ಬುಧವಾರ, ಜೂನ್ 23, 2021
22 °C
ಕೊರೊನಾ ಸೇನಾನಿ ಆತ್ಮಹತ್ಯೆ; ಸಚಿವ ಸುಧಾಕರ್‌ಗೆ ತರಾಟೆ

ಇಂದಿನಿಂದ ಸರ್ಕಾರಿ ವೈದ್ಯರ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಂಜನಗೂಡು ಪ್ರಭಾರ ತಾಲ್ಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಆತ್ಮಹತ್ಯೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ಕುಮಾರ್‌ ಮಿಶ್ರಾ ಅವರೇ ಕಾರಣ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಆ. 21ರಿಂದಲೇ ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮುಷ್ಕರಕ್ಕೆ ಕರೆ ನೀಡಿದೆ.

‘ಆ. 23ರಂದು ಸಂಘದ ತುರ್ತು ಸಭೆ ನಡೆಯಲಿದ್ದು, 24ರಿಂದಲೇ ರಾಜ್ಯಾದ್ಯಂತ ಮುಷ್ಕರ ನಡೆಸುವ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಶ್ರೀನಿವಾಸ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಇಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಮುಂದೆ ಇರಿಸಲಾಗಿದ್ದ ಡಾ.ನಾಗೇಂದ್ರ ಅವರ ‌ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಚಿವ ಡಾ.ಸುಧಾಕರ್, ನಾಗೇಂದ್ರ ಅವರ ಕುಟುಂಬಸ್ಥರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಈ ವೇಳೆ ಸಂಘದ ಪದಾಧಿಕಾರಿಗಳಿಗೆ ಪ್ರವೇಶ ನೀಡಲಿಲ್ಲ. ಇದರಿಂದ ಕೋಪಗೊಂಡ ವೈದ್ಯರು ಮುಷ್ಕರಕ್ಕೆ ಕರೆ ನೀಡಿದರು.

‘ನಿಮ್ಮ ದುಡ್ಡು ಬೇಡ, ನಮಗೆ ನಾಗೇಂದ್ರ ಬೇಕು’

ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಚಿವ ಸುಧಾಕರ್ ಬರುತ್ತಿದ್ದಂತೆ ವೈದ್ಯರ ಆಕ್ರೋಶದ ಕಟ್ಟೆಯೊಡೆಯಿತು. ಡಾ.ಕಲಾವತಿ ಅವರು ಸಚಿವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ನಮಗೆ ನಿಮ್ಮ ನಮಸ್ಕಾರ ಬೇಕಿಲ್ಲ, ಸರ್ಕಾರ ಬೇಕಿಲ್ಲ, ₹ 30 ಲಕ್ಷ ಬೇಕಿಲ್ಲ. ನಮಗೆ ನಮ್ಮ ನಾಗೇಂದ್ರ ಬೇಕು. ಕೊಡಿಸ್ತೀರಾ’ ಎಂದು ಭಾವೋದ್ವೇಗದಿಂದ ಕೇಳಿದರು. ‘ಶವಕ್ಕೆ ಹಾರ ಹಾಕಿ, ಥೂ ನಿಮ್ಮ ಯೋಗ್ಯತೆಗೆ ಬೆಂಕಿ ಹಾಕ’ ಎಂದು ಕಣ್ಣೀರು ಸುರಿಸಿದರು.

ಇವರ ಆಕ್ರೋಶದ ಮಾತುಗಳಿಗೆ ಸುಧಾಕರ್‌ ನಿರುತ್ತರರಾದರು. ಎಲ್ಲ ವೈದ್ಯರೂ ಸಾಮೂಹಿಕವಾಗಿ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು