ವಿದ್ಯಾರ್ಥಿನಿ ಸಾವು; ನಿಷ್ಪಕ್ಷಪಾತ ತನಿಖೆಯಾಗಲಿ

ಶುಕ್ರವಾರ, ಮೇ 24, 2019
28 °C
ನಗರದಲ್ಲಿ ವಿವಿಧ ಸಂಘಟನೆಗಳಿಂದ ಆಕ್ರೋಶ, ಪ್ರತಿಭಟನೆ

ವಿದ್ಯಾರ್ಥಿನಿ ಸಾವು; ನಿಷ್ಪಕ್ಷಪಾತ ತನಿಖೆಯಾಗಲಿ

Published:
Updated:
Prajavani

ಮೈಸೂರು: ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅವರ ನಿಗೂಢ ಸಾವನ್ನು ಖಂಡಿಸಿ ನಗರದಲ್ಲಿ ಪ್ರತ್ಯೇಕವಾಗಿ 2 ಪ್ರತಿಭಟನೆಗಳು ಸೋಮವಾರ ನಡೆದವು. ‘ಈ ಸಾವು ನ್ಯಾಯವೇ?‌’ ಎಂಬ ಪ್ರಶ್ನೆಯನ್ನು ಕಾರ್ಯಕರ್ತರು ಸರ್ಕಾರವನ್ನು ಕೇಳುವ ಮೂಲಕ ಮತ್ತೆ ಇಂತಹ ಸಾವು ಸಂಭವಿಸದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌), ಆಲ್‌ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆನ್ಸ್ ಆರ್ಗನೈಜೇಷನ್ (ಎಐಡಿಎಸ್‌ಒ), ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್ (ಎಐಡಿವೈಒ) ಹಾಗೂ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯರು ಇಲ್ಲಿನ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ರಾಯಚೂರಿನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯ ಸಾವು ತೀವ್ರವಾದ ಅನುಮಾನಕ್ಕೆ ಎಡೆಮಾಡಿದೆ. ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ. ಕಿಡಿಗೇಡಿಗಳು ಅವಿರತವಾಗಿ ಅವರನ್ನು ಶೋಷಿಸುತ್ತಿದ್ದಾರೆ. ಬಹಳಷ್ಟು ಹೆಣ್ಣು ಮಕ್ಕಳ ಸಾವುಗಳು ಮುಚ್ಚಿ ಹೋಗುತ್ತಿವೆ. ದೌರ್ಜನ್ಯದಿಂದ ಸಾವನ್ನಪ್ಪಿದ ಸ್ತ್ರೀಯ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರು ಆಗ್ರಹಿಸಿದರು.

ಮೇಣದಬತ್ತಿಯನ್ನು ಹೊತ್ತಿಸಿ ರಾಮಸ್ವಾಮಿ ವೃತ್ತದಲ್ಲಿ ಒಂದು ಸುತ್ತು ಮೆರವಣಿಗೆ ನಡೆಸಿದರು. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಮಹಿಳೆಯರ ಮೇಲೆ ನಡೆಯುವ ಶೋಷಣೆಯನ್ನು ತಡೆಗಟ್ಟಬೇಕು ಎಂದು ಅವರು ಒತ್ತಾಯಿಸಿದರು.

ಎಐಎಂಎಸ್‌ಎಸ್‌ ಸಂಘಟನೆಯಿಂದ ಸಂಧ್ಯಾ, ಸೀಮಾ, ಎಐಡಿಎಸ್‌ಒನಿಂದ ಆಕಾಶ್, ಎಐಡಿವೈಒನಿಂದ ಹರೀಶ್, ಸುನಿಲ್ ಹಾಗೂ ಸುಮಾ ಸೇರಿದಂತೆ ನೂರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾದರು.

ನ್ಯಾಯಾಲಯದ ಎದುರು ಪ್ರತಿಭಟನೆ

ರಾಯಚೂರು ನಗರದ ಎಂಜಿನಿಯರಿಂಗ್ ವಿದ್ಯಾರ್ಥಿನಿ  ಸಾವನ್ನು ಖಂಡಿಸಿ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಮುಂಭಾಗ ಗಂಧದ ಗುಡಿ ಫೌಂಡೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ಸಾವಿನ ಹಿಂದೆ ಇರುವವರನ್ನು ಕೂಡಲೇ ಬಂಧಿಸಬೇಕು. ಈ ಪ್ರಕರಣವು ಇತರ ಪ್ರಕರಣಗಳಂತೆ ಮುಚ್ಚಿ ಹೋಗಬಾರದು ಎಂದು ಅವರು ಆಗ್ರಹಿಸಿದರು.

ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು. ಇದಕ್ಕೆ ಪೂರಕವಾಗಿ ಕಠಿಣ ಕಾನೂನುಗಳನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಫೌಂಡೇಷನ್‍ನ ಪದಾಧಿಕಾರಿಗಳಾದ ಆರ್ಯನ್, ನಯನಗೌಡ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !