ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘1 ಲಕ್ಷ ಪಂಪ್‌ಸೆಟ್‌ಗೆ ಸೋಲಾರ್‌ ಸಬ್ಸಿಡಿ’

ಕೆರೆ ತುಂಬಿಸುವಿಕೆಗೆ ಮೊದಲ ಆದ್ಯತೆ–ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ
Last Updated 29 ಫೆಬ್ರುವರಿ 2020, 9:41 IST
ಅಕ್ಷರ ಗಾತ್ರ

ಮೈಸೂರು: ‘ಸೋಲಾರ್‌ ಪಂಪ್‌ಸೆಟ್‌ಗೆ ಕೇಂದ್ರ ಸರ್ಕಾರ ಶೇ 30ರಷ್ಟು ಸಬ್ಸಿಡಿ ನೀಡುತ್ತಿದೆ. ರಾಜ್ಯವೂ ಸಬ್ಸಿಡಿ ನೀಡಲು ಮುಂದಾಗಿದ್ದು, ಪ್ರಸಕ್ತ ಸಾಲಿನಲ್ಲಿ ಒಂದು ಲಕ್ಷ ಪಂಪ್‌ಸೆಟ್‌ಗೆ ಸಬ್ಸಿಡಿ ನೀಡಲು ಚಿಂತಿಸಿದೆ’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ 27 ಕೆರೆ ತುಂಬುವ ₹ 78 ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘2–3 ಎಕರೆಯಲ್ಲಿ ಸೋಲಾರ್ ಯುನಿಟ್ ಸ್ಥಾಪಿಸಲು ಅನುಮತಿ ನೀಡಲಿದೆ. ಜತೆಗೆ ಸರ್ಕಾರವೇ ಈ ಘಟಕಗಳಿಂದ ವಿದ್ಯುತ್ ಖರೀದಿಸಲಿದೆ’ ಎಂದು ಹೇಳಿದರು.

‘ನಮ್ಮ ಸರ್ಕಾರ ಕೆರೆ ತುಂಬಿಸುವ ಯೋಜನೆಗೆ ಮೊದಲ ಆದ್ಯತೆ ನೀಡಲಿದೆ. ಮೈಸೂರಿನಲ್ಲಿ ನಿತ್ಯವೂ 120 ಎಂಎಲ್‌ಡಿ ಕೊಳಚೆ ನೀರು ಸಂಗ್ರಹಗೊಳ್ಳುತ್ತಿದೆ. ಈ ನೀರನ್ನು ಸಂಸ್ಕರಿಸಿಕೊಂಡು ಅನ್ಯ ಉದ್ದೇಶಗಳಿಗೆ ಬಳಸಲು ಯೋಜನೆ ರೂಪಿಸಿಕೊಳ್ಳಿ’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

‘ಹಿಂದಿನ ವರ್ಷ ಪ್ರವಾಹದಿಂದ 800 ಟಿಎಂಸಿ ಅಡಿಗೂ ಹೆಚ್ಚಿನ ನೀರು ಸಮುದ್ರದ ಪಾಲಾಯಿತು. ಇದನ್ನು ಚಿಕ್ಕ ಚಿಕ್ಕ ಯೋಜನೆ ರೂಪಿಸಿ ಹಿಡಿದಿಟ್ಟುಕೊಂಡರೇ, ಭವಿಷ್ಯದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಮುಖ್ಯಮಂತ್ರಿ ಸಹ ಇದೇ ಆಲೋಚನೆಯಲ್ಲಿದ್ದಾರೆ’ ಎಂದು ಮಾಧುಸ್ವಾಮಿ ಹೇಳಿದರು.

ಸಚಿವ ವಿ.ಸೋಮಣ್ಣ ಮಾತನಾಡಿ ‘ಬೇಸಿಗೆ ಬರ್ತಿದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯಕ್ಕೆ ತಕ್ಕಂತೆ ನೀರು ಬಳಸಿಕೊಳ್ಳಿ. ಮಾವು ಕಡಿಮೆಗೊಳಿಸಿ, ಗೇರು ಬೆಳೆಸಿ’ ಎಂದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ ‘ಈ ಭಾಗದಲ್ಲಿ ಕುಡಿಯಲು ನೀರಿಲ್ಲ. ಕೆರೆಗಳು ಬತ್ತಿವೆ. ಗಿಡ–ಮರ ಒಣಗುತ್ತಿವೆ. ಯೋಜನೆಯಿಂದ 6 ಕೆರೆಗಳು ಕೈಬಿಟ್ಟಿವೆ. ಅವನ್ನು ಸೇರಿಸಿ’ ಎಂದು ಸಚಿವರಲ್ಲಿ ಮನವಿ ಮಾಡಿದರು.

ಸಣ್ಣ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಜಿ.ಪಂ.ಸದಸ್ಯರಾದ ಚಂದ್ರಿಕಾ, ಅರುಣ್‌ಕುಮಾರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜು, ಬಿಜೆಪಿ ಅಧ್ಯಕ್ಷ ಎಸ್‌.ಡಿ.ಮಹೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಉಪಸ್ಥಿತರಿದ್ದರು.

ಪರಸ್ಪರ ಹೊಗಳಿಕೆ !

ಶಾಸಕ ಜಿ.ಟಿ.ದೇವೇಗೌಡ, ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ ಸಿಂಹ ಒಬ್ಬರನ್ನೊಬ್ಬರು ವೇದಿಕೆಯಲ್ಲೇ ಪರಸ್ಪರ ಪ್ರಶಂಸಿಸಿಕೊಂಡರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಟಿ.ದೇವೇಗೌಡ ಸಚಿವರಿಬ್ಬರು, ಸಂಸದರನ್ನು ಹೊಗಳಿದರು.

ಸಚಿವ ವಿ.ಸೋಮಣ್ಣ ಮಾತನಾಡಿ ‘ಜಿ.ಟಿ.ದೇವೇಗೌಡ ನಿಷ್ಠುರವಾದಿ. ಕೆರೆಗೆ ನೀರು ತುಂಬಿಸುವ ಮೂಲಕ ನಿಮ್ಮ ಋಣ ತೀರಿಸಿದ್ದಾರೆ. ಅವರನ್ನು ಕೈ ಬಿಡಬೇಡಿ’ ಎಂದು ಮಾರ್ಮಿಕವಾಗಿ ಹೇಳಿದರು.

ಸಂಸದ ಪ್ರತಾಪ ಸಿಂಹ ‘ನಾನು ಜಿ.ಟಿ.ದೇವೇಗೌಡರ ಮಗನಿದ್ದಂತೆ. ಈ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದವರು ಏನು ಮಾಡಲಿಲ್ಲ. ಜಿ.ಟಿ.ಡಿ–ಸೋಮಣ್ಣ ಜೋಡಿ ಎಲ್ಲವನ್ನು ಮಾಡುತ್ತಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೆಸರೇಳದೆ ಟಾಂಗ್ ನೀಡಿದರು. ಜಿಲ್ಲಾಧಿಕಾರಿ ಕಾರ್ಯ ದಕ್ಷತೆಯನ್ನು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT