ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ವಿಜ್ಞಾನದ ಮೇಲೆ ಸಾಮಾಜಿಕ ಜಾಲತಾಣ ಆಕ್ರಮಣ: ವಿಶ್ವನಾಥ್‌

Last Updated 10 ಸೆಪ್ಟೆಂಬರ್ 2022, 12:58 IST
ಅಕ್ಷರ ಗಾತ್ರ

ಮೈಸೂರು: ‘ಮೂಲ‌ ವಿಜ್ಞಾನದ ಮೇಲೆ ಸಾಮಾಜಿಕ ಜಾಲತಾಣವು ಆಕ್ರಮಣ ನಡೆಸುತ್ತಿದೆ’ ಎಂದು‌ ವಿಧಾನಪರಿಷತ್‌ ಸದಸ್ಯ ಎ.ಎಚ್‌.ವಿಶ್ವನಾಥ್‌ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕೆಆರ್‌ವಿಪಿ) ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿ.ಪಂ., ಜಿಲ್ಲಾಡಳಿತ, ಕೆಎಸ್‌ಒಯು ಹಾಗೂ ಮೈಸೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮೂಲ ವಿಜ್ಞಾನ ಬಹಳ ಮುಖ್ಯ ಎನ್ನುವುದನ್ನು ಮರೆಯಬಾರದು’ ಎಂದು ತಿಳಿಸಿದರು.

‘ರಾಜಕೀಯ ‌ವಿಜ್ಞಾನವು ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಾಜಕೀಯ ಕ್ಷೇತ್ರ ಹಾಗೂ ರಾಜಕಾರಣಿಗಳನ್ನು ಮೈಲಿಗೆಯಾಗಿ ನೋಡುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗುತ್ತದೆ. ಇದು ದೂರಾಗಬೇಕು’ ಎಂದು ಆಶಿಸಿದರು.

ಅಭಿವೃದ್ಧಿಗೆ ವಿಜ್ಞಾನ ಅತ್ಯಗತ್ಯ:

‘ದೇಶದ ಅಭಿವೃದ್ಧಿಗೆ ವಿಜ್ಞಾನ ಅತ್ಯಗತ್ಯ.‌‌ ಜವಾಹರಲಾಲ್ ನೆಹರೂ ವಿಜ್ಞಾನಕ್ಕೆ ಹೆಚ್ಚಿನ‌ ಆದ್ಯತೆ ನೀಡಿದರು. ಆಗ, ಕೆಲವರು ಟೀಕಿಸಿದ್ದರು. ಆದರೆ, ನಂತರ ಅವರು ನೀಡಿದ ಪ್ರೋತ್ಸಾಹದ ಮಹತ್ವದ ಅರಿವಾಯಿತು. ಸ್ವಾತಂತ್ರ್ಯ ಬಂದಾಗ ವಿದೇಶಗಳಿಂದ ಆಹಾರ ಪಡೆಯುತ್ತಿದ್ದೆವು. ಕ್ರಮೇಣ ಕೃಷಿ ವಿಜ್ಞಾನಿಗಳು ಮಾಡಿದ ಸಾಧನೆಯಿಂದಾಗಿ ದೇಶದ ಎಲ್ಲರಿಗೂ ಆಹಾರ ಸಿಗುವಂತಾಗಿದೆ. ಹಸಿರು ಕ್ರಾಂತಿ ಹಾಗೂ ಕ್ಷೀರ ಕ್ರಾಂತಿಯಾಗಿದ್ದು ವಿಜ್ಞಾನದಿಂದಲೇ’ ಎಂದು ಪ್ರತಿಪಾದಿಸಿದರು.

ಕೆಎಸ್‌ಒಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್‌ ಮಾತನಾಡಿ, ‘ಇತಿಹಾಸ ಸೇರಿದಂತೆ ಯಾವುದನ್ನು ಬೇಕಾದರೂ ತಿರುಚಬಹುದು. ಆದರೆ, ವಿಜ್ಞಾನವನ್ನು ತಿರುಚಲಾಗದು. ವಿಜ್ಞಾನ ಬೆಳೆದಂತೆಲ್ಲಾ ದೇಶ ಬೆಳೆಯುತ್ತದೆ’ ಎಂದು ಹೇಳಿದರು.

ಗೂಗಲ್‌ ಗುಲಾಮರು:

ಭಾರತ್ ಸ್ಕೌಟ್ ಅಂಡ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ‘ಈಗಿನ ಪೀಳಿಗೆಯವರು ಗೂಗಲ್‌ನ‌ ಗುಲಾಮರಾಗಿದ್ದಾರೆ. ಈ ಸಂದರ್ಭದಲ್ಲಿ ವಿಜ್ಞಾನವು ಹಿಂದೆಂದಿಗಿಂತಲೂ ಬಹಳ ಪ್ರಸ್ತುತವಾಗಿದೆ. ಹೀಗಾಗಿ, ಶಿಕ್ಷಕರು ವೈಜ್ಞಾನಿಕ ವಿಚಾರಗಳನ್ನು ಮಕ್ಕಳಿಗೆ ತಿಳಿಸಬೇಕು. ಪ್ಲಾಸ್ಟಿಕ್‌ನಿಂದ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಎಚ್‌.ನರಸಿಂಹಯ್ಯ ‍ಪ್ರಶಸ್ತಿ ಸ್ವೀಕರಿಸಿದ ಪ್ರೊ.ಎಂ.ಆರ್.ನಾಗರಾಜ್ ಮಾತನಾಡಿ, ‘ವಿಜ್ಞಾನ ಜನಪ್ರಿಯಗೊಳಿಸಲು ನಮ್ಮ ಕಾಲದಲ್ಲಿ ಸಮೃದ್ಧ ಸಾಹಿತ್ಯ ‌ಇತ್ತು. ಈಗ ಸಾಹಿತ್ಯವನ್ನೇ ಜನಪ್ರಿಯಗೊಳಿಸಬೇಕಾದ ಸ್ಥಿತಿ‌‌ ಇದೆ’ ಎಂದು ವ್ಯಾಖ್ಯಾನಿಸಿದರು.

‘ಜನಪ್ರಿಯ ವಿಜ್ಞಾನಕಾರರಾಗಲು ದೇಶ ಸುತ್ತಬೇಕು; ಕೋಶ ಓದಬೇಕು. ತಿಳಿ ಹಾಸ್ಯ ಸಮ್ಮಿಳಿತಗೊಳಿಸಿ ವಿಜ್ಞಾನದ ವಿಷಯವನ್ನು ತಿಳಿಸಿಕೊಡಬೇಕು. ಜನರ ಅಭಿರುಚಿ, ಇತ್ತೀಚಿನ‌ ಬೆಳವಣಿಗೆಗಳನ್ನು ‌ಅರಿತು ವಿಷಯವನ್ನು ಬೆಸೆಯಬೇಕು. ಹುಸಿಯನ್ನು ತಿಳಿಸಬಾರದು’ ಎಂದು ಕಿವಿಮಾತು ಹೇಳಿದರು.

ವೈಜ್ಞಾನಿಕ ಪ್ರಜ್ಞೆಯ ರಾಷ್ಟ್ರವನ್ನಾಗಿ:

‘ಭಾರತವನ್ನು ಭವ್ಯ ವೈಜ್ಞಾನಿಕ ಪ್ರಜ್ಞೆಯ ರಾಷ್ಟ್ರವನ್ನಾಗಿ ಕಟ್ಟಬೇಕು’ ಎಂದು ಮತ್ತೊಬ್ಬ ಪ್ರಶಸ್ತಿ ಪುರಸ್ಕೃತ ಪ್ರೊ.ಬಿ.ಕೆ.ಚಳಗೇರಿ ಆಶಯ ವ್ಯಕ್ತಪಡಿಸಿದರು.

ಸರ್ವಾಧ್ಯಕ್ಷತೆ ವಹಿಸಿದ್ದ ಎ.ಎಸ್.ಕಿರಣ್‌ಕುಮಾರ್‌ ಮಾತನಾಡಿ, ‘ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಕ್ಷಿಪ್ರ ಬೆಳವಣಿಗೆ ಆಗುತ್ತಿದ್ದು, ಸುಸ್ಥಿರ ‌ಅಭಿವೃದ್ಧಿಗೆ ಅದನ್ನು ಬಳಸಿಕೊಳ್ಳಬೇಕು’ ಎಂದರು.

‘ಕೃತಕ ಬುದ್ಧಿಮತ್ತೆ ಹೇಳುವುದನ್ನೇ ಕೇಳುತ್ತಾ ಹೋದರೆ ದೊಡ್ಡ ಅನಾಹುತ ಎದುರಿಸಬೇಕಾಗುತ್ತದೆ. ಅದು ಒಳ್ಳೆಯ ಕೆಲಸಕ್ಕಷ್ಟೆ ಬಳಕೆಯಾಗಬೇಕು. ಈ ಬಗ್ಗೆ ಜಾಗೃತಿ ಮೂಡಿಸುವುದು ಈಗಿನ ಅಗತ್ಯವಾಗಿದೆ’ ಎಂದು ಹೇಳಿದರು.

ಸಮ್ಮೇಳನದಲ್ಲಿ ಮಂಡನೆಯಾದ ಉಪನ್ಯಾಸಗಳನ್ನು ಒಳಗೊಂಡ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ಕೊಬ್ಬರಿ–ಸಾವಯವ ಬೆಲ್ಲ ನೀಡಿದ್ದು ವಿಶೇಷವಾಗಿತ್ತು.

ಕೆಆರ್‌ವಿಪಿ ಅಧ್ಯಕ್ಷ ಗಿರೀಶ್ ಕಡ್ಲೆವಾಡ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಒಯು ಕುಲಸಚಿವ ಡಾ.ಎ.ಖಾದರ್ ಪಾಷ, ಉಪಾಧ್ಯಕ್ಷರಾದ ಎಚ್‌.ಜಿ.ಹುದ್ದಾರ್‌, ದೊಡ್ಡಬಸಪ್ಪ, ಖಜಾಂಚಿ ಈ.ನಾಗರಾಜ್, ಜಂಟಿ ಕಾರ್ಯದರ್ಶಿ ಬಿ.ಎನ್.ಶ್ರೀನಾಥ್, ಗೌರವ ಕಾರ್ಯದರ್ಶಿ ಸಿ.ಕೃಷ್ಣೇಗೌಡ, ಸಮ್ಮೇಳನದ ರಾಜ್ಯ ಸಂಯೋಜಕ ಎ.ಎನ್.ಮಹೇಶ್ ಇದ್ದರು.

ಗಾಮನಹಳ್ಳಿ ಸ್ವಾಮಿ ಪ್ರಾರ್ಥಿಸಿದರು. ಜಿಲ್ಲಾ ಸಮಿತಿಯ ಅಧ್ಯಕ್ಷ ಡಾ.ಶೇಖರ್ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಜಿ.ಬಿ.ಸಂತೋಷ್‌ಕುಮಾರ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT