ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಪಾಲಾಗುತ್ತಿರುವ ತಾಯಂದಿರ ಪ್ರಕರಣ ಏರಿಕೆ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಕಳವಳ
Last Updated 8 ಡಿಸೆಂಬರ್ 2020, 5:58 IST
ಅಕ್ಷರ ಗಾತ್ರ

ಮೈಸೂರು: ಆಸ್ತಿಯನ್ನೆಲ್ಲ ಮಕ್ಕಳು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ತಾಯಂದಿರನ್ನು ಬೀದಿಪಾಲು ಮಾಡುತ್ತಿರುವ ಪ್ರಕರಣಗಳೇ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್.ಪ್ರಮೀಳಾ ನಾಯ್ಡು ಕಳವಳ ವ್ಯಕ್ತಪಡಿಸಿದರು.

ವಿಶೇಷವಾಗಿ ಮೈಸೂರು ಭಾಗದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ನೀಡದಿರುವ ಪ್ರಕರಣಗಳೂ ಸಾಕಷ್ಟು ಸಂಖ್ಯೆಯಲ್ಲಿವೆ ಎಂದು ಇಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಮೈಸೂರು ಭಾಗದಲ್ಲಿ 224 ದೂರುಗಳು ದಾಖಲಾಗಿವೆ. ಇವುಗಳಲ್ಲಿ ಕೌಟುಂಬಿಕ ದೌರ್ಜನ್ಯ ಹಾಗೂ ರಕ್ಷಣೆಗೆ ಕೋರಿರುವ ಪ್ರಕರಣಗಳೇ ಹೆಚ್ಚಿವೆ ಎಂದರು.

ವಿಶ್ವವಿದ್ಯಾಲಯ ಹಾಗೂ ಗಾರ್ಮೆಂಟ್ಸ್‌ಗಳಲ್ಲಿ ಕೆಲಸದ ಸಮಯದಲ್ಲಿ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾದ 58 ಪ್ರಕರಣಗಳೂ ದಾಖಲಾಗಿವೆ. ಇವೆಲ್ಲವೂ ತನಿಖಾ ಹಂತದಲ್ಲಿವೆ ಎಂದು ಹೇಳಿದರು.‌

ಕೌನ್ಸಿಲಿಂಗ್‌ಗೆ ಹೆಚ್ಚು ಆದ್ಯತೆ: ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನು ಹೋರಾಟಕ್ಕಿಂತ ಕೌನ್ಸಿಲಿಂಗ್‌ಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ‍ಪತಿ, ಪತ್ನಿಯರು ಒಟ್ಟಿಗೆ ಜೀವಿಸುವುದು ಅವರ ಮಕ್ಕಳ ದೃಷ್ಟಿಯಿಂದ ತುಂಬಾ ಮಹತ್ವದ್ದು. ಹಾಗಾಗಿ, ಸಾಧ್ಯವಾದಷ್ಟು ಇಂತಹ ಪ್ರಕರಣಗಳನ್ನು ವೈಜ್ಞಾನಿಕವಾದ ಕೌನ್ಸಿಲಿಂಗ್‌ ಮೂಲಕವೇ ಇತ್ಯರ್ಥ ಮಾಡಲಾಗುತ್ತಿದೆ ಎಂದರು.

ಮಹಿಳೆ ಆರ್ಥಿಕ ಸ್ವಾವಲಂಬಿಯಾಗಬೇಕು: ಮಹಿಳೆಯರು ಮೊದಲು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಆಗ ಬಹಳಷ್ಟು ದೌರ್ಜನ್ಯ ಪ್ರಕರಣಗಳನ್ನು ನಿಭಾಯಿಸುವ ಶಕ್ತಿ ಬರುತ್ತದೆ ಎಂದು ಹೇಳಿದರು.

ಮಹಿಳೆಯೊಬ್ಬರು ಅಹವಾಲು ಸಲ್ಲಿಸುವ ವೇಳೆ ವಿದ್ಯಾರ್ಹತೆ ಕೇಳಿದ ಇವರು, ನಂತರ ಉದ್ಯೋಗಕ್ಕೆ ಏಕೆ ಹೋಗುತ್ತಿಲ್ಲ ಎಂದು ಪ್ರಶ್ನಿಸಿದರು. ಮೊದಲು ಉದ್ಯೋಗಕ್ಕೆ ಹೋಗುವುದನ್ನು ಆರಂಭಿಸಿ ಎಂದು ಕಿವಿಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾ, ಜಿಲ್ಲಾ ಯೋಜನಾಧಿಕಾರಿ ಸುಶೀಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT