ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಅಲೆಯಲ್ಲಿ ತೇಲಿದ ಸಾಂಸ್ಕೃತಿಕ ನಗರಿ

ಮಕ್ಕಳಿಂದ ಅಬಾಲವೃದ್ಧರಾಗಿ ಎಲ್ಲರಲ್ಲೂ ಸಂಭ್ರಮ
Last Updated 1 ನವೆಂಬರ್ 2019, 14:39 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಶುಕ್ರವಾರ ಸಾರ್ವಜನಿಕರು ಸಡಗರ, ಸಂಭ್ರಮದಿಂದ 64ನೇ ಕನ್ನಡ ರಾಜ್ಯೋತ್ಸವ ಆಚರಿಸಿದರು.

ಮಕ್ಕಳಿಂದ ಅಬಾಲವೃದ್ಧರವರೆಗೂ ಒಂದಿಲ್ಲ ಒಂದು ರೀತಿಯಲ್ಲಿ ರಾಜ್ಯೋತ್ಸವದಲ್ಲಿ ಭಾಗಿಯಾದರು. ಜಿಲ್ಲಾಡಳಿತ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಮಕ್ಕಳು ಹೆಜ್ಜೆ ಹಾಕಿದರೆ, ಇತರರು ತಮ್ಮ ತಮ್ಮ ಬಡಾವಣೆಯಲ್ಲಿ ನಡೆದ ಧ್ವಜಾರೋಹಣಗಳಲ್ಲಿ ಪಾಲ್ಗೊಂಡರು.

ಆಟೊ ಚಾಲಕರು ಕನ್ನಡ ಧ್ವಜವನ್ನು ತಮ್ಮ ತಮ್ಮ ವಾಹನಗಳಿಗೆ ಹಾಕಿಕೊಂಡು ಭಾಷಾಭಿಮಾನ ಮೆರೆದರೆ, ಸಂಘ, ಸಂಸ್ಥೆಗಳವರು ಬಡಾವಣೆಗಳ ಅಲ್ಲಲ್ಲಿ ಸ್ಥಾಪಿಸಲಾಗಿದ್ದ ಧ್ವಜಸ್ತಂಭಗಳಲ್ಲಿ ಧ್ವಜಾರೋಹಣ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.

ಜಿಲ್ಲಾಡಳಿತವು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣ ಭಾಗಿಯಾದರು. ಅರಮನೆಯ ಆವರಣದಲ್ಲಿದ್ದ ಭುವನೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ರಾಷ್ಟ್ರ ಮತ್ತು ನಾಡ ಧ್ವಜಾರೋಹಣ ಮಾಡಿದರು.

ಬಳಿಕ ಮಾತನಾಡಿದ ಅವರು, ‘ಅಖಂಡ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಯುವ ಪೀಳಿಗೆ ಪಾಲುದಾರರಾಗಬೇಕು’ ಎಂದು ಕರೆ ನೀಡಿದರು.

ಯುವಜನರು ನಾಡಿನ ಬಗ್ಗೆ ಆಳವಾದ ಅಧ್ಯಯನ ಹಾಗೂ ವ್ಯಾಸಂಗದ ಜತೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಬಗೆಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ನಮ್ಮ ಪರಂಪರೆಯ ವಾರಸುದಾರರಾಗಿ ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡ ರಾಜ್ಯೋತ್ಸವದ ಮಹತ್ವ ಹಾಗೂ ಇತಿಹಾಸ ಹೇಳಿದ ಅವರು ಕನ್ನಡಕ್ಕಾಗಿ ದುಡಿದ ಮಹಾನ್ ಚೇತನಗಳನ್ನು ಸ್ಮರಿಸಿದರು. ರಾಜ್ಯ ಸರ್ಕಾರ ನೆರೆ ಸಂತ್ರಸ್ತರು ಹಾಗೂ ಇತರ ವಿಷಯಗಳಲ್ಲಿ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಬಳಿಕ ನಡೆದ ಭುವನೇಶ್ವರಿ ಮೆರವಣಿಗೆಯಲ್ಲಿ ವೀರಗಾಸೆ, ಕಂಸಾಲೆ ಸೇರಿದಂತೆ ವಿವಿಧ ಕಲಾತಂಡಗಳು ಸೊಬಗನ್ನು ಹೆಚ್ಚಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT