ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ನೀರು ಹರಿಸಿದರೆ ರಾಜ್ಯ ಬಂದ್: ವಾಟಾಳ್ ನಾಗರಾಜ್‌ ಎಚ್ಚರಿಕೆ

Last Updated 29 ಮೇ 2019, 11:05 IST
ಅಕ್ಷರ ಗಾತ್ರ

ಮೈಸೂರು: ‘ತಮಿಳುನಾಡಿಗೆ ನೀರು ಹರಿಸಿದರೆ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಕರ್ನಾಟಕ ಬಂದ್‌ ಮಾಡಬೇಕಾಗುವುದು’ ಕನ್ನಡ ವಾಟಾಳ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಾಟಾಳ್ ನಾಗರಾಜ್‌ ಎಚ್ಚರಿಕೆ ನೀಡಿದರು.

ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಖಂಡಿಸಿ ಅವರು ರೈಲು ನಿಲ್ದಾಣದಲ್ಲಿ ರಸ್ತೆಯಲ್ಲಿ ಮಲಗಿ ಬುಧವಾರ ಪ್ರತಿಭಟನೆ ನಡೆಸಿದರು.

‌ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ರಚನೆಯೇ ವೈಜ್ಞಾನಿಕವಾಗಿ ಆಗಿಲ್ಲ. ಪ್ರಾಧಿಕಾರವೇ ಇರಕೂಡದು. ಹೀಗಿರುವಾಗ ನೀರು ಹರಿಸಲೇಬೇಕು ಎಂದು ಆಜ್ಞೆ ಮಾಡಿದರೆ ಅದನ್ನು ಕೇಳಲಾಗದು. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಹರಿಸಲೇಕೂಡದು ಎಂದು ಅವರು ಮನವಿ ಮಾಡಿದರು.

ಅಲ್ಲದೇ, ‘ಜಿಂದಾಲ್‌’ ಸಂಸ್ಥೆಗೆ ರಾಜ್ಯ ಸರ್ಕಾರ ರೈತರ ಭೂಮಿ ನೀಡುತ್ತಿರುವುದು ಸರಿಯಲ್ಲ. ರೈತರ ಭೂಮಿಯನ್ನು ರಿಯಲ್‌ ಎಸ್ಟೇಟ್‌ಗೆ ಬಳಸಿಕೊಂಡರೆ ಹೇಗೆ? 3,600 ಎಕರೆ ಭೂಮಿಯನ್ನು ಕಡಿಮೆ ದರಕ್ಕೆ ನೀಡುವ ಹುನ್ನಾರ ನಡೆದಿದೆ. ಇದರಿಂದ ರಾಜ್ಯಕ್ಕೆ ಅಪಾರ ನಷ್ಟವಾಗುತ್ತಿದೆ ಎಂದು ಕಿಡಿಕಾರಿದರು.

ಅಂತೆಯೇ, ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಬಸವಣ್ಣ ಅವರ 500 ಅಡಿ ಎತ್ತರದ ಪ್ರತಿಮೆಯನ್ನು ರಾಜ್ಯದ ಯಾವುದಾದರೂ ಒಂದು ಭಾಗದಲ್ಲಿ ಸ್ಥಾಪಿಸಬೇಕು. ವಿದ್ಯುನ್ಮಾನ ಮತಯಂತ್ರ ದುರುಪಯೋಗ ಆರೋಪದ ಬಗ್ಗೆ ತನಿಖೆಯಾಗಬೇಕು. ಪಕ್ಷಾಂತರ ವಿರೋಧಿ ಕಾಯ್ದೆಗೆ ತಿದ್ದುಪಡಿಯಾಗಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT