ಸೋಮವಾರ, ಮಾರ್ಚ್ 1, 2021
17 °C
ಸಾಮಾಜಿಕ–ಆರ್ಥಿಕ ಶಕ್ತಿ ಇಂದಿಗೂ ಸಿಕ್ಕಿಲ್ಲ: ಸಿದ್ದರಾಮಯ್ಯ ಅಭಿಮತ

ಅಸ್ಪೃಶ್ಯತೆ ಈಗಲೂ ಜೀವಂತವಿದೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಅಸ್ಪೃಶ್ಯತೆ ಇಂದಿಗೂ ಜೀವಂತವಿದೆ. ಜಾತಿ ಎಂಬುದು ಎಲ್ಲೆಡೆ ಆಳವಾಗಿ ಬೇರೂರಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಕನಕ ನೌಕರರ ಸಂಘ ಭಾನುವಾರ ಆಯೋಜಿಸಿದ್ದ ಕನಕದಾಸರ 533ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ವಿಶ್ವವಿದ್ಯಾಲಯಗಳಲ್ಲಿ ಓದಿದ ಬಹುತೇಕರೇ ಜಾತಿವಾದಿಗಳಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಹಲವು ಹಕ್ಕುಗಳು ದೊರೆತಿವೆ. ಆದರೆ ಇಂದಿಗೂ ಸಾಮಾಜಿಕ, ಆರ್ಥಿಕ ಶಕ್ತಿ ಎಲ್ಲರಿಗೂ ಸಿಕ್ಕಿಲ್ಲ. ಸಮ ಸಮಾಜ ನಿರ್ಮಾಣವಾಗದೇ ಮನುಷ್ಯತ್ವ ನಿರ್ಮಾಣವಾಗುವುದು ಸಾಧ್ಯವಿಲ್ಲದಾಗಿದೆ’ ಎಂದು ಅವರು ಹೇಳಿದರು.

‘ಹಲವು ಶತಮಾನಗಳಿಂದಲೂ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸಮಾಜದಲ್ಲಿ ಸಾಮಾಜಿಕ ಸುಧಾರಣೆ ನಡೆದಿದೆ. ಆದರೆ ನಮ್ಮ ಹೃದಯದೊಳಗಿರುವ ಗುಲಾಮಗಿರಿಯ ಸಂಕೇತವನ್ನು ನಾವು ಎಲ್ಲಿಯವರೆಗೂ ಕಿತ್ತು ಹಾಕುವುದಿಲ್ಲವೋ, ಅಲ್ಲಿಯ ತನಕವೂ ಜಾತಿ ವ್ಯವಸ್ಥೆ ಹೀಗೆಯೇ ಮುಂದುವರಿಯಲಿದೆ’ ಎಂದರು.

‘ವಿಶ್ವವಿದ್ಯಾನಿಲಯದ ಆವರಣದಲ್ಲಿ ಕನಕರ ಮೂರ್ತಿಯೊಂದನ್ನು ಸ್ಥಾಪಿಸಿ. ಯಾರ‍್ಯಾರದ್ದೋ ಹಾಕಿದ್ದೀರಿ. ಸರ್ಕಾರದ ಅನುಮತಿ ಬೇಕಿಲ್ಲ. ಸಿಂಡಿಕೇಟ್‌ ಸಭೆಯಲ್ಲಿ ನಿರ್ಣಯಿಸಿ. ನಿಮ್ಮ ಉನ್ನತ ಶಿಕ್ಷಣ ಸಚಿವ ಅಶ್ವಥನಾರಾಯಣಗೆ ನಾನೇ ಹೇಳುವೆ. ಕನಕರೊಬ್ಬರದ್ದೇ ಅಲ್ಲ. ಸಮಾಜ ಸುಧಾರಕರ ಮೂರ್ತಿಗಳನ್ನು ಧೈರ್ಯದಿಂದ ನಿರ್ಮಿಸಿ’ ಎಂದು ಸಭೆಯಲ್ಲಿದ್ದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ಗೆ ಸಿದ್ದರಾಮಯ್ಯ ಹೇಳಿದರು.

ಚಿಂತಕ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ‘ಪ್ರಸ್ತುತ ವ್ಯವಸ್ಥೆಯಲ್ಲಿ ಗಂಡೆದೆಯ ಗುಂಡಿಗೆ ಯಾರೊಬ್ಬರಿಗೂ ಇಲ್ಲ. ಆದರೆ ಸಿದ್ದರಾಮಯ್ಯ ಮಾತ್ರ ಎಲ್ಲವನ್ನೂ ನೇರವಾಗಿ ಹೇಳುತ್ತಾರೆ’ ಎಂದರು.

ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಮಾತನಾಡಿ, ‘ನಮ್ಮ ರಾಮ ಕುಟುಂಬ ರಾಮ. ಅವನನ್ನೇ ಹೈಜಾಕ್‌ ಮಾಡಿರುವ ವೈದಿಕ ಶಕ್ತಿಗಳು ಜನಪರವಿರುವ ಸಿದ್ದರಾಮಯ್ಯ ಅವರನ್ನು ಹೈಜಾಕ್‌ ಮಾಡದಂತೆ ಕಾಪಾಡಿಕೊಳ್ಳಬೇಕಿದೆ. ಇದೀಗ ನಮಗೆ ಸಾಮಾಜಿಕ ವೇದಿಕೆಗಳೇ ಸಿಗ್ತಿಲ್ಲ. ಎಲ್ಲೆಡೆಯೂ ಬಯಲು ಜೈಲೇ ಕಂಡು ಬರುತ್ತಿವೆ. ಒಂದು ಮಾತು ಹೇಳುತ್ತಿದ್ದಂತೆ, ನಮ್ಮ ಹುಡುಗರಿಂದಲೇ ವೈದಿಕ ಶಕ್ತಿಗಳು ಕಲ್ಲು ಎಸೆಸುವ ಭಯದ ವಾತಾವರಣ ನಿರ್ಮಾಣವಾಗಿದೆ’ ಎಂದು ಹೇಳಿದರು.

ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಮೈಸೂರು ವಿ.ವಿ. ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಮಾತನಾಡಿದರು. ಪ್ರೊ.ಸಿ.ನಾಗಣ್ಣ ಉಪನ್ಯಾಸ ನೀಡಿದರು. ರಾಜ್ಯ ಕುರುಬರ ಸಂಘದ ಪ್ರಭಾರ ಅಧ್ಯಕ್ಷ ಸುಬ್ರಹ್ಮಣ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರಿಗೌಡ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಮಾಜದ ಸಾಧಕರು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು