ಮಂಗಳವಾರ, ಜೂನ್ 22, 2021
28 °C
ಭಯದ ಗೂಡಾದ ಹಾಸ್ಟೆಲ್, ಪೊಲೀಸರಿಗೂ ಸವಾಲಾದ ಪ್ರಕರಣ

ನರ್ಸಿಂಗ್ ವಿದ್ಯಾರ್ಥಿನಿಲಯದಲ್ಲಿ ಉಳಿದವರು 9 ಮಂದಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖಿಲ ಭಾರತ ಮಹಿಳಾ ಸಾಂಸ್ಕೃತಿ ಸಂಘಟನೆ (ಎಐಎಂಎಸ್ಎಸ್) ನೇತೃತ್ವದಲ್ಲಿ ಕೆ.ಆರ್.ಆಸ್ಪತ್ರೆಯ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು

ಮೈಸೂರು: ನಗರದ ಕೆ.ಆರ್.ಆಸ್ಪತ್ರೆಯ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರು ಸೈಕೊ ವ್ಯಕ್ತಿಯೊಬ್ಬನ ಕಾಟಕ್ಕೆ ಹೆದರಿ ಹಾಸ್ಟೆಲ್‌ ತೊರೆದು ಮನೆ ಸೇರುತ್ತಿದ್ದಾರೆ. 150 ವಿದ್ಯಾರ್ಥಿನಿಯರ ಪೈಕಿ 141 ಮಂದಿ ಮಂಗಳವಾರ ಹಾಸ್ಟೆಲ್ ತೊರೆದಿದ್ದಾರೆ. ಇದು ಕಾಲೇಜು ಆಡಳಿತ ಮಂಡಳಿಗೆ ಮುಜುಗರ ತಂದೊಡ್ಡಿದೆ.

ಮುಂದಿನ ವಾರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ನಂತರ ತೆರಳುವಂತೆ ಕಾಲೇಜು ಪ್ರಾಂಶುಪಾಲರು ಹಾಗೂ ನಿರ್ದೇಶಕರು ಮಾಡಿದ ಮನವಿಗೂ ಓಗೊಡದೆ ಹಾಸ್ಟೆಲ್‌ ಬಿಡುತ್ತಿದ್ದಾರೆ.

ಶನಿವಾರ ಹಾಸ್ಟೆಲ್‌ ಪ್ರವೇಶಿಸಿದ ವ್ಯಕ್ತಿಯೊಬ್ಬ, ವಿದ್ಯಾರ್ಥಿನಿಯೊಬ್ಬರ ಮೊಬೈಲ್ ಕಸಿದು ಪರಾರಿಯಾಗಿದ್ದ. ನಂತರ, ಸಿ.ಸಿ ಟಿ.ವಿ ಪರಿಶೀಲಿಸಿದಾಗ ವಿದ್ಯಾರ್ಥಿನಿಯರು ಒಣಗಿ ಹಾಕಿದ್ದ ಬಟ್ಟೆಗಳನ್ನು ಮೈಗೆ ಉಜ್ಜಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ನಂತರ, ಪದೇ ಪದೇ ಕಿಟಕಿಗೆ ಕಲ್ಲು ಹೊಡೆಯುವ ಪ್ರಕರಣಗಳು ಹೆಚ್ಚಾದವು. ಇದರಿಂದ ಭೀತಿಗೆ ಒಳಗಾದ ವಿದ್ಯಾರ್ಥಿನಿಯರು ಪ್ರತಿಭಟನೆಯ ಹಾದಿ ತುಳಿದರು.

ಶಾಸಕ ನಾಗೇಂದ್ರ, ಎಸಿಪಿ ಗಜೇಂದ್ರಪ್ರಸಾದ್ ಅವರು ಹಾಸ್ಟೆಲ್‌ಗೆ ಭೇಟಿ ನೀಡಿ ರಕ್ಷಣೆಯ ಭರವಸೆ ನೀಡಿದರು. ಒಟ್ಟು 9 ಮಂದಿ ಪೊಲೀಸರನ್ನು ರಕ್ಷಣೆಗೆ ನಿಯೋಜಿಸಲಾಯಿತು. ಆದರೂ, ಸಮಾಧಾನಗೊಳ್ಳದ ವಿದ್ಯಾರ್ಥಿನಿಯರು ತಮ್ಮ ಪೋಷಕರನ್ನು ಕರೆಸಿಕೊಂಡು ಹಾಸ್ಟೆಲ್ ತೊರೆಯುತ್ತಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನೇತೃತ್ವದಲ್ಲಿ ಪೋಷಕರೊಂದಿಗೆ ಸಭೆ ನಡೆಯಿತು. ಪದೇ ಪದೇ ಕಲ್ಲು ಬೀಳುತ್ತವೆ, ಯಾರೋ ಕಿಟಕಿಗೆ ಹೊಡೆಯುತ್ತಾರೆ. ಸೂಕ್ತ ಭದ್ರತೆ ಕಲ್ಪಿಸದ ಹೊರತು ಹಾಸ್ಟೆಲ್‌ನಲ್ಲಿ ತಂಗುವುದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆ.ಆರ್.ಆಸ್ಪತ್ರೆ ಸ್ಥಾನೀಕ ವೈದ್ಯಾಧಿಕಾರಿ ರಾಜೇಶ್, ಕಲ್ಲುಗಳನ್ನು ತೋರಿಸಿ ಎಂದರು. ಆದರೆ, ಯಾವೊಬ್ಬ ವಿದ್ಯಾರ್ಥಿನಿಯೂ ಕಲ್ಲುಗಳನ್ನು ತೋರಿಸಲಿಲ್ಲ.

ಶನಿವಾರ ವ್ಯಕ್ತಿಯೊಬ್ಬ ನುಗ್ಗಿದ್ದು ನಿಜ. ಆತನ ಚಹರೆ ಸಿ.ಸಿ. ಟಿ.ವಿಯಲ್ಲಿ ದಾಖಲಾಗಿದೆ. ನಂತರದ ದಿನಗಳ ಸಿ.ಸಿ ಟಿ.ವಿಯಲ್ಲಿ ಯಾವೊಬ್ಬ ವ್ಯಕ್ತಿಯ ಚಿತ್ರವು ದಾಖಲಾಗಿಲ್ಲ. ಆಗಸ್ಟ್ 3ಕ್ಕೆ ಪರೀಕ್ಷೆ ಇದೆ. ಅಲ್ಲಿಯವರೆಗೂ ಬಿಗಿಭದ್ರತೆ ಒದಗಿಸಲಾಗುವುದು ಎಂದು ಸಮಾಧಾನಪಡಿಸಲು ಯತ್ನಿಸಿದರೂ ಪೋಷಕರು ಕೇಳಲಿಲ್ಲ.‌

ಇಡೀ ಹಾಸ್ಟೆಲ್‌ಗೆ ಕಬ್ಬಿಣದ ಗ್ರಿಲ್ ಅಳವಡಿಸುವವರೆಗೂ ಬರುವುದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದರು. ಒಂದೆರಡು ದಿನಗಳಲ್ಲಿ ಕಬ್ಬಿಣದ ಗ್ರಿಲ್ ಅಳವಡಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಅಲ್ಲಿಯವರೆಗೂ ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸಿಕೊಡಲು ಸ್ಥಾನೀಕ ವೈದ್ಯಾಧಿಕಾರಿ ಒಪ್ಪಿದರು. 150 ಜನರ ಪೈಕಿ 141 ಮಂದಿ ಹಾಸ್ಟೆಲ್ ತೊರೆದರು. ಸದ್ಯ, ಇರುವ 9 ವಿದ್ಯಾರ್ಥಿನಿಯರ ಬಳಿ ಇಬ್ಬರು ಉಪನ್ಯಾಸಕಿಯರು, ಮೂವರು ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹಾಸ್ಟೆಲ್‌ನ ಹೊರಗೂ ಬಿಗಿಭದ್ರತೆ ಕಲ್ಪಿಸಲಾಗಿದೆ.

ಇದಕ್ಕೂ ಮುನ್ನ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರ ಗಮನ ಸೆಳೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು