ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈದ್ಯಕೀಯ ತಾಣ’ವಾಗಿ ಮೈಸೂರು ಅಭಿವೃದ್ದಿ

ಮೂರು ತಿಂಗಳೊಳಗೆ ವೈದ್ಯರ ನೇಮಕ: ಆರೋಗ್ಯ ಸಚಿವ ಶ್ರೀರಾಮುಲು
Last Updated 26 ಜನವರಿ 2020, 10:19 IST
ಅಕ್ಷರ ಗಾತ್ರ

ಮೈಸೂರು: ಅತ್ಯಾಧುನಿಕ ಸೌಲಭ್ಯಗಳುಳ್ಳ ಹಲವು ಆಸ್ಪತ್ರೆಗಳನ್ನು ಹೊಂದಿರುವ ಸಾಂಸ್ಕೃತಿಕ ನಗರಿಯು ಮುಂದಿನ ದಿನಗಳಲ್ಲಿ ‘ವೈದ್ಯಕೀಯ ತಾಣ’ವಾಗಿ ಬೆಳೆಯುವ ಎಲ್ಲ ಸೂಚನೆಗಳು ಕಾಣಿಸುತ್ತಿವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

ಕೆಆರ್‌ಎಸ್‌ ರಸ್ತೆಯ ಮೇಟಗಳ್ಳಿಯಲ್ಲಿ ನಿರ್ಮಿಸಿರುವ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗಿಂತ ಕಡಿಮೆಯಿಲ್ಲ. ನಗರದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್‌ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿವೆ. ಆ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಮೈಸೂರು ತನ್ನದೇ ಛಾಪು ಮೂಡಿಸಲಿದೆ ಎಂದರು.

ರಾಜ್ಯದಲ್ಲಿರುವ 6.5 ಕೋಟಿ ಜನರಲ್ಲಿ ಸುಮಾರು 3 ಕೋಟಿಯಷ್ಟು ಬಡವರು ಇದ್ದಾರೆ. ಅವರು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳನ್ನು ನೆಚ್ಚಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸರಿಯಾಗಿ ಸಿಗುವುದಿಲ್ಲ ಎಂಬ ದೂರುಗಳು ಸಾಮಾನ್ಯ. ಅಂತಹ ದೂರು ಬರದಂತೆ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಕೆಪಿಎಸ್‌ಸಿ ಮೂಲಕ ವೈದ್ಯರ ನೇಮಕ ನಡೆಸುವ ಬದಲು ನೇರ ನೇಮಕಾತಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ನೇಮಕಾತಿಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳು ಒಳಗೊಂಡಂತೆ ರಾಜ್ಯದಲ್ಲಿ 3,500 ವೈದ್ಯರ ಕೊರತೆಯಿದೆ. ಮುಂದಿನ ಮೂರು ತಿಂಗಳಲ್ಲಿ ವೈದ್ಯರ ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎಚ್‌ಎಚ್‌ಎಂ) ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವ ಮತ್ತು ವೇತನ ಹೆಚ್ಚಿಸುವ ಚಿಂತನೆ ಇದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ರೆಫರಲ್ ಪದ್ಧತಿ ರದ್ದುಪಡಿಸಿ: ಸಂಸದ ಪ್ರತಾಪ ಸಿಂಹ ಮಾತನಾಡಿ, ಆಯುಷ್ಮಾನ್ ಭಾರತ್ ಯೋಜನೆಯನ್ನು ಆರೋಗ್ಯ ಕರ್ನಾಟಕಕ್ಕೆ ಸೇರಿಸಿದ್ದರಿಂದ ಗೊಂದಲ ಉಂಟಾಗಿತ್ತು. ಈ ಯೋಜನೆಯ ನಿಯಮದಂತೆ ಯಾರೂ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ದಾಖಲಾಗುವಂತಿಲ್ಲ. ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ ಎಂದು ರೆಫರೆಲ್ ಮಾಡಿದಾಗ ಮಾತ್ರ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕು. ಈ ನಿಯಮದಿಂದ ಬಡವರಿಗೆ ತೊಂದರೆಯಾಗಿದೆ. ಇದನ್ನು ತೆಗೆದುಹಾಕಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ಈ ಹಿಂದೆ ಶಾಸಕರಾಗಿದ್ದ ವಾಸು ಅವರು ಆಸ್ಪತ್ರೆಯ ನಿರ್ಮಾಣಕ್ಕೆ ಶ್ರಮ ಹಾಕಿದ್ದರು. ಹಾಲಿ ಶಾಸಕರಾಗಿರುವ ಎಲ್‌.ನಾಗೇಂದ್ರ ಅವರು ನಿರ್ಮಾಣ ಕಾಮಗಾರಿ ವೇಗ ಪಡೆದುಕೊಳ್ಳುವಂತೆ ನೋಡಿಕೊಂಡರು ಎಂದರು.

ಶಾಸಕರಾದ ಎಲ್‌.ನಾಗೇಂದ್ರ, ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಉಪಮೇಯರ್ ಸಿ.ಶ್ರೀಧರ್, ಪಾಲಿಕೆ ಆಯುಕ್ತ ಗುರುದತ್ತ್ ಹೆಗಡೆ, ಪಾಲಿಕೆ ಸದಸ್ಯ ಶ್ರೀನಿವಾಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಎಂಜಿನಿಯರ್ ಎಂ.ಗಣೇಶ್, ಮೈಸೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗೀಯ ಸಹಾಯಕ ನಿರ್ದೆಶಕಿ ಡಾ.ಬಿ.ಎಸ್.ಪುಷ್ಪಲತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್, ಜಿಲ್ಲಾ ಶಸ್ತ್ರಚಿಕಿತ್ಸಕ (ಪ್ರಭಾರ) ಡಾ.ಲಕ್ಷ್ಮಣ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT