ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಸಿದ್ಧಾಂತ ಬದಲಾಗಲಿ

43ನೇ ವಾರ್ಷಿಕ ಜಿಲ್ಲಾ ಅಧಿವೇಶನದಲ್ಲಿ ಸಂತೋಷ್ ಹೆಗ್ಡೆ ಅಭಿಪ್ರಾಯ
Last Updated 21 ಏಪ್ರಿಲ್ 2019, 20:33 IST
ಅಕ್ಷರ ಗಾತ್ರ

ಮೈಸೂರು: ಹಿಂದಿನ ಸಮಾಜ ಅಪರಾಧಿಗಳನ್ನು ತಿರಸ್ಕರಿಸುತ್ತಿತ್ತು. ಆದರೆ, ಇಂದಿನ ಸಮಾಜ ಜೈಲಿಗೆ ಹೋಗಿಬರುವವರನ್ನೂ ಹಾರ ಹಾಕಿ ಸ್ವಾಗತಿಸುತ್ತಿದೆ. ಈ ಸಿದ್ಧಾಂತಗಳನ್ನು ಬದಲಾಯಿಸುವ ಪ್ರಯತ್ನಗಳಾಗಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಲಯನ್ಸ್ ವತಿಯಿಂದ ನಗರದ ಕೆಎಸ್‌ಒಯು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 43ನೇ ವಾರ್ಷಿಕ ಜಿಲ್ಲಾ ಅಧಿವೇಶನ 317ಎ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಜನರು ಶ್ರೀಮಂತಿಕೆಗೆ ಬೆಲೆ ನೀಡುತ್ತಿದ್ದು, ಪ್ರಾಮಾಣಿಕರು ಪ್ರಶ್ನಿಸಿದರೆ ಹುಚ್ಚು ಹಿಡಿದಿದೆ ಎಂದು ವ್ಯಂಗ್ಯ ಮಾಡುತ್ತಾರೆ ಎಂದರು.

‘ನಾನು ಲೋಕಾಯುಕ್ತ ಹುದ್ದೆಗೆ ಬರುವವರೆಗೂ ಸಮಾಜದಲ್ಲಿ ಆಗುವ ಅನ್ಯಾಯಗಳ ಬಗ್ಗೆ ತಿಳಿದಿರಲಿಲ್ಲ. ಲೋಕಾಯುಕ್ತನಾಗಿ ಸೇವೆ ಸಲ್ಲಿಸಿದ 5 ವರ್ಷಗಳಲ್ಲಿ ದೇಶದಲ್ಲಿ ನಡೆದ ಅನೇಕ ಭ್ರಷ್ಟಾಚಾರ, ಹಗರಣಗಳ ಬಗ್ಗೆ ನಾನು ಮಾಹಿತಿ ಪಡೆದುಕೊಂಡೆ ಎಂದು ಹೇಳಿದರು.

ಯೋಧರಿಗೆ ನೀಡುವ ಜೀಪ್‌ ವ್ಯವಸ್ಥೆ ಯಲ್ಲೂ ₹52 ಲಕ್ಷ ಹಗರಣ ನಡೆಯಿತು. ಬೋಫೋರ್ಸ್ ಹಗರಣದಿಂದ ₹65 ಕೋಟಿ, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ₹ 72 ಕೋಟಿ ಹಾಗೂ 2ಜಿ ಹಗರಣದಿಂದ ₹1.76 ಸಾವಿರ ಕೋಟಿ ನಷ್ಟವಾಯಿತು. ಇದರಲ್ಲಿ ಇನ್ನು ಕೆಲವು ಹಗರಣಗಳು ವಿಚಾರಣೆಯ ಹಂತದಲ್ಲಿವೆ. ಹೀಗೆ ದೇಶದ ಸಂಪತ್ತು ಇದೇ ರೀತಿ ಲೂಟಿಯಾಗುತ್ತಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ದೇಶದ ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿ ಅವರು ಸರ್ಕಾರದಿಂದ ₹1 ನೀಡಿದರೆ ಜನರಿಗೆ ತಲುಪುವಷ್ಟರಲ್ಲಿ ಅದರ ಮೌಲ್ಯ 15 ಪೈಸೆ ಆಗಿರುತ್ತದೆ ಎಂದಿದ್ದರು. ಆದರೆ ಇಂದು ₹10 ನೀಡಿದರೂ ಜನರಿಗೆ ತಲುಪುತ್ತಿರುವುದು ಅಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆ ಬಂದಾಗ ನಮ್ಮ ರಾಜಕಾರಣಿಗಳು ಎಂತಹ ವಿಚಾರ ಗಳನ್ನು ಪ್ರಸಾಪಿಸುತ್ತಾರೆ ಎಂಬುದನ್ನು ಗಮನಿಸಿದರೆ ಅವರ ಮನೋಭಾವ ಹೇಗಿದೆ ಎಂದು ತಿಳಿದುಕೊಳ್ಳಬಹುದು. ಹಿಂದೆ ಹಿರಿಯರು ಕಟ್ಟಿದ್ದ ಮಾನವೀಯ ಮೌಲ್ಯಗಳ ಕುಸಿತವೇ ಇದಕ್ಕೆ ಕಾರಣ ಎಂದು ತಿಳಿಸಿದರು.

ಸಂಸತ್ತಿನಲ್ಲಿ ಸದನ ನಡೆಯುವಾಗ ವಾದ ಪ್ರತಿವಾದಗಳಿರುತ್ತಿತ್ತು. ಸಮಸ್ಯೆಗಳನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳುತ್ತಿದ್ದರು. ಆದರೆ, ಇಂದು ಸದನಗಳೇ ಸರಿಯಾಗಿ ನಡೆಯುವುದಿಲ್ಲ. ಗದ್ದಲ ಎಬ್ಬಿಸಿ ಸದನ ತ್ಯಾಗ ಮಾಡುತ್ತಿದ್ದಾರೆ. ಇದರಿಂದ ಪ್ರತಿಬಾರಿ ಸಂಸತ್ ಅಧಿವೇಶನ ನಡೆದಾಗ ಸುಮಾರು ₹10 ಲಕ್ಷ ಹಣ ವ್ಯರ್ಥವಾಗುತ್ತಿದೆ ಎಂದು ವಿಷಾದಿಸಿದರು.

ಭಾರತ ಬಹುಸಂಸ್ಕೃತಿಯ ರಾಷ್ಟ್ರ ಆಗಿರುವುದರಿಂದ ಕ್ರಾಂತಿಯಿಂದ ದೇಶವನ್ನು ಛಿದ್ರ ಮಾಡಬಹುದೇ ಹೊರತು ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪೋಷಕರು ನಮಗೆ ವಯಸ್ಸಾಗಿದೆ ನಮ್ಮಿಂದ ಬದಲಾವಣೆ ಸಾಧ್ಯವಿಲ್ಲ ಎಂದು ಕೂರದೇ, ನಮ್ಮ ಮಕ್ಕಳಲ್ಲಿ ಮೌಲ್ಯಗಳನ್ನು ಅಳವಡಿಸಿ ಬದಲಾವಣೆ ತರಿಸಬೇಕು’ ಎಂದು ಸಲಹೆ ನೀಡಿದರು.

ಲಯನ್ಸ್ ಸಂಸ್ಥೆಯ ಜಿಲ್ಲಾ ಘಟಕದ ಗವರ್ನರ್ ವಿ.ರೇಣುಕುಮಾರ್ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT