ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಕ್ಷಿತ ಸಮುದಾಯವನ್ನು ನಿರ್ಲಕ್ಷಿಸುತ್ತಿರುವ ಬಿಜೆಪಿ ಸರ್ಕಾರ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ
Last Updated 17 ನವೆಂಬರ್ 2019, 14:03 IST
ಅಕ್ಷರ ಗಾತ್ರ

ಮೈಸೂರು: ರಾಜ್ಯ ಸರ್ಕಾರವು ಅಲಕ್ಷಿತ ಸಮುದಾಯಗಳನ್ನು ಸಂಪೂರ್ಣ ನಿರ್ಲಕ್ಷಿಸಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಲ್ಲಿ ಆರೋಪಿಸಿದರು.

ಶಿವಯೋಗಿ ಸಿದ್ಧರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿಯು ಲಲಿತಾದ್ರಿಪುರ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿನಿಲಯದ ಕಟ್ಟಡಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಜನತೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವವರ ಕೈಗೆ ಆಡಳಿತ ನೀಡಿ ಈಗ ಸಾಮಾಜಿಕ ನ್ಯಾಯ ಕೇಳಿದರೆ ಸಿಗುವುದೇ? ಎಸ್ಸಿ, ಎಸ್ಟಿಗಳಿಗೆ ಕಾಮಗಾರಿಗಳ ಗುತ್ತಿಗೆ ನೀಡಬೇಕು ಎಂಬ ಕಾನೂನನ್ನು ರೂಪಿಸಿದೆವು. ಆದರೆ, ಬಳಿಕ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಈ ಕುರಿತು ಅಧಿಕೃತ ಆದೇಶ ಹೊರಡಿಸಲು ಆಸಕ್ತಿ ತೋರಿಸಲಿಲ್ಲ. ಎಸ್ಟಿ, ಎಸ್ಟಿ ಸಮುದಾಯಗಳ ಬಗ್ಗೆ ಈಗಿನ ಸರ್ಕಾರಕ್ಕೆ ಒಲವಿಲ್ಲ ಎಂದರು.

ಮೊದಲು ಶೋಷಿತ ಸಮುದಾಯದ ಅಭಿವೃದ್ಧಿಗೆ ಮೋದಿ ಗಮನ ಹರಿಸಬೇಕು. ಕಾಶ್ಮೀರ, ರಾಮಮಂದಿರ ಎಂದು ಹೇಳಿದರೆ ಜನರ ಹೊಟ್ಟೆ ತುಂಬುವುದಿಲ್ಲ. ಮನ್‌ಕೀ ಬಾತ್‌ ಹೆಸರಿನಲ್ಲಿ ಭಾಷಣ ಮಾಡುವುದಕ್ಕೆ ಅವರು ಸೀಮಿತವಾಗದೇ ಇರಲಿ ಎಂದು ಛಾಟಿ ಬೀಸಿದರು.

ಕೈಹಿಡಿಯದ ಅಲಕ್ಷಿತ ಸಮುದಾಯ: ಬಾಗಲಕೋಟೆಯ ಮಹಾಸಂಸ್ಥಾನ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಶೋಷಿತ ಸಮುದಾಯದ ಅಭಿವೃದ್ಧಿಗೆ ಸಿದ್ದರಾಮಯ್ಯ ಸಾಕಷ್ಟು ಕಾಣಿಕೆ ನೀಡಿದರು. ಆದರೆ, ಆ ಸಮುದಾಯಗಳು ಅವರ ಕೈ ಹಿಡಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

12ನೇ ಶತಮಾನದಲ್ಲಿ ಎಲ್ಲರನ್ನೂ ಎದುರು ಹಾಕಿಕೊಂಡು ಬಸವಣ್ಣ ಶೋಷಿತರ ಕೈ ಹಿಡಿದಿದ್ದ ಹಾಗೆ ಸಿದ್ದರಾಮಯ್ಯ ಸಹ ಅದೇ ಹಾದಿ ತುಳಿದಿದ್ದರು ಎಂದು ಸ್ಮರಿಸಿದರು.

ಶಿವಯೋಗಿ ಸಿದ್ದರಾಮೇಶ್ವರ ಭೋವಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ನಾಗರಾಜು, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಂ, ಕಾಂಗ್ರೆಸ್‌ ಮುಖಂಡರಾದ ಎಂ.ಕೆ.ಸೋಮಶೇಖರ್, ಕೆ.ಮರಿಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT