ಗುರುವಾರ , ನವೆಂಬರ್ 21, 2019
20 °C
ನ.25ರೊಳಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವ

ಮೈಸೂರು ತ್ಯಾಜ್ಯ ವಿಲೇವಾರಿ; ಸಮಿತಿ ರಚಿಸಿದ ಸಚಿವ ಸೋಮಣ್ಣ

Published:
Updated:

ಮೈಸೂರು: ನಗರದಲ್ಲಿನ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ತಾರ್ಕಿಕವಾಗಿ ಅಂತ್ಯಗೊಳಿಸಲು ಜಿಲ್ಲಾಧಿಕಾರಿ, ಮೈಸೂರಿನ ಶಾಸಕರು, ಸಂಸದರು, ಮೇಯರ್, ಆಯುಕ್ತರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಜೆ.ಪಿ.ನಗರದಲ್ಲಿನ ಕಸ ವಿಲೇವಾರಿ ಘಟಕ ಸೂಯೇಜ್ ಫಾರಂಗೆ ಶನಿವಾರ ಭೇಟಿ ನೀಡಿದ್ದ ಸಚಿವರು, ಸ್ಥಳೀಯ ನಿವಾಸಿಗಳ ಅಹವಾಲು ಆಲಿಸುವ ಜತೆ, ಘಟಕದಲ್ಲೊಂದು ಸುತ್ತು ಸಂಚರಿಸಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಈ ಸಮಿತಿ ವಿವಿಧೆಡೆ ಅಧ್ಯಯನ ನಡೆಸಿ, ನ.25ರೊಳಗೆ ತಾತ್ಕಾಲಿಕ, ಶಾಶ್ವತ ಪರಿಹಾರಕ್ಕೆ ಸೂಕ್ತ ವರದಿ ನೀಡಬೇಕು ಎಂದು ಸೂಚಿಸಿದರು.

‘ಬೇರೆಡೆ ಯಾವ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ ಎಂಬುದರ ಕುರಿತು ಸಮಿತಿ ಅಧ್ಯಯನ ನಡೆಸಬೇಕು. ಹಣಕಾಸಿನ ಅಡ್ಡಿಯಿಲ್ಲ. ಮುಖ್ಯಮಂತ್ರಿಯ ಕೈ–ಕಾಲು ಹಿಡಿದು ನಾನು ಅನುದಾನ ತರುವೆ. ಈ ವರದಿಯಲ್ಲೇ ನಗರದ ತ್ಯಾಜ್ಯ, ಯುಜಿಡಿ, ಒಳಚರಂಡಿ ಎಲ್ಲವನ್ನೂ ಸೇರಿಸಿ ನೀಲನಕ್ಷೆ ಸಿದ್ಧಪಡಿಸಿ. ಕೆಸರೆ, ರಾಯನಕೆರೆ ಬಳಿ ನೂತನವಾಗಿ ಘಟಕ ಆರಂಭಿಸಲು ಕ್ರಮ ಕೈಗೊಳ್ಳಿ’ ಎಂದು ಆದೇಶಿಸಿದರು.

ಸಚಿವ ಸೋಮಣ್ಣ ಮಾತನಾಡುವಾಗ ಮಧ್ಯಪ್ರವೇಶಿಸಿ ಕಸದ ಸಮಸ್ಯೆ ಸೇರಿದಂತೆ ಇನ್ನಿತರೆ ವಿಷಯ ಪ್ರಸ್ತಾಪಿಸಿದ ಸ್ಥಳೀಯರೊಬ್ಬರ ಮೇಲೆ ಹರಿಹಾಯ್ದರು. ‘ಭಾವನಾತ್ಮಕತೆಯ ಮಾತುಗಳಿಂದ ಸಮಸ್ಯೆ ಬಗೆಹರಿಯಲ್ಲ. ಎಲ್ಲ ಪಕ್ಷಗಳ ಮಾಸ್ಟರ್ ನಾನಿದ್ದೇನೆ. ಮೊದಲು ಈ ಗಬ್ಬುನಾತನಾ ಸರಿ ಮಾಡೋಣ ಸುಮ್ನಿರೋ, ನಿಮ್ ಮನೆ ಕಾಯೋಗ’ ಎಂದು ಸಚಿವರು ಕಿಡಿಕಾರಿದರು.

‘ಇದು ಮೈಸೂರಿಗೆ ಶೋಭೆ ತರುವ ವಿಚಾರವಲ್ಲ. ಗೌರವದ ಕೆಲಸವೂ ಅಲ್ಲ. ನೋಡಿ ಜಿಲ್ಲಾಧಿಕಾರಿಗಳೇ ಇದು ನನ್ನ ಆದೇಶವಲ್ಲ. ಮನವಿ. ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮೊದಲು ಈ ಅವ್ಯವಸ್ಥೆ ಸರಿಪಡಿಸಿ. ಈ ಭಾಗದ ಜನ ನೆಮ್ಮದಿಯಿಂದ ಜೀವನ ಮಾಡುವಂಥ ವಾತಾವರಣ ನಿರ್ಮಿಸಿ’ ಎಂದು ಸೋಮಣ್ಣ ಹೇಳಿದರು.

ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳಾದ ಡಾ.ನಾಗರಾಜು, ಡಾ.ಜಯಂತ್ ಅವರನ್ನು ಜನರ ಮುಂಭಾಗ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರು. ಎಲ್ಲವನ್ನೂ ಹಣದಿಂದ ಮಾಡಲಾಗಲ್ಲ. ನಿಮ್ಮ ಇಚ್ಚಾಶಕ್ತಿ ಕೊರತೆಯಿಂದಲೇ ಸಮಸ್ಯೆ ಉಲ್ಭಣಿಸಿದೆ ಎಂದು ಹರಿಹಾಯ್ದರು. ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸುಳ್ಳು ಹೇಳಿಕೊಂಡು ಹೊಟ್ಟೆ ಬೆಳೆಸಿಕೊಂಡರೆ ಪ್ರಯೋಜನವಾಗಲ್ಲ. ಇನ್ನಾದರೂ ಮೋಸ ಮಾಡುವುದನ್ನು ಬಿಡಿ. ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ. ವಾರ್ಡ್‌ಗಳಲ್ಲೇ ಕಸ ವಿಂಗಡಿಸಿ. ವಿಲೇವಾರಿ ಘಟಕಕ್ಕೆ ಪ್ಲಾಸ್ಟಿಕ್ ಬರುವುದನ್ನು ತಪ್ಪಿಸಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಂಸದ ಪ್ರತಾಪಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫಿ ಅಹಮದ್, ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಸೇರಿದಂತೆ ಅಧಿಕಾರಿಗಳು, ಬಿಜೆಪಿ ಮುಖಂಡರಿದ್ದರು.

ರೇಷ್ಮೆ ನೇಯ್ಗೆ ಕಾರ್ಖಾನೆಗೆ ಕಾಯಕಲ್ಪ

‘ರೇಷ್ಮೆ ನೇಯ್ಗೆ ಕಾರ್ಖಾನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಚರ್ಚಿಸಿ ಕಾಯಕಲ್ಪ ನೀಡಲಾಗುವುದು’ ಎಂದು ರೇಷ್ಮೆ ಸಚಿವ ವಿ.ಸೋಮಣ್ಣ ತಿಳಿಸಿದರು.

ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ‘ಸರ್‌ ಎಂ.ವಿಶ್ವೇಶ್ವರಯ್ಯ ಸ್ಥಾಪಿಸಿದ ಕಾರ್ಖಾನೆಯಿದು. ಹಳೆಯ ಯಂತ್ರಗಳಿವೆ. ಕಾರ್ಖಾನೆ ಮೇಲ್ದರ್ಜೆಗೇರಿಸಬೇಕಿದೆ. ಮೈಸೂರು ಸಿಲ್ಕ್‌ ಸೀರೆಗೆ ಸಾಕಷ್ಟು ಬೇಡಿಕೆಯಿದೆ. ನಮ್ಮಿಂದ ಪೂರೈಸಲಾಗುತ್ತಿಲ್ಲ. ಈ ಬೇಡಿಕೆ ಈಡೇರಿಕೆಗಾಗಿ ಕಾರ್ಖಾನೆ ವಿಸ್ತರಿಸಲಾಗುತ್ತಿದೆ’ ಎಂದು ಹೇಳಿದರು.

ಪೊಲೀಸ್ ಕಮೀಷನರ್ ಕಚೇರಿ ಉದ್ಘಾಟನೆ

₹ 16 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪೊಲೀಸ್ ಕಮೀಷನರ್ ಕಚೇರಿಯನ್ನು ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟಿಸಲಾಗುವುದು ಎಂದು ಸೋಮಣ್ಣ ಹೇಳಿದರು.

ಈ ಕಟ್ಟಡಕ್ಕೆ ಸಂಬಂಧಿಸಿದಂತೆ ಕೃಷ್ಣ ಎಂಬುವವರು ನ್ಯಾಯಾಲಯದ ಮೊರೆ ಹೋಗಿದ್ದರು. ಅವರೊಟ್ಟಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದರು.

ಖಾತೆ ಹಂಚಿಕೆಗೆ ಸೋಮಣ್ಣ ಸೂಚನೆ

ನಗರದ ರಿಂಗ್ ರೋಡ್ ವ್ಯಾಪ್ತಿಯ ಮುಡಾ ಬಡಾವಣೆ ಹಾಗೂ ಖಾಸಗಿ ಬಡಾವಣೆಯ ನಿವೇಶನಗಳಿಗೆ, ಮನೆಗಳಿಗೆ ಶೀಘ್ರವಾಗಿ ಖಾತೆ ಮಾಡಿಕೊಡಬೇಕು ಎಂದು ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ರಿಂಗ್ ರೋಡ್ ವ್ಯಾಪ್ತಿಯ ಬಡಾವಣೆಗಳ ಖಾತೆ ಸಮಸ್ಯೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಪಾಲಿಕೆಯ ಕಂದಾಯ ಇಲಾಖೆ ಯಾವುದೇ ದಬ್ಬಾಳಿಕೆ ಮಾಡದೆ ಮಾನವೀಯತೆಯಿಂದ ಖಾತೆ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ, ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಮುಡಾ ಆಯುಕ್ತರಾದ ಕಾಂತರಾಜು ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)