ಬುಧವಾರ, ಆಗಸ್ಟ್ 10, 2022
20 °C
ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘದ ಅಧ್ಯಕ್ಷ

ನಾಟಕ ನಿಲ್ಲಿಸಿ, ಜನರ ಸಂಕಷ್ಟಕ್ಕೆ ಸ್ಪಂದಿಸಿ: ಬಡಗಲಪುರ ನಾಗೇಂದ್ರ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ರಾಜ್ಯದ ಸಚಿವರು ಮತ್ತು ಶಾಸಕರು ನಾಟಕವಾಡುವುದನ್ನು ನಿಲ್ಲಿಸಿ, ಜನರ ಕಷ್ಟಗಳಿಗೆ ಸ್ಪಂದಿಸಲಿ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

‘ಕೋವಿಡ್‌ನ ಸಂಕಷ್ಟಕ್ಕೆ ಸಿಲುಕಿ ರಾಜ್ಯದ ಜನರು ನಲುಗಿದ್ದಾರೆ. ಆದರೆ ಆಡಳಿತ ಪಕ್ಷದಲ್ಲಿ ಎರಡು ಬಣಗಳ ನಡುವಿನ ಕಚ್ಚಾಟ ತಾರಕಕ್ಕೇರಿದೆ. ಇಲ್ಲಿನ ಜನಪ್ರತಿನಿಧಿಗಳು ಮಾನ ಮರ್ಯಾದೆ
ಯಿಲ್ಲದಂತೆ ವರ್ತಿಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ನಾಟಕ ನಿಲ್ಲಲಿ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

‘ಕೋವಿಡ್ ನಿರ್ವಹಣೆಯಲ್ಲಿ ತೊಡಗಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ’ ಎಂದು ಹೈಕಮಾಂಡ್‌ ಎಲ್ಲ ಸಚಿವರ, ಶಾಸಕರ ಬಾಯಿ ಮುಚ್ಚಿಸಬೇಕಿತ್ತು. ಕೇಂದ್ರದ ಬಿಜೆಪಿ ಮುಖಂಡರು ಅಂತಹ ಧೈರ್ಯ ತೋರುವ ಬದಲು ಶಾಸಕರು, ಸಚಿವರ ಜತೆ ಚರ್ಚೆಗೆ ಕುಳಿತಿದ್ದಾರೆ’ ಎಂದು ಟೀಕಿಸಿದರು.

ರೈತರಿಗೆ ₹ 1 ಲಕ್ಷ ಕೋಟಿ ನಷ್ಟ: ಕೋವಿಡ್‌ ಲಾಕ್‌ಡೌನ್‌ ಕಾರಣ ಕಳೆದ ಒಂದೂವರೆ ತಿಂಗಳಲ್ಲಿ ರೈತರಿಗೆ ₹ 1 ಲಕ್ಷ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಪರಿಹಾರ ಕೊಡುವುದು ದೂರದ ಮಾತೇ ಸರಿ, ರೈತರಿಗೆ ಎಷ್ಟು ನಷ್ಟ ಉಂಟಾಗಿದೆ ಎಂಬುದನ್ನು ಅಂದಾಜಿಸಲು ಸಮಿತಿ ರಚನೆ ಮಾಡಲಿ ಎಂದು ಒತ್ತಾಯಿಸಿದರು.

ಚಾಮರಾಜನಗರ ದುರಂತದಲ್ಲಿ ಸತ್ತವರಿಗೆ ₹ 2 ಲಕ್ಷ ಮಾತ್ರ ಪರಿಹಾರ ನೀಡಿದ್ದು, ಕನಿಷ್ಠ ₹ 10 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಮೂರನೇ ಅಲೆ ಎದುರಿಸಲು ಸಿದ್ಧತೆ ನಡೆಸಲಿ: ದೇಶದಲ್ಲಿ ಎರಡನೇ ಅಲೆ ವ್ಯಾಪಕವಾಗಿ ಹಬ್ಬಲು ಸರ್ಕಾರದ ಉಡಾಫೆಯ ವರ್ತನೆ, ನಿರ್ಲಕ್ಷ್ಯತನ ಕಾರಣ. ಕೋವಿಡ್‌ ಸಮಯದಲ್ಲೇ ಚುನಾವಣೆ ನಡೆಸಿದ್ದು ದೊಡ್ಡ ತಪ್ಪು. ಮೂರನೇ ಅಲೆ ಬರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಇದೀಗ ಉತ್ತರ ಪ್ರದೇಶದ ಚುನಾವಣೆಗೆ ಸಿದ್ಧತೆ ನಡೆಸತೊಡಗಿದೆ. ಚುನಾವಣೆಗಿಂತಲೂ ಮೂರನೇ ಅಲೆ ತಡೆಗಟ್ಟಲು ಸಜ್ಜಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಹೊಸಕೋಟೆ ಬಸವರಾಜು, ಪ್ರಸನ್ನ ಗೌಡ, ಪುನೀತ್‌ ಪಾಲ್ಗೊಂಡಿದ್ದರು.

ಪ್ರತಿಭಟನೆ ಇಂದು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜೂನ್‌ 17 ರಂದು ರಾಜ್ಯದಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ತಾಲ್ಲೂಕು ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅದರ ಅಂಗವಾಗಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಳಿಗ್ಗೆ 11 ರಿಂದ 11.30ರ ವರೆಗೆ ಧರಣಿ ನಡೆಯಲಿದೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ಮೈಸೂರು ಜಿಲ್ಲೆಯ ರೈತರಿಗೆ ಸಂಬಂಧಿಸಿದ 13 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಬೇಡಿಕೆಗಳು ಈಡೇರದಿದ್ದರೆ, ಮುಂದಿನ ದಿನಗಳಲ್ಲಿ ‘ವಿಧಾನಸೌಧ ಬಿಟ್ಟು ತೊಲಗಿ’ ಎಂಬ ಘೋಷಣೆಯೊಂದಿಗೆ ರೈತ ಸಂಘ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.