ್ನು ಮಾತ್ರ ಪ್ರತಿನಿಧಿಸುವ ಪಕ್ಷವನ್ನು ಜನತೆ ಬೆಂಬಲಿಸುವುದಿಲ್ಲ.

* ಕಳೆದ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸೋತಿದ್ದಿರಿ. ಈಗ ಪಕ್ಷಾಂತರಿ ಎಂಬ ಹಣೆಪಟ್ಟಿಯೂ ಇದೆ?

ಕಾಂಗ್ರೆಸ್‌– ಜೆಡಿಎಸ್‌ ಪ್ರಬಲ ಸಂಘಟನೆಗಳು. ಇವು ಬೇರು ಮಟ್ಟದಿಂದ ಬೆಳೆದಿವೆ. ಎರಡೂ ಪಕ್ಷಗಳು ಒಂದಾದ ಮೇಲೆ ಹೋರಾಟ ಎಲ್ಲಿದೆ. ನನಗೆ ಗೆಲುವಿನ ಪೂರ್ಣ ವಿಶ್ವಾಸ ಇದೆ. ಅಡಗೂರು ಎಚ್‌.ವಿಶ್ವನಾಥ್‌ ಅವರು ಕೇವಲ 31 ಸಾವಿರ ಮತಗಳಿಂದ ಸೋತರು. ಈಗ ಮೈತ್ರಿಯಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಕಳೆದ ಬಾರಿ 1.30 ಲಕ್ಷ ಮತಗಳಿಸಿದ್ದರು. ಅವು ನಮಗೆ ಸೇರಲಿವೆ. ಗೆಲುವಿನ ಅಂತರ 1 ಲಕ್ಷ ಮೀರುತ್ತದೆ.

ನಾನು ಬಿಜೆಪಿಯಿಂದ ಬೆಳೆದವನಲ್ಲ. ಕಾಂಗ್ರೆಸ್‌ನಲ್ಲಿ ದುಡಿದಿದ್ದೇನೆ. ಹುಣಸೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ 940 ಮತಗಳು ದಾಟಿರಲಿಲ್ಲ. ನಾನು ಸ್ಪರ್ಧಿಸಿದ ಮೇಲೆ ಗೆಲುವಿನ ಹಂತಕ್ಕೆ ತೆಗೆದುಕೊಂಡು ಹೋದೆ. ಬಿಜೆಪಿ ಎಂದರೆ ಯಾವ ಪಕ್ಷ ಎಂದು ಜನ ಕೇಳುತ್ತಿದ್ದರು. ಕಟ್ಟಿದ ಮನೆಗೆ ಬಂದವನಲ್ಲ. ಕಟ್ಟಿದ ಮನೆಗೆ ಬಂದು ಕಟ್ಟಿದವರನ್ನು ಆಚೆ ತಳ್ಳಿಲ್ಲ. ಸಂಘಟನೆ ಬಗ್ಗೆ ತಿಳಿಯದೇ ಇರುವವರು, ಸಾರ್ವಜನಿಕ ಬದುಕಿನ ಬಗ್ಗೆ ಗೊತ್ತಿಲ್ಲದೇ ಇರುವವರು, ದುಡಿಮೆ ಬೆಲೆ ಗೊತ್ತಿಲ್ಲದೇ ಇರುವವರು ಈ ಮಾತನ್ನಾಡಿದ್ದಾರೆ.

ಟೀಕೆ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಲಿ. ಪ್ರತಾಪ ಸಿಂಹ ಅವರು ಯಡಿಯೂರಪ್ಪ ಬಗ್ಗೆ ಟೀಕೆ ಮಾಡಿಲ್ಲವೇ. ಜೈಲಿಗೆ ಹೋಗಲು ನನ್ನ ಲೇಖನವೇ ಕಾರಣ ಎಂದರು. ಶ್ರೀರಾಮುಲು ಗಣಿ ಹಗರಣದಿಂದ ಜೈಲಿಗೆ ಹೋಗಬೇಕು ಎಂದು ಬರೆದರು. ಈಗ ಅವರನ್ನೇ ಜತೆಗೆ ಕರೆದುಕೊಂಡು ತಿರುಗಾಡುತ್ತಿದ್ದಾರೆ. ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಹಗುರವಾಗಿ ಬರೆದವರು. ವ್ಯಕ್ತಿಗಳ ಬಗ್ಗೆ ಹಗುರವಾಗಿ ಮಾತನಾಡಿ ಸಾಂದರ್ಭಿಕವಾಗಿ ದೊಡ್ಡವರಾಗಬಹುದು. ಆದರೆ, ಇವರ ವ್ಯಕ್ತಿತ್ವ ಪರಿಚಯವಾಗಿರುವ ಕಾರಣ, ಜನ ಉತ್ತರ ಕೊಡಲಿದ್ದಾರೆ.

* ಪ್ರತಾಪ ಸಿಂಹ ಅಭಿವೃದ್ಧಿಯ ಪಟ್ಟಿ ಕೊಡುತ್ತಿದ್ದಾರೆ. ನಿಮ್ಮ ಬಳಿ ಯಾವ ಪಟ್ಟಿ ಇದೆ?

2004ರಲ್ಲಿ ವಿಮಾನ ನಿಲ್ದಾಣ ಮೊದಲ ಹಂತ ಮುಗಿಸಿದೆ. ಎರಡನೇ ಹಂತಕ್ಕಾಗಿ ಊಟಿ ರಾಷ್ಟ್ರೀಯ ಹೆದ್ದಾರಿ ಸ್ಥಳಾಂತರಕ್ಕೆ ಭಾರತೀಯ ಸಾರಿಗೆ ಪ್ರಾಧಿಕಾರದಿಂದ ಒಪ್ಪಿಗೆ ಪಡೆದೆ. ಭೂಸ್ವಾಧೀನಕ್ಕೂ ಒಪ್ಪಿಗೆ ಸಿಕ್ಕಿತು. ನಾನು ಅಧಿಕಾರದಿಂದ ಇಳಿದಾಗ ವಿಮಾನ ನಿಲ್ದಾಣ ಹೇಗಿತ್ತೊ ಈಗಲೂ ಅದೇ ಸ್ಥಿತಿಯಲ್ಲಿ ಇದೆ.

ಇನ್ನು ರೈಲ್ವೆ ನಿಲ್ದಾಣದಲ್ಲಿ ಹಿಂದೆ ಮೂರು ಪ್ಲಾಟ್‌ಫಾರ್ಮ್‌ ಇತ್ತು. ಹೆಚ್ಚುವರಿಯಾಗಿ 3 ಪ್ಲಾಟ್‌ಫಾರ್ಮ್ ನಿರ್ಮಿಸಿದೆ. ಟಿಕೆಟ್‌ ಕೌಂಟರ್ ಹೆಚ್ಚಿಸಿದೆ. ವಾಹನ ಸಂಚಾರ ದಟ್ಟಣೆ ತಗ್ಗಿಸಲು ಸಿಎಫ್‌ಟಿಆರ್‌ಐ ಕಡೆಯಿಂದ ಮತ್ತೊಂದು ಪ್ರವೇಶ ದ್ವಾರ ನಿರ್ಮಿಸಿದೆ. ₹ 28 ಕೋಟಿ ಹಣದಲ್ಲಿ ಮೇಲ್ದರ್ಜೆಗೇರಿಸಿದೆ. ರೈಲ್ವೆ ಕಾರ್ಯಾಗಾರವನ್ನು ₹ 39 ಕೋಟಿಯಲ್ಲಿ ಮೇಲ್ದರ್ಜೆಗೇರಿಸಿದೆ. ನನ್ನ ಕಾಣಿಕೆ ಏನು, ಪ್ರತಾಪ ಸಿಂಹ ಕಾಣಿಕೆ ಏನೆಂದು ಅಲ್ಲಿನ ಸಿಬ್ಬಂದಿಯೇ ಹೇಳುತ್ತಾರೆ.

ರೇಲ್ವೆ ಗೂಡ್ಸ್‌ ಶೆಡ್ ಸಹ ಅಷ್ಟೇ. ಸರಿಯಾದ ಮಾರ್ಗ ಇರಲಿಲ್ಲ, ದೀಪ, ಪ್ಲಾಟ್‌ಫಾರ್ಮ್‌ ಇರಲಿಲ್ಲ. ಅವೆಲ್ಲವನ್ನೂ ನೀಡಿದೆ. 1998ರಲ್ಲಿ ಮೊದಲ ಬಾರಿಗೆ ಸಂಸದನಾದಾಗ ರಾಮಕೃಷ್ಣ ಹೆಗಡೆ ಹಣಕಾಸು ಸಚಿವರಾಗಿದ್ದರು. ಹುಣಸೂರಿನಲ್ಲಿ ತಂಬಾಕು ಬೆಳೆಗಾರರ ಸಮಾವೇಶ ನಡೆಸಿದೆ. 33,750 ಜನರಿಗೆ ಮಾರಾಟ ಕಾರ್ಡ್ ಕೊಡಿಸಿದೆ. ಈಗಿನ ಸಂಸದರಿಗೆ ಒಂದು ಹೆಚ್ಚುವರಿ ಕಾರ್ಡ್ ಕೊಡಿಸಲು ಸಾಧ್ಯವಾಗಿಲ್ಲ.

2004ರಲ್ಲಿ ಮತ್ತೆ ನಾನು ಆಯ್ಕೆಯಾದಾಗ 23,374 ಮಂದಿಗೆ ಪರವಾನಗಿ ಕೊಡಿಸಿದೆ. ಹೆಚ್ಚುವರಿ ಹರಾಜು ಕಟ್ಟೆ ಸ್ಥಾಪನೆಯಾಗಿಲ್ಲ. ಹೆಚ್ಚುವರಿ ತಂಬಾಕು ಬೆಳೆಯುವವರಿಗೆ ದಂಡ ಹಾಕಲಾಗುತ್ತಿತ್ತು. ಅದನ್ನು ರದ್ದುಪಡಿಸಿದ್ದೆ. ಈಗಿನ ಸಂಸದರ ಆಡಳಿತದಲ್ಲಿ ಶೇ 18ರಷ್ಟು ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT