ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗೆ ವಿಶೇಷ ಅನುದಾನ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ

Last Updated 29 ಫೆಬ್ರುವರಿ 2020, 9:58 IST
ಅಕ್ಷರ ಗಾತ್ರ

ಮೈಸೂರು: ‘ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಯೋಜನಾ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.

‘ಪ್ರತಿ ತಾಲ್ಲೂಕಿಗೂ ₹ 20 ಕೋಟಿ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಗೆ ₹ 10 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಕುಕ್ಕರಹಳ್ಳಿ ಕೆರೆಯ ದುರ್ವಾಸನೆ ತಡೆಗಟ್ಟಲು ಕ್ರಮ ಕೈಗೊಳ್ಳುವುದರ ಜೊತೆಗೆ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ, ಉಪಾಧ್ಯಕ್ಷರಾದ ಗೌರಮ್ಮ ಸೋಮಶೇಖರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಸಿಇಒ ಕೆ.ಜ್ಯೋತಿ, ನಗರ ಪಾಲಿಕೆ ಆಯಕ್ತ ಗುರುದತ್ ಹೆಗಡೆ ಸಭೆಯಲ್ಲಿ ಉಪಸ್ಥಿತರಿದ್ದರು.

ವೋಲ್ವೊ ಬಸ್ ಸಂಚಾರಕ್ಕೆ ಚಾಲನೆ

ಮೈಸೂರಿನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್ ಮತ್ತು ಸಿಕಂದರಾಬಾದ್‍ಗೆ ಹಾಗೂ ಮೈಸೂರು-ಬೆಳಗಾವಿ ಪ್ರಯಾಣಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸುವ ದೃಷ್ಟಿಯಿಂದ, ಕೆಎಸ್‌ಆರ್‌ಟಿಸಿಯ ಮೈಸೂರು ಗ್ರಾಮಾಂತರ ವಿಭಾಗದ ವತಿಯಿಂದ ನೂತನ ಮಾದರಿಯ ಅಂಬಾರಿ ವಾಹನಗಳ ಸಂಚಾರಕ್ಕೆ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.

ಮೈಸೂರು-ಸಿಕಂದರಬಾದ್ ಮಾರ್ಗದ ವಾಹನ ಅಂಬಾರಿ ಡ್ರೀಮ್ ಕ್ಲಾಸ್ ಎಸಿ ಸ್ಲೀಪರ್ ವಾಹನವಾಗಿದ್ದು, ಮೈಸೂರಿನಿಂದ ಬೆಂಗಳೂರು ಹೊರವಲಯದ ಕೆಂಗೇರಿ ನೈಸ್ ರಸ್ತೆ ಮುಖಾಂತರ ಹೆಬ್ಬಾಳ, ಯಲಹಂಕ ಮಾರ್ಗವಾಗಿ ಸಂಚಾರ ಮಾಡುವುದರಿಂದ ನೇರ ಪ್ರಯಾಣಿಕರಿಗೆ ಒಂದು ಗಂಟೆಗೂ ಹೆಚ್ಚಿನ ಅವಧಿಯ ಪ್ರಯಾಣ ಸಮಯ ಕಡಿಮೆಯಾಗಲಿದೆ.

ಪ್ರಯಾಣಿಕರ ಹಿತದೃಷ್ಟಿಯಿಂದ ಮೈಸೂರು ಕೇಂದ್ರೀಯ ಬಸ್ ನಿಲ್ದಾಣದಿಂದ ಬೆಳಗಾವಿಗೆ ನಾನ್ ಎಸಿ ಸ್ಲೀಪರ್ ಸಾರಿಗೆ ಸಂಚಾರ ಆರಂಭಿಸಲಾಗಿದೆ. ಮೈಸೂರಿನಿಂದ ಕೆ.ಆರ್.ನಗರ, ಚನ್ನರಾಯಪಟ್ಟಣ, ಅರಸೀಕೆರೆ, ಶಿವಮೊಗ್ಗ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ಸಂಚರಿಸುವುದು ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ತಿಳಿಸಿದರು.

ಶಾಸಕ ಎಲ್.ನಾಗೇಂದ್ರ, ಕೆಎಸ್‌ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‍ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT