ಶುಕ್ರವಾರ, ನವೆಂಬರ್ 22, 2019
26 °C
ಸಮಯಕ್ಕೆ ಸರಿಯಾಗಿ ಬಾರದ ಬಸ್‌ಗಳು, ರಸ್ತೆ ತಡೆ ನಡೆಸಿದ ಶಾಲಾ ಮಕ್ಕಳು

ಠಾಣೆಗೆ ಬಸ್ಸನ್ನೇ ಕರೆತಂದ ವಿದ್ಯಾರ್ಥಿಗಳು

Published:
Updated:
Prajavani

ಹುಣಸೂರು: ಕೆಎಸ್‌ಆರ್‌ಟಿಸಿ ಬಸ್‌ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂದು ಆರೋಪಿಸಿ ರಸ್ತೆ ತಡೆ ನಡೆಸಿದ ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮದ ವಿದ್ಯಾರ್ಥಿಗಳು, ಸಾರಿಗೆ ಬಸ್‌ ಅನ್ನು ಗ್ರಾಮೀಣ ಪೊಲೀಸ್ ಠಾಣೆವರೆಗೂ ಕರೆತಂದು ಪೊಲೀಸರ ಎದುರು ತಮ್ಮ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು.

ಗ್ರಾಮೀಣ ಭಾಗದ ಅನೇಕ ಹಳ್ಳಿಗಳಿಗೆ ಸರಿಯಾದ ಬಸ್‌ ಸೌಕರ್ಯವಿಲ್ಲ. ಬಸ್‌ಗಳು ನಿಗದಿತ ಸಮಯಕ್ಕೆ ಬರುವುದೇ ಇಲ್ಲ. ಶಾಲಾ– ಕಾಲೇಜುಗಳಿಗೆ ಸಕಾಲಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಬಸ್‌ ಡಿಪೊ ವ್ಯವಸ್ಥಾಪಕರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

8ನೇ ತರಗತಿ ವಿದ್ಯಾರ್ಥಿ ಪ್ರಶಾಂತ್ ಮಾತನಾಡಿ, ‘ಸಾರಿಗೆ ಬಸ್‌ಗಳು ಬೆಳಿಗ್ಗೆ 7ರಿಂದ 10ರವರೆಗೆ ಸರಿಯಾದ ಸಮಯಕ್ಕೆ ಬರಬೇಕು. ಆದರೆ, ಒಂದೂ ಬಸ್‌ ನಿಗದಿತ ಸಮಯಕ್ಕೆ ಬರುತ್ತಿಲ್ಲ. ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಾಜರಾತಿ ಸಮಸ್ಯೆ ಆಗುತ್ತಿದೆ. ಶಿಕ್ಷಕರಿಂದ ಪ್ರತಿದಿನ ಬೈಯಿಸಿಕೊಳ್ಳಬೇಕು. ಶಾಲೆಗೆ ಹೋಗಲು ಭಯವಾಗುತ್ತದೆ’ ಎಂದು ಅಳಲು ತೋಡಿಕೊಂಡ.

ಬಸ್‌ಗಳನ್ನು ನಿಯಮಿತವಾಗಿ ಓಡಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ.

ಠಾಣೆಗೆ ಬಂದ ಹುಣಸೂರು ಡಿಪೊ ವ್ಯವಸ್ಥಾಪಕ ವಿಪಿನ್ ಕೃಷ್ಣ, ‘ಹುಣಸೂರು– ಕೆ.ಆರ್‌.ನಗರ ಮುಖ್ಯರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಹೀಗಾಗಿ, ಈ ಮಾರ್ಗದಲ್ಲಿ ಬಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಶಾಲಾ ಸಮಯದಲ್ಲಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಕೆಲ ತಾಂತ್ರಿಕ ಸಮಸ್ಯೆಯಿಂದ ಬಸ್‌ಗಳ ಸಂಚಾರದಲ್ಲಿ ವಿಳಂಬವಾಗಿದೆ’ ಎಂದು ಸ್ಪಷ್ಟಪಡಿಸಿದರು.

ಸಾಮಾನ್ಯವಾಗಿ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಸ್‌ಗಳು ಸಂಚಾರ ಮಾಡುತ್ತಿವೆ. ಆದರೆ, ಬೆಳಿಗ್ಗೆ 8ರಿಂದ 10 ಗಂಟೆ ಬಳಿಕ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ. ಇದರಿಂದ ನಷ್ಟ ಹೆಚ್ಚಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)