ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಸಿಡಿದೆದ್ದ ವಸತಿನಿಲಯ ವಿದ್ಯಾರ್ಥಿನಿಯರು

ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ
Last Updated 30 ಏಪ್ರಿಲ್ 2019, 10:15 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಭೋಗಾದಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಕಳೆದೊಂದು ವಾರದಿಂದ ನೀರು ಬರುತ್ತಿಲ್ಲ ಹಾಗೂ ಮೂಲಸೌಕರ್ಯಗಳ ಕೊರತೆ ಇದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಹಾಸ್ಟೆಲ್ ಮುಂಭಾಗದ ರಸ್ತೆ ತಡೆದ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಾಸ್ಟೆಲ್‌ನ ನಲ್ಲಿಗಳಲ್ಲಿ ನೀರು ಬಂದು ಒಂದು ವಾರ ಕಳೆದಿದೆ. ಆದರೂ, ಅಧಿಕಾರಿಗಳು ಈ ಕುರಿತು ಸ್ಪಂದಿಸಿಲ್ಲ. ನೀರಿಗಾಗಿ ಪಕ್ಕದ ಹಾಸ್ಟೆಲ್‌ಗೆ ಹೋಗಬೇಕಿದೆ ಎಂದು ಅವರು ಕಿಡಿಕಾರಿದರು.‌

ಒಂದು ಕಡೆ ನೀರಿನ ಸಮಸ್ಯೆಯಾದರೆ ಮತ್ತೊಂದು ಕಡೆ ಊಟದ ಸಮಸ್ಯೆ ಕಾಡುತ್ತಿದೆ. ಮೆನುವಿನ ಪ್ರಕಾರ ಊಟ ಮತ್ತು ತಿಂಡಿಯನ್ನು ನೀಡುತ್ತಿಲ್ಲ. ಅಡುಗೆಯವರನ್ನು ಕೇಳಿದರೆ ವಾರ್ಡನ್ ಆಹಾರ ಪದಾರ್ಥ ನೀಡಿಲ್ಲ ಎನ್ನುತ್ತಾರೆ. ವಾರ್ಡನ್‌ ಅವರನ್ನು ಕೇಳಿದರೆ ಅಡುಗೆಯವರಿಗೆ ಆಹಾರ ಪದಾರ್ಥ ನೀಡಲಾಗಿದೆ ಎಂದು ಹೇಳುತ್ತಾರೆ. ಆಹಾರ ಪದಾರ್ಥಗಳನ್ನು ಯಾರು ಯಾರಿಗೆ ನೀಡಿದ್ದಾರೆಯೋ ಗೊತ್ತಿಲ್ಲ. ಆದರೆ, ನಮಗಂತೂ ಮೆನು ಪ್ರಕಾರ ಊಟ ಸಿಗುತ್ತಿಲ್ಲ ಎಂದು ದೂರಿದರು.

ಕುಡಿಯುವ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಿಲ್ಲ. ಕಲುಷಿತ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ಇದೆ. ಇದರಿಂದ ರೋಗರುಜಿನಗಳ ಭೀತಿ ಮೂಡಿದೆ ಎಂದು ಹೇಳಿದರು.

ಹಾಸ್ಟೆಲ್‌ನಲ್ಲಿ ಒಟ್ಟು 150 ವಿದ್ಯಾರ್ಥಿನಿಯರು ಇದ್ದಾರೆ. ಅಡುಗೆ ಸಿಬ್ಬಂದಿ ವಿದ್ಯಾರ್ಥಿನಿಯರನ್ನು ನಿಂದಿಸುತ್ತಾರೆ. ಸರಿಯಾದ ಊಟ ಕೊಡಿ ಎಂದು ಕೇಳಿದರೆ, ‘ನೀವು ತಿನ್ನುವುದಕ್ಕೆ ಎಂದೇ ಹಾಸ್ಟೆಲ್‌ಗಳಿಗೆ ಬರುತ್ತೀರಾ’ ಎಂದು ಜರಿಯುತ್ತಾರೆ. ಇದರಿಂದ ನಮಗೆ ಮಾನಸಿಕ ಕಿರುಕುಳ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಬಿಂದ್ಯಾ ಮತ್ತು ಸಹಾಯಕ ನಿರ್ದೇಶಕ ಗುರುಶಾಂತಪ್ಪ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.

‘ಕಟ್ಟಡವನ್ನು ಬಾಡಿಗೆಗೆ ನೀಡಿರುವ ಮಾಲೀಕರು ನೀರನ್ನು ನೀಡುತ್ತಿಲ್ಲ. ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತಿತ್ತು. ಇದರಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರಿಂದ ನೀರಿನ ಸಮಸ್ಯೆ ತಲೆದೋರಿದೆ. ಸದ್ಯ, ಬೇರೆ ಕಟ್ಟಡಕ್ಕೆ ಹಾಸ್ಟೆಲ್‌ನ್ನು ಸ್ಥಳಾಂತರ ಮಾಡಲಾಗುವುದು’ ಎಂದು ಗುರುಶಾಂತಪ್ಪ ಭರವಸೆ ನೀಡಿದ ಬಳಿಕ ವಿದ್ಯಾರ್ಥಿನಿಯರು ಪ್ರತಿಭಟನೆಯನ್ನು ವಾಪಸ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT