ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆ: ಸಿಎಂಗೆ ಮನವಿ

ಮೈಸೂರು ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ
Last Updated 9 ಸೆಪ್ಟೆಂಬರ್ 2020, 2:38 IST
ಅಕ್ಷರ ಗಾತ್ರ

ಮೈಸೂರು: ಕೃಷಿ ಇಲಾಖೆಯಲ್ಲಿ ಶೇ 50ಕ್ಕೂ ಅಧಿಕ ಸಿಬ್ಬಂದಿ ಕೊರತೆಯಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಮಂಗಳವಾರ ಇಲ್ಲಿ ತಿಳಿಸಿದರು.

ಮೈಸೂರು ವಿಭಾಗೀಯ ಮಟ್ಟದ ಬೆಳೆ ಸಮೀಕ್ಷೆ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ರಾಜ್ಯವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ನೇಮಕಾತಿ ಕಷ್ಟ ಎಂಬುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಇಲಾಖೆಯು ಅಗತ್ಯ ಸೇವೆ ಪಟ್ಟಿಯಲ್ಲಿ ಬರುವುದರಿಂದ ಕೊರೊನಾ ಕಾಲದಲ್ಲೂ ಅಧಿಕಾರಿಗಳು ನಿರಂತರವಾಗಿ ಕೆಲ ಮಾಡುತ್ತಿದ್ದಾರೆ’ ಎಂದರು.

ಈ ವರ್ಷ ರಾಜ್ಯದಲ್ಲಿ 77.6 ಸೆ.ಮೀ ಮಳೆ (ಜೂನ್‌ 1ರಿಂದ ಸೆ.7) ಆಗಿದೆ. ಈ ಅವಧಿಯ ವಾಡಿಕೆ ಮಳೆ 72.1 ಸೆ.ಮೀ. ಅಂದರೆ ಶೇ 8ರಷ್ಟು ಅಧಿಕ ಮಳೆ ಆಗಿದೆ ಎಂದು ಹೇಳಿದರು.

ರಾಜ್ಯದಲ್ಲಿ 73 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 74.02 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಶೇ 10ರಷ್ಟು ಬಿತ್ತನೆ ಈ ವರ್ಷ ಅಧಿಕವಾಗಿದೆ. 3.86 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. 40 ಸಾವಿರ ಕ್ವಿಂಟಲ್‌ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 52.49 ಲಕ್ಷ ರೈತರಿಗೆ ₹4,845 ಕೋಟಿ ಬಿಡುಗಡೆಯಾಗಿದೆ. ಹಾಗೆಯೇ ಮುಖ್ಯಮಂತ್ರಿ ಕಿಸಾನ್‌ ಯೋಜನೆಯಡಿ 50.52 ಲಕ್ಷ ರೈತರಿಗೆ ₹1,010 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಇಲಾಖೆಯ ನಿರ್ದೇಶಕ ಶ್ರೀನಿವಾಸ್‌, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳ ಜಂಟಿ ನಿರ್ದೇಶಕರು, ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT