ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಮನವಿಗೆ ಉತ್ತಮ ಸ್ಪಂದನೆ; ಮೃಗಾಲಯಕ್ಕೆ ₹1.18 ಕೋಟಿ ದೇಣಿಗೆ

Last Updated 3 ಮೇ 2020, 1:39 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮೃಗಾಲಯದ ನಿರ್ವಹಣೆಗೆ ದೇಣಿಗೆ ನೀಡುವಂತೆ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಮಾಡಿರುವ ಮನವಿಗೆ ಉತ್ತಮ ಸ್ಪಂದನೆ ದೊರೆತಿದ್ದು, ಮತ್ತೆ ₹ 45.30 ಲಕ್ಷ ಹರಿದುಬಂದಿದೆ.

ಶನಿವಾರ ಮೃಗಾಲಯಕ್ಕೆ ಭೇಟಿ ನೀಡಿದ ಸಚಿವರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರಿಗೆ ಚೆಕ್‌ ಹಸ್ತಾಂತರಿಸಿದರು.

ಲಾಕ್‌ಡೌನ್‌ನಿಂದಾಗಿ ಮೃಗಾಲಯದ ನಿರ್ವಹಣೆ ಕಷ್ಟವಾಗುತ್ತಿದ್ದು, ಧನ ಸಹಾಯ ಮಾಡುವಂತೆ ತಾವು ಪ್ರತಿನಿಧಿಸುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಜನರಲ್ಲಿ ಸಚಿವರು ಮನವಿ ಮಾಡಿದ್ದರು. ಇದರಿಂದ ಮೃಗಾಲಯಕ್ಕೆ ಆರ್ಥಿಕ ನೆರವು ಹರಿದುಬಂದಿದೆ.

ಸಚಿವರು ಏ.29 ರಂದು ₹73.16 ಲಕ್ಷ ಮೊತ್ತದ ಚೆಕ್‌ಅನ್ನು ಮೃಗಾಲಯಕ್ಕೆ ಹಸ್ತಾಂತರಿಸಿದ್ದರು. ಇದುವರೆಗೆ ಒಟ್ಟು ₹1.18 ಕೋಟಿ ಮೊತ್ತ ಹಸ್ತಾಂತರ ಮಾಡಿದಂತಾಗಿದೆ.

ಆಹಾರ ಸಚಿವರಿಂದ ₹ 8 ಲಕ್ಷ: ಉಸ್ತುವಾರಿ ಸಚಿವರ ಜತೆಗೆ ಆಹಾರ ಸಚಿವ ಗೋಪಾಲಯ್ಯ ಅವರೂ ಮೃಗಾಲಯಕ್ಕೆ ಭೇಟಿ ನೀಡಿದರು. ಮೈಸೂರು ಮೃಗಾಲಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ತಕ್ಷಣ ₹8 ಲಕ್ಷ ದೇಣಿಗೆ ನೀಡಿದರು. ಅಲ್ಲದೆ ಮೃಗಾಲಯದ 286 ಸಿಬ್ಬಂದಿಗೆ ತಲಾ 25 ಕೆ.ಜಿ. ಅಕ್ಕಿಯನ್ನು ನೀಡಿದರು.

ದಾಖಲೆ ಮೊತ್ತ: ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಎರಡು ಹಂತಗಳಲ್ಲಿ ₹1.18 ಕೋಟಿ ಅಲ್ಲದೆ ₹7.30 ಲಕ್ಷ ಸೇರಿ ಒಟ್ಟು ₹1.26 ಕೋಟಿ ಮೊತ್ತವನ್ನು ಮೈಸೂರು ಮೃಗಾಲಯದ ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿ ಕ್ರೋಢೀಕರಿಸಿದ್ದಾರೆ. ಮೈಸೂರು ಮೃಗಾಲಯದ ಪ್ರಾಣಿ ದತ್ತು ಸ್ವೀಕಾರ ಯೋಜನೆಯ ಇತಿಹಾಸದಲ್ಲೇ ಇದು ದಾಖಲೆಯ ಮೊತ್ತ ಎಂದು ಅಜಿತ್‌ ಕುಲಕರ್ಣಿ ತಿಳಿಸಿದ್ದಾರೆ.

ಅಮೆರಿಕದಿಂದ ಸ್ಪಂದನೆ: ಮೈಸೂರು ಮೃಗಾಲಯಕ್ಕೆ ದೇಣಿಗೆ ನೀಡುವಂತೆ ಸಚಿವರು ವಾಟ್ಸ್‌ಆ್ಯಪ್‌ನಲ್ಲಿ ಮಾಡಿದ ಮನವಿಗೆ ಅಮೆರಿಕದಿಂದಲೂ ಸ್ಪಂದನೆ ದೊರೆತಿದೆ. ಅಮೆರಿಕದ ಫೀನಿಕ್ಸ್‌ನಲ್ಲಿ ನೆಲೆಸಿರುವ ಜ್ಯೋತಿ ನಿವಾಸ್‌ ಅವರು ತಮ್ಮ ಒಂದು ವರ್ಷ ವಯಸ್ಸಿನ ಮಗಳು ಪ್ರಿಶಾ ಹೆಸರಿನಲ್ಲಿ ₹25 ಸಾವಿರ ದೇಣಿಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT