ಮಂಗಳವಾರ, ಆಗಸ್ಟ್ 3, 2021
28 °C
ಮೈಸೂರು ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ: ಬಿಇಒಗಳ ಮನವಿ

ಥರ್ಮಲ್‌ ಸ್ಕ್ರೀನಿಂಗ್ ಯಂತ್ರಕ್ಕೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಒಂದೇ ಥರ್ಮಲ್‌ ಸ್ಕ್ರೀನಿಂಗ್‌ ಯಂತ್ರದಿಂದ ಪ್ರತಿ ವಿದ್ಯಾರ್ಥಿಯ ತಪಾಸಣೆ ನಡೆಸುವುದು ಕಷ್ಟವಾಗಲಿದೆ. ಇದಕ್ಕಾಗಿ ಸಾಕಷ್ಟು ಸಮಯ ಹಿಡಿಯಲಿದೆ. ಮತ್ತಷ್ಟು ಯಂತ್ರಗಳನ್ನು ಪ್ರತಿ ಪರೀಕ್ಷಾ ಕೇಂದ್ರಕ್ಕೂ ಒದಗಿಸಿ’ ಎಂದು ಮೈಸೂರು ಉತ್ತರ, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಎರಡೂ ವಲಯದ ಬಿಇಒಗಳಾದ ಕೃಷ್ಣ, ಉದಯಕುಮಾರ್, ಒಂದೇ ಥರ್ಮಲ್‌ ಸ್ಕ್ಯಾನಿಂಗ್ ಯಂತ್ರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನ ಎದುರಾಗುವ ಸಂಕಷ್ಟವನ್ನು ಬಿಚ್ಚಿಟ್ಟರು. ಭಾರಿ ಸಮಸ್ಯೆಯಾಗಲಿದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮಸ್ಯೆಗೆ ಪ್ರತಿಕ್ರಿಯಿಸಿದ ತಾ.ಪಂ. ಇಒ ಸಿ.ಆರ್.ಕೃಷ್ಣಕುಮಾರ್, ‘ತಾಲ್ಲೂಕಿನ ಪ್ರತಿ ಶಾಲೆಗೂ ತಾಲ್ಲೂಕು ಪಂಚಾಯಿತಿಯಿಂದ ಒಂದೊಂದು ಥರ್ಮಲ್ ಸ್ಕ್ರೀನಿಂಗ್ ಯಂತ್ರವನ್ನು ನೀಡಲಾಗುವುದು’ ಎಂದು ತಿಳಿಸಿದರು.

ಕೃಷಿ ಇಲಾಖೆ ಉಪ ನಿರ್ದೇಶಕ ವೀರಣ್ಣ ಮಾತನಾಡಿ, ‘ಲಾಕ್‌ಡೌನ್‌ನಿಂದ ಕೃಷಿ ಹಾಗೂ ಮನರೇಗಾ ಚಟುವಟಿಕೆ ಹೆಚ್ಚಾಗಿವೆ. ಜಾಬ್‌ಕಾರ್ಡ್‌ಗೆ ಒತ್ತಡ ಹೆಚ್ಚಿದೆ. ವೆಬ್‌ಸೈಟ್‌ನಲ್ಲೂ ಸಮಸ್ಯೆಯಾಗುತ್ತಿದೆ’ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯಲ್ಲಿ ಮನರೇಗಾ ಯೋಜನೆಯಡಿ ಸಸಿ ಬೆಳೆಸಲು, ಹಳೆ ಮರಗಳ ಪುನರುಜ್ಜೀವನಕ್ಕೆ ನೀಡುತ್ತಿರುವ ಅನುದಾನ ಸೇರಿದಂತೆ, ಇಲಾಖೆಯಲ್ಲಿರುವ ಯೋಜನೆ ಬಗ್ಗೆ ಉಪ ನಿರ್ದೇಶಕಿ ಮಮತಾ ಸಭೆಗೆ ಮಾಹಿತಿ ನೀಡಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೂಚನೆಯಂತೆ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ 2 ಸಾವಿರ ಸಸಿ ನೆಡಲಾಗುತ್ತಿದೆ. ರಸ್ತೆ ಬದಿ, ಸ್ಮಶಾನ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಗಿಡ ನೆಡಲು ಉದ್ದೇಶಿಸಲಾಗಿದೆ. ಶಾಲೆ, ವಸತಿ ಶಾಲೆಗಳ ಆವರಣದಲ್ಲಿ ಹೆಚ್ಚು ಹಸಿರೀಕರಣಕ್ಕೆ ಬಿಇಒಗಳು ಒತ್ತು ನೀಡಬೇಕು’ ಎಂದು ಇಒ ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.