ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸೋಮವಾರ ಮತ್ತು ಗುರುವಾರ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ

ಸೋಮವಾರ–ಗುರುವಾರವಷ್ಟೇ (ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ) ಅಗತ್ಯ ಸೇವೆಗಳ ವಹಿವಾಟಿಗೆ ಅವಕಾಶ
Last Updated 27 ಮೇ 2021, 13:55 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ವೈರಸ್‌ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲಿಕ್ಕಾಗಿ ಜಿಲ್ಲಾಡಳಿತ ಅಂತಿಮವಾಗಿ ಕಠಿಣ ಲಾಕ್‌ಡೌನ್‌ ಮೊರೆಯೊಕ್ಕಿದೆ.

ಮೇ 29ರ ಶನಿವಾರದಿಂದ ಜೂನ್‌ 7ರವರೆಗೂ ಈ ಕಠಿಣ ಲಾಕ್‌ಡೌನ್‌ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಯಾವೊಂದು ಚಟುವಟಿಕೆಗೆ ಅವಕಾಶ ಇರಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗುರುವಾರ ಫೇಸ್‌ಬುಕ್‌ ಲೈವ್‌ನಲ್ಲಿ ಪ್ರಕಟಿಸಿದರು.

ಕಠಿಣ ಲಾಕ್‌ಡೌನ್‌ ಅವಧಿ 10 ದಿನಗಳದ್ದು. ಇದರಲ್ಲಿ ಪ್ರತಿ ಸೋಮವಾರ (ಮೇ 31, ಜೂನ್‌ 7), ಗುರುವಾರ (ಜೂನ್‌ 3) ಮಾತ್ರ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಅಗತ್ಯ ವಸ್ತುಗಳ ವಹಿವಾಟಿಗೆ ಅವಕಾಶ ಇರಲಿದೆ.

ಬ್ಯಾಂಕ್‌ಗಳು, ಭಾರತೀಯ ಜೀವ ವಿಮಾ ನಿಗಮದ ಕಚೇರಿಗಳು ಸಹ ಈ ದಿನಗಳಂದೇ ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೂ ಮಾತ್ರ ಕಾರ್ಯ ನಿರ್ವಹಿಸಬೇಕು. ಸರಕು ಸಗಟು ವಾಹನ ಸಂಚಾರಕ್ಕೆ ಮಾತ್ರ ಅವಕಾಶವಿರಲಿದೆ. ಉಳಿದಂತೆ ಬೇರೆ ಯಾವೊಂದು ಚಟುವಟಿಕೆಗೂ, ವಾಹನ ಸಂಚಾರಕ್ಕೂ ಲಾಕ್‌ಡೌನ್‌ ಅವಧಿಯಲ್ಲಿ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸುದೀರ್ಘ ಅವಧಿ ಮುಚ್ಚಲು ಸಾಧ್ಯವಿಲ್ಲ ಎನ್ನುವಂತಹ ಕಾರ್ಖಾನೆಗಳನ್ನು ಮಾತ್ರ ತೆರೆಯಲು ಅವಕಾಶವಿರುತ್ತದೆ. ಇದನ್ನು ಹೊತರುಪಡಿಸಿದರೆ ಮೈಸೂರಿನ ಹಿತದೃಷ್ಟಿಯಿಂದ, ಸೋಂಕಿಗೆ ಕಡಿವಾಣ ಹಾಕಲಿಕ್ಕಾಗಿ ಉಳಿದ ಎಲ್ಲ ರೀತಿಯ ಕಾರ್ಖಾನೆಗಳನ್ನು ಸ್ಥಗಿತಗೊಳಿಸಬೇಕು ಎಂದು ರೋಹಿಣಿ ಸೂಚಿಸಿದರು. ಕೇಂದ್ರ–ರಾಜ್ಯ ಸರ್ಕಾರ ಹೊರಡಿಸಿರುವ ಎಲ್ಲ ಕೋವಿಡ್‌–19 ಮಾರ್ಗಸೂಚಿಗಳು ಜಾರಿಯಲ್ಲಿರುತ್ತವೆ ಎಂದು ಅವರು ಹೇಳಿದರು.

ಮೈಸೂರಿನಲ್ಲಿ ಸೋಂಕು ನಿಯಂತ್ರಿಸಲು, ಸಾವು–ನೋವಿನ ಪ್ರಮಾಣ ತಗ್ಗಿಸಲು ಇದೀಗ ಎಲ್ಲರೂ ಕೈ ಜೋಡಿಸಬೇಕಿದೆ. ಒಂದು ವಾರ ಜಿಲ್ಲಾಡಳಿತಕ್ಕೆ ಸಹಕರಿಸಿ ಎಂದು ಅವರು ಮನವಿ ಮಾಡಿಕೊಂಡರು.

ಪ್ರಸ್ತುತ ಮೈಸೂರಿನಲ್ಲಿ ನಿತ್ಯವೂ 2ಸಾವಿರದಿಂದ 2.5 ಸಾವಿರ ಪ್ರಕರಣ ದಾಖಲಾಗುತ್ತಿವೆ. ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಪರಿಣಾಮಕಾರಿಯಾಗಿಲ್ಲ. ಜನರು ಗುಂಪುಗೂಡುವುದು, ಅನಗತ್ಯವಾಗಿ ಸಂಚರಿಸುವುದು ನಿಂತಿಲ್ಲ. ಕ್ವಾರಂಟೈನ್‌ನಲ್ಲಿರಬೇಕಾದ ಸೋಂಕಿತರು ಸಹ ಮನಸೋಇಚ್ಚೆ ಹೊರಗೆ ತಿರುಗಾಡುತ್ತಿದ್ದಾರೆ. ಇದರ ಪರಿಣಾಮದಿಂದಲೇ ಸೋಂಕು ಇಳಿಮುಖಗೊಂಡಿಲ್ಲ.

ಇದೀಗ ಕಠಿಣ ಲಾಕ್‌ಡೌನ್‌ ಅನಿವಾರ್ಯವಾಗಿದೆ. ಅವಶ್ಯಕತೆ ಇದ್ದರೆ ಮಾತ್ರ ಹೊರಗೆ ಬನ್ನಿ. ಸೋಂಕು ನಿಯಂತ್ರಣಕ್ಕಾಗಿ ಸ್ವಯಂ ಪ್ರೇರಣೆಯಿಂದ ನೀವೇ ಮನೆಗಳಲ್ಲಿ ಉಳಿಯಿರಿ. ಅತ್ಯವಶ್ಯವಿರುವ ತರಕಾರಿ ಮತ್ತು ಹಾಲಿಗೆ ಅವಕಾಶವಿರಲಿದೆ. ಅನಗತ್ಯವಾಗಿ ಹೊರಗಡೆ ಬರಬೇಡಿ ಎಂದು ಮೈಸೂರಿನ ಜನರಲ್ಲಿ ರೋಹಿಣಿ ಮನವಿ ಮಾಡಿಕೊಂಡರು.

ಕಪ್ಪು ಶಿಲೀಂಧ್ರ ಸೋಂಕು: ಹತ್ತು ದಿನದಲ್ಲಿ ನಿಯಂತ್ರಣ

ಕೋವಿಡ್‌ ಜೊತೆಗೆ ಕಪ್ಪು ಶಿಲೀಂಧ್ರ ಸೋಂಕು ಸಹ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಗುರುವಾರದವರೆಗೂ 35 ಜನರಿಗೆ ಸೋಂಕು ತಗುಲಿದ್ದು, ಎಲ್ಲರೂ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸೋಂಕಿತರಲ್ಲಿ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಹಾಸಿಗೆಯ ಸಮಸ್ಯೆಯಿಲ್ಲ. ಔಷಧಿಯದ್ದೇ ಕೊರತೆಯಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ. ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅತ್ಯುತ್ತಮ. ಸೋಂಕಿನ ಲಕ್ಷಣ ಗೋಚರಿಸುತ್ತಿದ್ದಂತೆ ತಪಾಸಣೆಗೊಳಪಡಿ. ಮಿದುಳು ತಲುಪಿದ ನಂತರ ಶಸ್ತ್ರಚಿಕಿತ್ಸೆ ನಡೆಸಿದರೂ ವೈದ್ಯರು 50:50 ಎನ್ನುತ್ತಾರೆ.

ಜಿಲ್ಲೆಯಲ್ಲಿ ಸೋಂಕು ಇದೀಗ ಕೆಂಪು ವಲಯದಲ್ಲಿದೆ. 10 ದಿನದಲ್ಲಿ ನಿಯಂತ್ರಣಕ್ಕೆ ತರಲು ಕ್ರಮ ತೆಗೆದುಕೊಳ್ಳಲಾಗಿದೆ. ಮನೆ–ಮನೆ ಸಮೀಕ್ಷೆ ನಡೆಸಿ, ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೋಮಾರ್ಬಿಡಿಟಿಸ್‌ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೋವಿಡ್‌ ಸಾವಿನ ಪ್ರಮಾಣ ಕಡಿಮೆ

ರಾಜ್ಯದಲ್ಲಿನ ಕೋವಿಡ್‌ ಸಾವಿನ ಪ್ರಮಾಣಕ್ಕೆ (1.86) ಹೋಲಿಸಿದರೆ, ಜಿಲ್ಲೆಯ ಮರಣ ಪ್ರಮಾಣ ದರ (0.63) ಕಡಿಮೆಯಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಏಪ್ರಿಲ್‌ ತಿಂಗಳಿನಿಂದ ಇಲ್ಲಿಯವರೆಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 600ಕ್ಕೂ ಹೆಚ್ಚು ಆಮ್ಲಜನಕ ಸಹಿತ ಹೊಸ ಹಾಸಿಗೆಗಳನ್ನು ರೂಪಿಸಲಾಗಿದೆ. ಐಸಿಯು, ವೆಂಟಿಲೇಟರ್‌ ಸಂಖ್ಯೆಯೂ ಹೆಚ್ಚಿದೆ. ಈ ಹಿಂದೆ 25ರಿಂದ 30ರಷ್ಟಿದ್ದ ರೋಗಿಗಳ ಕಾಯುವಿಕೆ ಇದೀಗ ಹತ್ತಕ್ಕೆ ಇಳಿದಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಆರಂಭಿಸಲಾದ ಕೋವಿಡ್‌ ಮಿತ್ರದಲ್ಲಿ ಇದೂವರೆಗೂ 24 ಸಾವಿರ ಜನರು ತಪಾಸಣೆಗೊಳಪಟ್ಟಿದ್ದಾರೆ. ಎಲ್ಲರಿಗೂ ಔಷಧಿ ಕೊಡಲಾಗಿದೆ. ಮನೆ–ಮನೆ ಸಮೀಕ್ಷೆ ನಡೆಸುತ್ತಿದ್ದೇವೆ ಎಂದು ರೋಹಿಣಿ ಹೇಳಿದರು.

ಕೊರೊನಾ ಮುಕ್ತ ಮೈಸೂರಿಗೆ ಸಹಕರಿಸಿ: ಸೋಮಶೇಖರ್‌

‘ಮೈಸೂರು ಜಿಲ್ಲೆಯಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಕೊರೊನಾ ವೈರಸ್‌ ಸೋಂಕು ಹರಡುವಿಕೆ ತಹಬದಿಗೆ ಬಾರದಿದ್ದರಿಂದ ಮೇ 29ರಿಂದ ಜೂನ್ 7ರವರೆಗೆ ಕಠಿಣ ಲಾಕ್‌ಡೌನ್ ಮಾಡುವುದು ಅನಿವಾರ್ಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದ್ದಾರೆ.

‘ಜಿಲ್ಲಾಡಳಿತ ಹಾಗೂ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಆದರೂ ಸಹ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಕೈಮೀರುವ ಸಾಧ್ಯತೆಯಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕಠಿಣ ಲಾಕ್‌ಡೌನ್ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.

ಎಚ್ಚರದಿಂದಿರಿ: ‘ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಗೊಳಿಸಬೇಕು. ಈ ಅವಧಿಯಲ್ಲಿ ಜನರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸೋಮವಾರ, ಗುರುವಾರ ಕೆಲವು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಜನರು ಎಚ್ಚರದಿಂದ ಈ ದಿನಗಳಲ್ಲಿ ವಹಿವಾಟು ನಡೆಸಬೇಕು’ ಎಂದು ಸಚಿವರು ಕಿವಿಮಾತು ಹೇಳಿದ್ದಾರೆ.

‘ಹಾಲು, ಮೊಸರು, ತರಕಾರಿ ಪ್ರತಿ ದಿನವೂ ಲಭ್ಯವಾಗಲಿದೆ. ಈ ಖರೀದಿ ಪ್ರಕ್ರಿಯೆಗೆ ಜಿಲ್ಲಾಡಳಿತ ಕೆಲವು ಮಾರ್ಗಸೂಚಿ ಪ್ರಕಟಿಸಿದೆ. ವಾರದಲ್ಲಿ ಎರಡು ದಿನ ಮಾತ್ರ ಅಗತ್ಯ ವಸ್ತುಗಳಿಗೆ ಅವಕಾಶ ನೀಡಿದ್ದನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು.

ಈ ಸಂದರ್ಭದಲ್ಲಿ ಯಾರೂ ಆತಂಕಗೊಳ್ಳದೆ ಸಮಾಧಾನದಿಂದ ವಸ್ತುಗಳನ್ನು ಖರೀದಿಸಬೇಕು. ಗುಂಪುಗೂಡಬಾರದು. ಮುಗಿ ಬೀಳಬಾರದು. ಕನಿಷ್ಠ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್‌ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಸಚಿವರು ಪತ್ರಿಕಾ ಪ್ರಕಟಣೆ ಮೂಲಕ ಮೈಸೂರಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಿತ್ಯವೂ ಯಾವ್ಯಾವುದಕ್ಕೆ ಅವಕಾಶ

ಹಾಲಿನ ಬೂತ್‌

ವೈದ್ಯಕೀಯ ಸೇವೆ

ಹಾಪ್‌ಕಾಮ್ಸ್‌ನ ಹಣ್ಣು–ತರಕಾರಿ ಅಂಗಡಿ

ನ್ಯಾಯಬೆಲೆ ಅಂಗಡಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT