ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಹೊಸ ಕೈದಿಗಳ ಮೇಲೆ ವಿಶೇಷ ನಿಗಾ

ಜೈಲಿಗೂ ತಟ್ಟಿದ ಕೊರೊನಾ ಭೀತಿ, ಕೈದಿಗಳ ಭೇಟಿಗೆ ನಿಷೇಧ
Last Updated 18 ಮಾರ್ಚ್ 2020, 10:55 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಜಿಲ್ಲಾ ಕೇಂದ್ರ ಕಾರಾಗೃಹಕ್ಕೂ ಕೊರೊನಾ ಭೀತಿ ತಟ್ಟಿದ್ದು, ಕೈದಿಗಳ ಭೇಟಿಯನ್ನು ನಿಷೇಧಿಸಲಾಗಿದೆ. ಪ್ರತಿ ಹೊಸ ಕೈದಿಯ ಮೇಲೆ ವಿಶೇಷ ನಿಗಾ ಇರಿಸಲಾಗಿದೆ.

ಮಂಗಳವಾರದಿಂದ ಮುಂದಿನ ಆದೇಶದವರೆಗೂ ಜೈಲಿನಲ್ಲಿರುವ ಕೈದಿಗಳನ್ನು ಅವರ ಸಂಬಂಧಿಕರಾಗಲಿ, ಸ್ನೇಹಿತರಾಗಲಿ ಭೇಟಿ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಹೊರಗಿನಿಂದ ಬರುವವರಿಂದ ಒಂದು ವೇಳೆ ಕೊರೊನಾ ಸೋಂಕು ಕೈದಿಗಳಿಗೆ ಹರಡಿದರೆ ಪರಿಸ್ಥಿತಿ ನಿಯಂತ್ರಿಸುವುದಕ್ಕೆ ಕಷ್ಟವಾಗಲಿದೆ ಎಂಬ ಕಾರಣಕ್ಕೆ ಈ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಜೈಲಿನ ಆಸ್ಪತ್ರೆಯಲ್ಲಿ ‘ಐಸೋಲೇಷನ್‌ ವಾರ್ಡ್‌’ವೊಂದನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಶೀತ, ಕೆಮ್ಮು, ನೆಗಡಿ, ಜ್ವರದ ಲಕ್ಷಣ ಇರುವವರನ್ನು ಇಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲು ಯೋಜನೆ ರೂಪಿಸಲಾಗಿದೆ.

ಇಂತಹ ಲಕ್ಷಣವುಳ್ಳವರ ಪರೀಕ್ಷೆಗೆಂದೇ ಥರ್ಮಲ್ ಉಷ್ಣತಾ ಮಾಪನ‌ವನ್ನು ಖರೀದಿಸಲಾಗಿದೆ. ‘ಹ್ಯಾಂಡ್‌ ವಾಷ್‌’ಗಳನ್ನು ಎಲ್ಲೆಡೆ ಇಡಲಾಗಿದ್ದು, ಇದನ್ನು ಬಳಸುವಂತೆ ಜಾಗೃತಿ ಪತ್ರಗಳನ್ನು ಪ್ರತಿ ಸೆಲ್‌ಗೂ ಅಂಟಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ‘ಪಬ್ಲಿಕ್ ಅಡ್ರೆಸ್‌ ಸಿಸ್ಟ್ಂ’ನಲ್ಲಿ ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮೂವರು ವೈದ್ಯರು ದಿನದ 24 ಗಂಟೆಗಳ ಕಾಲ ಲಭ್ಯರಿದ್ದು, ಅನಾರೋಗ್ಯದ ಲಕ್ಷಣವುಳ್ಳವರನ್ನು ಪರೀಕ್ಷಿಸುತ್ತಿದ್ದಾರೆ.

ಎಲ್ಲ ಸಿಬ್ಬಂದಿಗೂ ಉಚಿತವಾಗಿ ಮಾಸ್ಕ್ ವಿತರಿಸಲಾಗಿದೆ. ಶೀತದ ಲಕ್ಷಣವುಳ್ಳವರಿಗೆ ಮಾಸ್ಕ್ ಧರಿಸಲು ನೀಡಲು ಸಾಕಾಗುವಷ್ಟು ಮಾಸ್ಕ್‌ನ್ನು ಸಂಗ್ರಹಿಸಿಕೊಳ್ಳಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಎಸ್.ದಿವ್ಯಶ್ರೀ, ‘ಜೈಲಿನಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಯಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿಯೇ, ಕೈದಿಗಳನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT