ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿ, ಅಲಿಕಲ್ಲು ಮಳೆ: 75 ಎಕರೆ ಬೆಳೆ ನಾಶ

ಹಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿ
Last Updated 8 ಜೂನ್ 2019, 20:21 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಎಲಚಗೆರೆ, ಶಿರಮಳ್ಳಿ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಬಾರಿ ಬಿರುಗಾಳಿ, ಅಲಿಕಲ್ಲು ಮಳೆಗೆ ಸುಮಾರು 75 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ, ಟೊಮೆಟೊ, ಈರುಳ್ಳಿ ಹಾಗೂ ಬಿನ್ಸ್ ಬೆಳೆಗಳು ನಾಶವಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಕೃಷ್ಣಾಪುರ, ಸಿದ್ದಯ್ಯನ ಹುಂಡಿ ಗ್ರಾಮಗಳ 45 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ, ಸೂರ್ಯಕಾಂತಿ ಬೆಳೆ ನಾಶವಾಗಿದೆ. ವಳಗೆರೆ ಗ್ರಾಮದ 35 ಮನೆಗಳಿಗೆ ಹಾನಿಯಾಗಿದ್ದು, ಬಿರುಗಾಳಿಗೆ ಮನೆಯ ಚಾವಣಿಯ ಹೆಂಚು, ಶೀಟುಗಳು ಹಾರಿಹೋಗಿವೆ. ಹುಲ್ಲಹಳ್ಳಿ ಗ್ರಾಮದ ನಾಯಕರ ಬೀದಿಯಲ್ಲಿ ಮನೆಯ ಮೇಲೆ ಮರವೊಂದು ಬಿದ್ದು ಹಾನಿಯಾಗಿದೆ.

ಎಲಚಗೆರೆ ಗ್ರಾಮದ ಸಿದ್ದಯ್ಯ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಭಾರಿ ಬಿರುಗಾಳಿಯೊಂದಿಗೆ ಆರಂಭವಾದ ಮಳೆಯ ಜೊತೆಗೆ ಅರ್ಧ ಗಂಟೆಗೆ ಹೆಚ್ಚು ಕಾಲ ಅಂಗೈ ಅಗಲ ಗಾತ್ರದ ಅಲಿಕಲ್ಲು ಸುರಿಯಿತು. ಗಾಳಿಗೆ ಚಾವಣಿಯ ಹೆಂಚು, ಶೀಟುಗಳು ಹಾರಿ ಹೋಗಿವೆ. ಗ್ರಾಮದಲ್ಲಿ ಸುಮಾರು 60 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಟಾವಿಗೆ ನೇಂದ್ರ ಬಾಳೆ ಆಲಿಕಲ್ಲು ಮಳೆಗೆ ಸಂಪೂರ್ಣ ನಾಶವಾಗಿದೆ’ ಎಂದು ಸಂಕಟ ಹೇಳಿಕೊಂಡರು.

ಹಾನಿಗೊಳಗಾಗಿದ್ದ ಗ್ರಾಮಗಳಿಗೆ ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಶನಿವಾರ ಕಂದಾಯ ಅಧಿಕಾರಿಗಳು, ಕೃಷಿ ಇಲಾಖೆ ಉಪ ನಿರ್ದೇಶಕ ದೀಪಕ್, ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ತಹಶೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿರುಗಾಳಿ ಮಳೆಯಿಂದ ಎಲಚಗೆರೆ, ಶಿರಮಳ್ಳಿ ಭಾಗದ ತೋಟಗಾರಿಕೆ ಬೆಳೆಗಳು ಮಳೆಯಿಂದ ಸಂಪೂರ್ಣ ನಾಶವಾಗಿವೆ. ಜಿ.ಪಂ. ಅಧಿಕಾರಿಗಳು ಭಾನುವಾರ ಮಳೆಯಿಂದ ಹಾನಿಯಾದ ತೋಟ, ಜಮೀನು, ಮನೆಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಮಾಡಲಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಕೃತಿ ವಿಕೋಪದಿಂದ ನಷ್ಟಕ್ಕೆ ಈಡಾದ ಗ್ರಾಮಸ್ಥರಿಗೆ ಶೀಘ್ರವಾಗಿ ಪರಿಹಾರ ಧನ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT