ಶುಕ್ರವಾರ, ಏಪ್ರಿಲ್ 3, 2020
19 °C
ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌, ನವೋದಯ ಫೌಂಡೇಷನ್‌ ಸಹಯೋಗ- ಎಸ್ಸೆಸ್ಸೆಲ್ಸಿ ಪರೀಕ್ಷಾ ಕಾರ್ಯಾಗಾರ

ಹರಿದು ಬಂದ ವಿದ್ಯಾರ್ಥಿ ಸಮೂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಿರಾತಂಕವಾಗಿ ಎದುರಿಸುವುದು ಹೇಗೆ ಎಂಬುದನ್ನು ತಿಳಿಯುವ ಕಾತರ ಒಂದೆಡೆ; ಲಿಖಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಗೆಲ್ಲಲೇಬೇಕು... ಶಾಲೆಗೆ ಕೀರ್ತಿ ತರಬೇಕು ಎಂಬ ಹುಮ್ಮಸ್ಸು ಇನ್ನೊಂದೆಡೆ.

ಆರಂಭದಿಂದ ಅಂತ್ಯದವರೆಗೂ ಅದೇ ಉತ್ಸಾಹ. ಇವರಿಗೆ ಬೆಂಬಲವಾಗಿ ನಿಂತಿದ್ದು ಶಿಕ್ಷಕ ಸಮೂಹ ಮತ್ತು ಪೋಷಕರು. ನಗರದ ಕಲಾಮಂದಿರದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ಹೆರಾಲ್ಡ್‌’ ಪತ್ರಿಕಾ ಬಳಗದಿಂದ, ಮೈಸೂರಿನ ‘ನವೋದಯ ಫೌಂಡೇಷನ್‘ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ 10ನೇ ತರಗತಿ ಎನ್‌ಸಿಇಆರ್‌ಟಿ ಪಠ್ಯಕ್ರಮ ಆಧಾರಿತ ಮುಖ್ಯ ಪರೀಕ್ಷೆ ಹಾಗೂ ಎನ್‌ಟಿಎಸ್ಇ ಪರೀಕ್ಷೆ ಕುರಿತ ಕಾರ್ಯಾಗಾರ, ಲಿಖಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯಗಳಿವು.

ಆರು ಕೌಂಟರ್‌ಗಳಲ್ಲಿ ಬೆಳಿಗ್ಗೆ 8.30ಕ್ಕೆ ಆರಂಭವಾದ ನೋಂದಣಿ 11 ಗಂಟೆವರೆಗೂ ನಡೆಯಿತು. ದೂರದ ಊರುಗಳಿಂದ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಸಂಘಟಕರ ಬಳಿ ಕಾರ್ಯಾಗಾರದಲ್ಲಿ ಭಾಗಿಯಾಗಲು ನೋಂದಣಿ ಅವಧಿ ಮುಗಿದ ಬಳಿಕವೂ ಮನವಿ ಸಲ್ಲಿಸಿದರು.

1,200ಕ್ಕೂ ಹೆಚ್ಚು ಆಸನ ಸಾಮರ್ಥ್ಯದ ಕಲಾಮಂದಿರದ ಸಭಾಂಗಣ ಕಾರ್ಯಾಗಾರ ಆರಂಭಕ್ಕೂ ಮುನ್ನವೇ ಭರ್ತಿಯಾಯಿತು. ಹೆಚ್ಚುವರಿಯಾಗಿ ಆಸನದ ವ್ಯವಸ್ಥೆ ಕಲ್ಪಿಸಲಾಯಿತು. ಅವೂ ಭರ್ತಿಯಾದವು. ಬಹುತೇಕ ಶಾಲೆಗಳ ಆಡಳಿತ ಮಂಡಳಿಗಳು ತಮ್ಮ ವಾಹನಗಳಲ್ಲೇ ವಿದ್ಯಾರ್ಥಿಗಳನ್ನು ಕರೆ ತರುವ ವ್ಯವಸ್ಥೆ ಮಾಡಿದ್ದವು. ಪೋಷಕರೂ ಮಕ್ಕಳೊಂದಿಗೆ ಬಂದಿದ್ದರು.

1,580 ವಿದ್ಯಾರ್ಥಿಗಳು ಲಿಖಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗಿಯಾದರು. ತಂಡೋಪತಂಡವಾಗಿ ಕಲಾಮಂದಿರಕ್ಕೆ ಬಂದಿದ್ದ ವಿದ್ಯಾರ್ಥಿ ಸಮೂಹ ಒಂದೆಡೆ ಕುಳಿತು ‘ಪ್ರಜಾವಾಣಿ’ ಪತ್ರಿಕೆ ಓದಿದರು. ಸ್ನೇಹಿತರು ಒಟ್ಟಾಗಿ ಗುಂಪು ಚರ್ಚೆ ನಡೆಸಿದರು. ಮೈಸೂರು ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶ, ನೆರೆಯ ಚಾಮರಾಜನಗರ, ಹಾಸನ, ಮಡಿಕೇರಿ, ಮಂಡ್ಯ ಜಿಲ್ಲೆಯ 150ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳು ನೀಡಿದ ಸೂಚನೆ, ಸಲಹೆಗಳನ್ನು ವಿದ್ಯಾರ್ಥಿ ಸಮೂಹ ತದೇಕಚಿತ್ತದಿಂದ ಆಲಿಸಿತು. ಹಲವರು ತಮ್ಮ ಬಳಿಯಿದ್ದ ನೋಟ್‌ ಪುಸ್ತಕದಲ್ಲಿ ಬರೆದುಕೊಂಡಿದ್ದು ವಿಶೇಷವಾಗಿತ್ತು. ಕಾರ್ಯಾಗಾರದ ನಡುವೆ ಸಂಘಟಕರು ವಿತರಿಸಿದ ಬಿಸ್ಕೆಟ್‌ ತಿಂದು ಹಸಿವು ನೀಗಿಸಿಕೊಂಡರು. ಮಧ್ಯಾಹ್ನ ಬಾತ್, ಮೊಸರನ್ನ, ಲಡ್ಡು ಸವಿದ ಬಳಿಕ ಲಿಖಿತ ರಸಪ್ರಶ್ನೆ ಸ್ಪರ್ಧೆಗೆ ಅಣಿಯಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು